ಹೈದರಾಬಾದ್: ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆ ತಾರಕ್ಕೇರಿ, ಹೊಡೆದಾಟ ನಡೆದ ಪ್ರಕರಣದಲ್ಲಿ ಎಂಟು ಮಂದಿ ಪೊಲೀಸರು ಸೇರಿದಂತೆ 19 ಜನರು ಗಾಯಗೊಂಡಿದ್ದಾರೆ. 13 ಮನೆಗಳಿಗೆ ಬೆಂಕಿ ಹಚ್ಚಿದ್ದು, 26 ವಾಹನಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ತೆಲಂಗಾಣದ ಆದಿಲಾಬಾದ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಸೋಮವಾರವಾರವೂ ಅದಿಲಾಬಾದ್ ಪ್ರದೇಶದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಬುಧವಾರದವರೆಗೆ ಜನರು ಗುಂಪುಗೂಡುವುದಕ್ಕೆ ನಿಷೇಧ ಹೇರಲಾಗಿದೆ. ಅದಿಲಾಬಾದ್ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ವರದಿ ವಿವರಿಸಿದೆ.
ಭಾನುವಾರ ರಾತ್ರಿ ಅದಿಲಾಬಾದ್ ನ ಭಾಯಿನ್ಸಾ ಪ್ರದೇಶದಲ್ಲಿ ಕೆಲವು ಯುವಕರು ಬೈಕ್ ಸೈಲೆನ್ಸರ್ ತೆಗೆದು ವಿಪರೀತ ಶಬ್ದ ಮಾಡುತ್ತಿರುವುದನ್ನು ಕೇಳಿ ಕೆಲವು ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗೆ ಶುರುವಾದ ವಾಗ್ವಾದ ಘರ್ಷಣೆಗೆ ತಿರುಗುತ್ತಲೇ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿರುವುದಾಗಿ ವರದಿ ತಿಳಿಸಿದೆ.
ಎರಡು ಕಡೆಯಿಂದಲೂ ಕಲ್ಲು ತೂರಾಟ ಆರಂಭವಾಗುವ ಮೂಲಕ ಹಿಂಸಾಚಾರ ಭುಗಿಲೆದ್ದಿತ್ತು. ಘಟನಾ ಸ್ಥಳಕ್ಕೆ ಭಾರೀ ಪ್ರಮಾಣದಲ್ಲಿ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಟ್ಟಿದ್ದರು. ಕೆಲವು ಭಾಗದಲ್ಲಿ ಸೋಮವಾರವೂ ಹಿಂಸಾಚಾರ ಮುಂದುವರಿದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ 60 ಜನರನ್ನು ವಶಕ್ಕೆ ತೆಗೆದುಕೊಂಡಿದ್ದು, ಆರು ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಅದಿಲಾಬಾದ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಫೂಟೇಜ್ ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಹೇಳಿದೆ.