ನಾರಾಯಣಪುರ: ನೆರೆಯ ತೆಲಂಗಾಣ ರಾಜ್ಯಕ್ಕೆ ಬಸವಸಾಗರ ಜಲಾಶಯದಿಂದ ನದಿ ಮೂಲಕ 1.80 ಟಿಎಂಸಿ ಅಡಿ ನೀರು ಹರಿಸಲಾಗಿದೆ ಎಂದು ಕೆಬಿಜೆಎನ್‌ಎಲ್ ಅಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ ನಾಯ್ಕೋಡಿ ತಿಳಿಸಿದ್ದಾರೆ.
ಸರ್ಕಾರ ಹಾಗೂ ಬೆಳಗಾವಿ, ಕಲಬುರಗಿ ಪ್ರಾದೇಶಿಕ ಆಯುಕ್ತರು ನೀಡಿದ ನಿರ್ದೇಶನದಂತೆ ಗುರುವಾರ ಮಧ್ಯಾಹ್ನದಿಂದಲೇ ಜಲಾಶಯದ 2 ಮುಖ್ಯ ಕ್ರಸ್ಟ್‌ಗೇಟ್ ತೆರೆದು ತಲಾ 4 ಸಾವಿರ ಕ್ಯುಸೆಕ್ ಪ್ರಮಾಣದಲ್ಲಿ ನೀರನ್ನು ನದಿ ಪಾತ್ರಕ್ಕೆ ಹರಿಸಲು ಆರಂಭಿಸಲಾಗಿತ್ತು.
ನಿಗದಿ ಮಾಡಲಾದ 1.80 ಟಿಎಂಸಿ ಅಡಿ ನೀರು ಭಾನುವಾರ ಬೆಳಗ್ಗೆ ಸಂಪೂರ್ಣವಾಗಿದ್ದರಿಂದ ಬೆಳಗ್ಗೆಯಿಂದಲೇ ಜಲಾಶಯದ ಕ್ರಸ್ಟ್‌ಗೇಟ್ ಬಂದ್ ಮಾಡಲಾಗಿದೆ. ತೆಲಂಗಾಣ ರಾಜ್ಯವು ಕುಡಿಯುವ ನೀರಿನ ಉದ್ದೇಶಕ್ಕೆ ಕರ್ನಾಟಕ ಸರ್ಕಾರಕ್ಕೆ ಬೇಡಿಕೆ ಇಟ್ಟಿತ್ತು.
ಈ ಕುರಿತು ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ತೆಲಂಗಾಣಕ್ಕೆ ನೀರು ಬಿಡುವ ಕುರಿತು ಸೂಚನೆ ನೀಡಿತ್ತು. ಅದರಂತೆ ಬಸವಸಾಗರ ಜಲಾಶಯದಿಂದ ಬಿಡಲಾದ ನೀರು ನದಿ ಮೂಲಕ ಸಾಗಿ ಗೂಗಲ್ ಬ್ಯಾರೇಜ್‌ನಿಂದ ಮುಂದೆ ತೆಲಂಗಾಣ ರಾಜ್ಯಕ್ಕೆ ತಲುಪಲಿದೆ ಎಂದು ತಿಳಿಸಿದ್ದಾರೆ.
ಜಲಾಶಯದ ನೀರಿನ ಮಟ್ಟ: 487.09 ಮೀಟರ್ ತಲುಪಿರುವ ನೀರಿನ ಮಟ್ಟದಲ್ಲಿ 14.732 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಒಳಹರಿವು ಇಲ್ಲ. ಹೊರ ಹರಿವು 34 ಕ್ಯೂಸೆಕ್ ಇದೆ.