Advertisement
ಕೆ.ಆರ್.ಪುರದ ಅಕ್ಷಯ ನಗರದ ನಿವಾಸಿ ಅಮೃತಾ ಚಂದ್ರಶೇಖರ್(32) ಮತ್ತು ಆಕೆಯ ಪ್ರಿಯಕರ ಶ್ರೀಧರ್ ರಾವ್(35) ಬಂಧಿತರು. ಆರೋಪಿಗಳನ್ನು ಬುಧವಾರ ಬೆಳಗ್ಗೆ ಅಂಡಮಾನ್ ವಿಮಾನ ನಿಲ್ದಾಣ ಸಮೀಪದಲ್ಲಿ ಬಂಧಿಸಲಾಗಿದೆ. ಕೃತ್ಯಕ್ಕೆ ಪ್ರೀತಿಯೇ ಕಾರಣ ಎಂಬುದು ಗೊತ್ತಾಗಿದ್ದು, ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಇನ್ನಷ್ಟು ಮಾಹಿತಿ ತಿಳಿದು ಬರಲಿದೆ.
Related Articles
Advertisement
ಫೆ.1ರ ರಾತ್ರಿ ಎಲ್ಲರೂ ಒಟ್ಟಿಗೆ ಊಟ ಮಾಡಿ ನಿದ್ರೆಗೆ ಜಾರಿದ್ದರು. ಹರೀಶ್ ಕೋಣೆಯಲ್ಲಿ ಮಲಗಿದ್ದರು. ತಾಯಿ ನಿರ್ಮಲಾ ಜತೆ ಮಲಗಿದ್ದ ಅಮೃತಾ, ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಎದ್ದು ಚಾಕುವಿನಿಂದ ತಾಯಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾಳೆ. ಎಚ್ಚರಗೊಂಡ ಸಹೋದರನ ಮೇಲೂ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸರು ಹೇಳಿದರು.
ವಿಮಾನ ನಿಲ್ದಾಣದಲ್ಲಿ ವಾಹನ ಪತ್ತೆ: ಮುಂಜಾನೆ ಐದು ಗಂಟೆ ವೇಳಗೆ ಕೃತ್ಯವೆಸಗಿ ಬ್ಯಾಗ್ ಸಮೇತ ತೆರಳಿದ ಅಮೃತಾ, ದ್ವಿಚಕ್ರ ವಾಹನದಲ್ಲಿ ಪ್ರಿಯಕರ ಶ್ರೀಧರ್‌ರಾವ್ ಜತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಅಲ್ಲಿಂದ ಮಂಜಾನೆ 6.30ಕ್ಕೆ ಬೆಂಗಳೂರಿನಿಂದ ಅಂಡಮಾನ್‌ಗೆ ಹೊರಡುವ ವಿಮಾನದಲ್ಲಿ ಪರಾರಿಯಾಗಿದ್ದರು. ಶ್ರೀಧರ್ ಬೈಕ್ ವಿಮಾನ ನಿಲ್ದಾಣ ಸಮೀಪದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.
ಒಂದೇ ಕಂಪನಿಯಲ್ಲಿ ಕೆಲಸ, ಒಂದು ತಿಂಗಳ ಸಂಚು: ಪ್ರಕರಣದ ಆರೋಪಿಗಳಾದ ಅಮೃತಾ ಮತ್ತು ಶ್ರೀಧರ್‌ರಾವ್ ಈ ಮೊದಲು ಒಂದೇ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಆದರೆ, ಈ ವಿಚಾರ ತಾಯಿ ನಿರ್ಮಲಾಗೆ ಇಷ್ಟವಿರಲಿಲ್ಲ. ಹೀಗಾಗಿ ಒಂದು ತಿಂಗಳ ಹಿಂದೆಯೇ ತಾಯಿ ಹಾಗೂ ಸಹೋದರನ್ನು ಕೊಂದು ಅಂಡಮಾನ್‌ನಲ್ಲಿ ಮೋಜು-ಮಸ್ತಿ ಮಾಡಿಕೊಂಡು, ಬಳಿಕ ಮುಂಬೈನಲ್ಲಿ ಹೊಸ ಬದುಕು ಕಟ್ಟಿಕೊಳ್ಳಲು ಸಿದ್ದತೆ ನಡೆಸಿದ್ದರು.
ಈ ಮಧ್ಯೆ ವಿಮಾನ ಟಿಕೆಟ್ ಬುಕ್ ಕಾಯ್ದಿರಿಸುವಾಗ ಅಮೃತಾ ತನ್ನ ಹೆಸರನ್ನು ಅಮೃತಾ ಸಿ ಶ್ರೀಧರ್ ಎಂದು ನಮೂದಿಸಿ ಬೇರೆಯದ್ದೆ ನಂಬರ್ ಉಲ್ಲೇಖೀಸಿದ್ದರು. ಹೀಗಾಗಿ ಆರಂಭದಲ್ಲಿ ಗೊಂದಲ ಉಂಟಾಗಿ, ಮುಂಬೈಗೆ ತೆರಳಿ ಪರಿಶೀಲಿಸಿದಾಗ ನಿಜವಾದ ಅಮೃತಾ ಅಲ್ಲ ಎಂಬುದು ಖಾತ್ರಿಯಾಗಿ ಬಳಿಕ ಅಂಡಮಾನ್‌ಗೆ ತೆರಳಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಅಂಡಮಾನ್‌ನಲ್ಲಿ ಬಂಧನ: ಸಹೋದರ ಹರೀಶ್‌ರಿಂದ ಪ್ರಾಥಮಿಕ ಮಾಹಿತಿಯನ್ನು ಕಲೆ ಹಾಕಿದ ಕೆ.ಆರ್.ಪುರ ಠಾಣೆ ಇನ್‌ಸ್ಪೆಕ್ಟರ್ ಅಂಬರೀಶ್ ಮತ್ತು ತಂಡ, ವಿಮಾನ ಮೂಲಕ ಅಂಡಮಾನ್‌ಗೆ ತೆರಳಿ ಅಲ್ಲಿನ ವಿಮಾನ ನಿಲ್ದಾಣ ಸಮೀಪದಲ್ಲೇ ಬುಧವಾರ ಬೆಳಗ್ಗೆ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸ್ಥಳೀಯ ಕೋರ್ಟ್‌ಗೆ ಹಾಜರು ಪಡಿಸಿ ಗುರುವಾರ ನಗರಕ್ಕೆ ಕರೆ ತರಲಾಗುವುದು ಎಂದು ಪೊಲೀಸರು ಹೇಳಿದರು.