Advertisement

Telangana Elections ಮತ್ತೊಮ್ಮೆ ಇತಿಹಾಸ ಬರೆಯುವುದೇ ಕಾಂಗ್ರೆಸ್‌?

07:49 PM Nov 07, 2023 | Team Udayavani |

ತೆಲಂಗಾಣದ ರಾಜಕೀಯ ಇತಿಹಾಸದಲ್ಲಿ ಎನ್‌.ಟಿ.ರಾಮರಾವ್‌ ಅವರನ್ನು ಚುನಾವಣಾ ರಾಜಕೀಯದಲ್ಲಿ ಪತನಗೊಂಡ ಅತಿದೊಡ್ಡ ಮರ ಎಂದು ಪರಿಗಣಿಸಲಾಗುತ್ತದೆ. 1989ರ ಚುನಾವಣೆಯಲ್ಲಿ ಎನ್‌ಟಿಆರ್‌ ಎಂಬ ದಿಗ್ಗಜನನ್ನು ಕಲ್ವಕುರ್ತಿ ಕ್ಷೇತ್ರದಲ್ಲಿ ಚಿತ್ತರಂಜನ್‌ ದಾಸ್‌ ಎಂಬ ಕಾಂಗ್ರೆಸ್‌ನ ಒಬ್ಬ ಸಾಮಾನ್ಯ ನಾಯಕ ಸೋಲಿಸಿದ್ದರು. ಇದಾಗಿ 34 ವರ್ಷಗಳ ನಂತರ ಈಗ ಮತ್ತೊಮ್ಮೆ ಈ ಇತಿಹಾಸ ಮರುಕಳಿಸುವಂತೆ ಮಾಡುವ ಯತ್ನಕ್ಕೆ ಕಾಂಗ್ರೆಸ್‌ ಕೈಹಾಕಿದೆ.

Advertisement

ಚುನಾವಣೆಗೆ ಸಜ್ಜಾಗಿರುವ ತೆಲಂಗಾಣದಲ್ಲಿ ಕಾಂಗ್ರೆಸ್‌ ತನ್ನ ರಾಜ್ಯಾಧ್ಯಕ್ಷ, ಲೋಕಸಭೆ ಸಂಸದ ಎ.ರೇವಂತ ರೆಡ್ಡಿ ಅವರನ್ನೇ ಮುಖ್ಯಮಂತ್ರಿ, ಬಿಆರ್‌ಎಸ್‌ ವರಿಷ್ಠ ಕೆ.ಚಂದ್ರಶೇಖರ್‌ ರಾವ್‌ ವಿರುದ್ಧ ಕಣಕ್ಕಿಳಿಸುವ ಮೂಲಕ ಅಚ್ಚರಿ ಮೂಡಿಸಿದೆ. ರೆಡ್ಡಿ ಹಾಗೂ ರಾವ್‌ ಇಬ್ಬರೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಆದರೆ, ಈ ಇಬ್ಬರು ಘಟಾನುಘಟಿಗಳ ನಡುವೆ ಹೋರಾಟ ನಡೆಯಲಿರುವ ಕಮರೆಡ್ಡಿ ಕ್ಷೇತ್ರದತ್ತ ಈಗ ಎಲ್ಲರ ಕಣ್ಣು ನೆಟ್ಟಿದೆ.

ಫೈರ್‌ ಬ್ರ್ಯಾಂಡ್‌ ನಾಯಕನೆಂದೇ ಗುರುತಿಸಿಕೊಂಡಿರುವ ರೇವಂತ ರೆಡ್ಡಿ ಅವರನ್ನು ಕೆಸಿಆರ್‌ ವಿರುದ್ಧ ಕಣಕ್ಕಿಳಿಸುವ ಮೂಲಕ ಬಿಆರ್‌ಎಸ್‌ ವಿಚಾರದಲ್ಲಿ ಪಕ್ಷದ ನಿಲುವು ದೃಢವಾಗಿದೆ ಎಂಬ ಸಂದೇಶವನ್ನು ಕಾಂಗ್ರೆಸ್‌ ಸಾರಿದೆ. ಆದರೆ, ಈ ನಿರ್ಧಾರವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಆರ್‌ಎಸ್‌ನೊಂದಿಗೆ ಸಂಭಾವ್ಯ ಮೈತ್ರಿಗೆ ಅಡ್ಡಗಾಲಾಗಲಿದೆ ಎನ್ನುವುದು ಕಾಂಗ್ರೆಸ್‌ನ ಒಂದು ವರ್ಗದ ಅಭಿಪ್ರಾಯ. ಹೀಗಿದ್ದರೂ, ಕಾಂಗ್ರೆಸ್‌ ಮಾತ್ರ ಅವ್ಯಾವುದನ್ನೂ ಲೆಕ್ಕಿಸದೇ ತನ್ನದೇ ಆದ ಲೆಕ್ಕಾಚಾರದೊಂದಿಗೆ ಈ ದಾಳ ಉರುಳಿಸಿದೆ. ಸಿಎಂ ಕೆಸಿಆರ್‌ರನ್ನು ಕಮರೆಡ್ಡಿ ಕ್ಷೇತ್ರದಲ್ಲಿ ಕಟ್ಟಿಹಾಕುವುದು ಹಾಗೂ ದಿಗ್ಗಜನ ವಿರುದ್ಧ ಸೆಣಸಾಡಲು ರೇವಂತ ರೆಡ್ಡಿ ಹಿಂದೇಟು ಹಾಕುವುದಿಲ್ಲ ಎಂಬ ಸಂದೇಶ ಸಾರುವುದು ಕೂಡ ಕಾಂಗ್ರೆಸ್‌ನ ಉದ್ದೇಶವಾಗಿದೆ. ಒಟ್ಟಿನಲ್ಲಿ, ಕಮರೆಡ್ಡಿ ಕ್ಷೇತ್ರದ ಜನರಿಗೆ “ಮುಂದಿನ ಸಿಎಂ’ ಆಯ್ಕೆ ಮಾಡುವ ಅವಕಾಶ ದೊರೆತಿದೆ.

Advertisement

Udayavani is now on Telegram. Click here to join our channel and stay updated with the latest news.

Next