Advertisement

ತೆಲಂಗಾಣದಲ್ಲಿ ಮತ್ತೂಂದು ತಿರುಪತಿ!

06:00 AM Oct 11, 2017 | Team Udayavani |

ಹೈದರಾಬಾದ್‌: ಹೊಸದಾಗಿ ತೆಲಂಗಾಣ ರಾಜ್ಯ ರಚನೆಯಾದಾಗ ಯಾತ್ರಾ ಸ್ಥಳ ತಿರುಪತಿ ಆಂಧ್ರದಲ್ಲಿಯೇ ಉಳಿಯಿತು. ಅದಕ್ಕೆ ಸಮನಾದ ಆಕರ್ಷಣೆ ಹೊಂದಿರುವ ಯಾತ್ರಾ ಸ್ಥಳ ತೆಲಂಗಾಣದಲ್ಲಿಲ್ಲವಲ್ಲ ಎಂಬ ನೋವು ಹಲವರನ್ನು ಕಾಡಿತ್ತು. ಅದಕ್ಕೊಂದು ಪರ್ಯಾಯ ವ್ಯವಸ್ಥೆಯನ್ನು ತೆಲಂಗಾಣ ಸರಕಾರ ಕಂಡುಕೊಂಡಿದೆ. ಯಾದಾದ್ರಿ ಜಿಲ್ಲೆಯಲ್ಲಿರುವ ಶತಮಾನಗಳಷ್ಟು ಹಳೆಯದಾಗಿರುವ ಲಕ್ಷ್ಮೀ ನರಸಿಂಹ ದೇವರ ದೇಗುಲವನ್ನು ತಿರುಮಲ ದೇಗುಲದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದೆ.

Advertisement

ಅಲ್ಲಿ ವಿಶ್ವದರ್ಜೆಯ ಸೌಲಭ್ಯ ಗಳನ್ನು ಒದಗಿಸಲು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ನೇತೃತ್ವದ ಸರಕಾರ ಹೆಜ್ಜೆ ಇಟ್ಟಿದೆ.
ಈ ಉದ್ದೇಶಕ್ಕಾಗಿ ಈಗಾಗಲೇ 1,800 ಕೋ.ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಆರಂಭಿಕ ಕೆಲಸಗಳು ಭರದಿಂದ ಸಾಗುತ್ತಿವೆ.

ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ದೇಗುಲದ ಮಾದರಿಯಲ್ಲೇ ಯಾದಾದ್ರಿಯಲ್ಲಿ ನಿರ್ಮಾಣ ವಾಗುತ್ತಿರುವ ದೇಗುಲದ ಸುತ್ತ 9 ಬೆಟ್ಟಗಳಿವೆ. ಜತೆಗೆ ನಿತ್ಯಹರಿದ್ವರ್ಣಮಯ ಕಾಡಿನಿಂದ ಈ ಪರಿಸರ ಒಡಗೂಡಿದೆ. 1,400 ಎಕರೆ ಪ್ರದೇಶದಲ್ಲಿ ದೇಗುಲದ ಅರ್ಚಕರು, ಸಿಬಂದಿ, ಪ್ರವಾಸಿಗಳಿಗೆ ತಂಗಲು ಕಾಟೇಜುಗಳ ನಿರ್ಮಾಣ ಶುರುವಾಗಿದೆ.

ವಿಶೇಷ ಮಂಡಳಿ ರಚನೆ: 2019ರ ಒಳಗಾಗಿ ಪೂರ್ಣ ಕಾಮಗಾರಿ ಮುಗಿಯಬೇಕೆಂಬುದು ಗುರಿ. 2018ರ ಮೇ ಒಳಗಾಗಿ ಮೊದಲ ಹಂತದ ಕಾಮಗಾರಿ ಮುಗಿಸಲು ಉದ್ದೇಶಿಸಲಾಗಿದೆ. ಅದಕ್ಕಾ ಗಿಯೇ ಯಾದಾದ್ರಿ ದೇಗುಲ ಅಭಿವೃದ್ಧಿ ಪ್ರಾಧಿಕಾರ (ವೈಟಿಡಿಎ) ರಚನೆ ಮಾಡಲಾಗಿದೆ. ದೇಗುಲಕ್ಕೆ ಸುಲಲಿತ ಸಂಚಾರ ವ್ಯವಸ್ಥೆಗಾಗಿ ನಾಲ್ಕು ಪಥಗಳ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಬರಲಿದ್ದಾರೆ ಪ್ರತಿದಿನ 30 ಸಾವಿರ ಮಂದಿ: ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ ವೈಟಿಡಿಎ ಉಪಾಧ್ಯಕ್ಷ ಜಿ.ಕಿಶನ್‌ ರಾವ್‌ “ದೇಗುಲ ಕಾಮಗಾರಿ ಮುಕ್ತಾಯವಾಗಿ ಜನರಿಗೆ ಮುಕ್ತವಾದ ಬಳಿಕ ಪ್ರತಿ ದಿನ 10ರಿಂದ 30 ಸಾವಿರ ಪ್ರವಾಸಿಗರು ಕ್ಷೇತ್ರಕ್ಕೆ ಬರಲಿದ್ದಾರೆ. ಸದ್ಯ ದೇಗುಲದ ಆದಾಯ ವಾರ್ಷಿಕ 80 ಕೋಟಿ ರೂ.ಗಳು ಇದ್ದು 200 ಕೋಟಿ ರೂ.ಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ’ ಎಂದರು.

Advertisement

ಪ್ರಭಾವೀ ದೇವರು: ತೆಲಂಗಾಣದ ಜನರಿಗೆ ಲಕ್ಷ್ಮೀ ನರಸಿಂಹ ಎಂದರೆ ಬಹಳ ಭಕ್ತಿ ಇದೆ ಎಂದು ಹೇಳಿದ ಕಿಶನ್‌ ರಾವ್‌, ಮಾನಸಿಕ ಕಾಯಿಲೆಗಳು, ಭೂತ- ಪ್ರೇತಗಳ ನಿವಾರಣೆ, ದೇಹ ದುರಿತಗಳನ್ನು ನಿವಾರಿ ಸುವ ಶಕ್ತಿ ಇದೆ ಎಂದು ನಂಬಿದ್ದಾರೆ. 
ಹೀಗಾಗಿಯೇ ಸಿಎಂ ಚಂದ್ರಶೇಖರ ರಾವ್‌ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ದೇಗುಲ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದರು.

ಕಾಕತೀಯ ಶೈಲಿ: ದೇಗುಲ ನಿರ್ಮಾಣ ಕಾರ್ಯಕ್ಕೆ ಕಲ್ಲುಗಳ ಬಳಕೆ ಮಾಡಲಾಗುತ್ತಿಲ್ಲ ಎನ್ನುವುದು ವಿಶೇಷ. ಕಾಕತೀಯ ರಾಜವಂಶ ಕಾಲದ ದೇಗುಲ ಇದಾಗಿದೆ. ಹೀಗಾಗಿ, ಅದೇ ಕಾಲದ ಶಿಲ್ಪಕಲೆಯಲ್ಲಿ ನಿರ್ಮಾಣ ವಾಗಿತ್ತು ದೇಗುಲ. ಹೀಗಾಗಿ ಕಪ್ಪು ಬಣ್ಣದ ಗ್ರಾನೈಟ್‌ ಅನ್ನು ನಿರ್ಮಾಣಕ್ಕೆ ಬಳಸಲಾಗುತ್ತದೆ. ಇದರ ಜತೆಗೆ 2.7 ಕಿಮೀ ಉದ್ದದ ಪ್ರದಕ್ಷಿಣೆ ರಸ್ತೆಯ ನಿರ್ಮಾಣವನ್ನೂ ಮಾಡಲಾಗುತ್ತಿದೆ.

ಆರಂಭದಿಂದಲೇ ಇತ್ತು: 2014ರಲ್ಲಿ ಹೊಸ ರಾಜ್ಯ ನಿರ್ಮಾಣಗೊಂಡಾಗ ಸಿಎಂ ರಾವ್‌ ಈ ದೇಗುಲ ನಿರ್ಮಾಣದ ಯೋಜನೆ ಹಾಕಿಕೊಂಡಿದ್ದರು. 2015ರ ಫೆಬ್ರವರಿಯಲ್ಲಿ ಯದಾದ್ರಿ ದೇಗುಲದ ಸುತ್ತಮುತ್ತಲಿನ 7 ಗ್ರಾಮಗಳನ್ನು ದೇಗುಲ ಪ್ರಾಧಿಕಾರದ ವ್ಯಾಪ್ತಿಗೆ ತರಲಾಯಿತು. ಜತೆಗೆ ಅಕ್ರಮ ನಿರ್ಮಾಣಗಳನ್ನು ಒಡೆದು ಹಾಕಲಾಯಿತು. ಮುಖ್ಯ ದೇವಾಲ ಯವನ್ನು ಕಳೆದ ವರ್ಷದ ಎಪ್ರಿಲ್‌ನಲ್ಲಿ ಮುಚ್ಚಲಾಗಿದ್ದು, ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಲಾಗಿದೆ. ಅಲ್ಲಿ ಅದಕ್ಕೆ ದೈನಂದಿನ ಧಾರ್ಮಿಕ ಕೈಂಕರ್ಯ ನಡೆಯುವಂತೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next