ತೆಲಂಗಾಣದಲ್ಲಿ ಪ್ರಿಯಾಂಕ ಎಂಬ ಪಶುವೈದ್ಯೆಯನ್ನು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಸುಟ್ಟು ಕೊಂದಿರುವ ಪೈಶಾಚಿಕ ಘಟನೆ ಮತ್ತೂಮ್ಮೆ ದೇಶದ ಮನಸ್ಸಾಕ್ಷಿಯನ್ನು ಕಲಕಿದೆ. ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ರಾಕ್ಷಸರನ್ನು ಗಲ್ಲಿಗೇರಿಸಿ, ಎನ್‌ಕೌಂಟರ್ ಮಾಡಿ ಎಂಬಿತ್ಯಾದಿ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ. ಮಹಿಳೆಯರ ಸುರಕ್ಷತೆಯ ಕುರಿತಾದ ಚರ್ಚೆಗಳು ಮತ್ತೂಮ್ಮೆ ಮುನ್ನೆಲೆಗೆ ಬಂದಿವೆ. ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ, ಮೊಂಬತ್ತಿ ಉರಿಸುವುದು, ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಹೊರ ಹಾಕುವುದು… ಹೀಗೆ ಅವೇ ದೃಶ್ಯಗಳು ಪುನರಾವ ರ್ತಿಸುತ್ತಿವೆ. ಏಳು ವರ್ಷದ ಹಿಂದೆ ದಿಲ್ಲಿಯಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಬರ್ಬರವಾಗಿ ಅತ್ಯಾಚಾರ ಎಸಗಿದ ಘಟನೆಯ ಬಳಿಕ ಈ ಮಾದರಿಯ ಘಟನೆಗಳು – ಪ್ರತಿಭಟನೆಗಳು ನಡೆಯುತ್ತಲೇ ಇವೆ. ನಿರ್ಭಯಾಳಿಂದ ಹಿಡಿದು ಪ್ರಿಯಾಂಕ ತನಕ ಪ್ರತಿ ಸಲ ಕ್ರೌರ್ಯದ ಪರಮಾವಧಿ ಮೆರೆದಾಗ ತಪ್ಪಿತಸ್ಥರಿಗೆ ಹಾಗಾಗಬೇಕು, ಹೀಗಾಗಬೇಕು ಎಂಬ ಕೂಗು ತಾರಕ್ಕೇರುತ್ತದೆ. ಆದರೆ ಇಂದಿನ ತನಕ ಪರಿಸ್ಥಿತಿಯಲ್ಲಿ ಮಾತ್ರ ಯಾವ ಬದಲಾವಣೆ ಆಗಿಲ್ಲ ಎನ್ನುವುದು ಕಟು ವಾಸ್ತವ.
ನಿರ್ಭಯಾ ಪ್ರಕರಣ ಉಂಟು ಮಾಡಿದ ಪರಿಣಾಮ ಅಗಾಧವಾಗಿತ್ತು. ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ಮಾಡುವ ಬದಲಾವಣೆಗೆ ಈ ಪ್ರಕರಣ ಕಾರಣವಾಯಿತು. ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸುವ ಕಾನೂನು ಜಾರಿಗೆ ತರಲಾಯಿತು. ಅತ್ಯಾಚಾರ ಪ್ರಕರಣದಲ್ಲಿ ಒಳಗೊಂಡ ಬಾಲಾಪರಾಧಿಗಳ ಪ್ರಾಯ ಮಿತಿಯನ್ನು ಕಡಿಮೆಗೊಳಿಸಲಾಯಿತು. ಪ್ರತ್ಯೇಕ ನಿಧಿ ಸ್ಥಾಪನೆಯಿಂದ ತೊಡಗಿ ಮಹಿಳೆಯರ ಸುರಕ್ಷೆಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಯಿತು. ಆದರ ಹೊರತಾಗಿಯೂ ಅತ್ಯಾಚಾರಗಳ ಸಂಖ್ಯೆಯೇನೂ ಕಡಿಮೆಯಾಗಲಿಲ್ಲ. ಪ್ರಿಯಾಂಕ ಘಟನೆ ಸಂಭವಿಸಿದ ಬೆನ್ನಿಗೆ ಈ ಮಾದರಿಯ ಇನ್ನೂ ಎರಡು ಘಟನೆಗಳು ಸಂಭವಿಸಿರುವುದು ಬರೀ ಕಾನೂನುಗಳಿಂದ ಮಾತ್ರ ಇಂಥ ಕೃತ್ಯಗಳನ್ನು ನಿಯಂತ್ರಿಸಲು ಅಸಾಧ್ಯ ಎನ್ನುವುದಕ್ಕೆ ಸಾಕ್ಷಿ.
ಕಾನೂನು ರಚನೆಯಾದರೆ ಸಾಲದು ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ನಿರ್ಭಯಾ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಮರಣ ದಂಡನೆಯನ್ನೇನೂ ವಿಧಿಸಲಾಗಿದೆ. ಆದರೆ ಶಿಕ್ಷೆ ಇನ್ನೂ ಜಾರಿಯಾಗಿಲ್ಲ. ಅನಂತರವೂ ಇದೇ ಮಾದರಿಯ ಹಲವು ಪ್ರಕರಣಗಳು ನಡೆದಿದ್ದು ಯಾವ ಪ್ರಕರಣದಲ್ಲಿಯೂ ಗಲ್ಲು ಶಿಕ್ಷೆಯಾದದ್ದಿಲ್ಲ. ಈ ವಿಚಾರದಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆ ವಾಸ್ತವ ಪರಿಸ್ಥಿತಿಗೆ ಇನ್ನಷ್ಟು ಕ್ಷಿಪ್ರವಾಗಿ ಪ್ರತಿಸ್ಪಂದಿಸುವ ಗುಣ ಬೆಳೆಸಿಕೊಳ್ಳುವ ಅಗತ್ಯವಿದೆ.
ಅತ್ಯಾಚಾರದಂಥ ಪ್ರಕರಣಗಳು ಹೀಗೆ ವರ್ಷಾನುಗಟ್ಟಲೆ ನ್ಯಾಯಾಲಯದಲ್ಲಿ ಕೊಳೆತರೆ ದುಷ್ಕರ್ಮಿಗಳಲ್ಲಿ ಕಾನೂನಿನ ಭಯ ಹುಟ್ಟಿಕೊಳ್ಳುವುದಾದರೂ ಹೇಗೆ? ಹೆಚ್ಚೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಸಾಮಾಜಿಕ ಬದುಕಿಗೆ ಬರುತ್ತಿದ್ದಾರೆ. ಉದ್ಯೋಗಕ್ಕೆ, ಶಿಕ್ಷಣಕ್ಕೆ ತೆರಳುವ ಮಹಿಳೆಯರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಆದರೆ ಅತ್ಯಾಚಾರದಂಥ ಘಟನೆಗಳು ನಮ್ಮ ಸಮಾಜ ಮಹಿಳೆಯರಿಗೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನು ಪದೇ ಪದೆ ಎತ್ತುತ್ತಿದೆ. ನಗರ ಪ್ರದೇಶಗಳಲ್ಲಿ ಕೂಡ ಮಹಿಳೆ ನಿರ್ಭಯವಾಗಿ ಓಡಾಡಲು ಸಾಧ್ಯವಿಲ್ಲ ಎನ್ನುವುದು ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಸಂಗತಿ. ಇಂಥ ಘಟನೆಗಳು ಸಂಭವಿಸಿದಾಗ ಪೊಲೀಸರ ವರ್ತನೆ ಇನ್ನಷ್ಟು ಸಂವೇದನಾಶೀಲವಾಗಿರುವುದು ಅಪೇಕ್ಷಣೀಯ. ದೂರು ದಾಖಲಿಸಲು ಬಂದರೆ ನಮ್ಮ ವ್ಯಾಪ್ತಿ ಅಲ್ಲ ಎಂದು ಠಾಣೆಯಿಂದ ಠಾಣೆಗೆ ಅಲೆದಾಡಿಸುವುದು, ನಾಪತ್ತೆ ದೂರು ನೀಡ ಹೋದರೆ 48 ತಾಸು ಕಾದು ನೋಡಿ, ಆಗಲೂ ಬರದಿದ್ದರೆ ದೂರು ದಾಖಲಿಸಿ ಎಂದೆಲ್ಲ ಹೇಳುವಂಥ ಸಂವೇದನಾರಹಿತ ಧೋರಣೆಯೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಲು ಕಾರಣ.
ಮಹಿಳಾ ಸುರಕ್ಷತೆ ಎನ್ನುವುದು ಬರೀ ಪೊಲೀಸ್ ರಕ್ಷಣೆಗೆ ಸಂಬಂಧಿಸಿದ ವಿಚಾರವಲ್ಲ. ಮಹಿಳೆಯರ ಕುರಿತಾದ ಸಮಾಜದ ಚಿಂತನಾಕ್ರಮ ಬದಲಾಗಬೇಕು. ಸಮಾಜದಲ್ಲಿ ಹೆಣ್ಣಿಗೂ ಪುರುಷರಷ್ಟೇ ಸಮಾನ ಅಧಿಕಾರ ಇರುವುದನ್ನು ಖಾತರಿಪಡಿಸುವುದು ಸರಕಾರದ ಕರ್ತವ್ಯ. ಒಂಟಿ ಹೆಣ್ಣು ಸುಲಭದ ತುತ್ತು ಎಂಬ ಮನೋಧರ್ಮ ಬದಲಾಯಿಸಲು ಒಟ್ಟಾರೆ ವ್ಯವಸ್ಥೆ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು. ನಾವು ರಕ್ಷಿಸಬೇಕಾಗಿರುವುದು ಒಂದು ಹೆಣ್ಣನಲ್ಲ ಬದಲಾಗಿ ನಮ್ಮ ಸಮಾಜದ ಘನತೆಯನ್ನು. ಈ ಮಾದರಿಯ ಘಟನೆಗಳು ನಡೆದಾಗಲೆಲ್ಲ ಅಂತಾರಾಷ್ಟ್ರೀಯ ಸಮುದಾಯದೆದುರು ನಾವು ತಲೆತಗ್ಗಿಸಬೇಕಾಗುತ್ತದೆ.