ಮಾಲೂರು: ಈ ಭಾಗದ ಸಾರ್ವಜನಿಕರ ಬಹುದಿನಗಳ ಬೇಡಿಕೆ ಆಗಿರುವ ಟೇಕಲ್ ರೈಲ್ವೆ ಮೇಲು ಸೇತುವೆ ಕಾಮಗಾರಿ ಇನ್ನು ಎರಡು ತಿಂಗಳಲ್ಲಿ ಆರಂಭಿಸುವ ವಿಶ್ವಾಸ ಇದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಟೇಕಲ್ ರೈಲ್ವೆ ನಿಲ್ದಾಣಕ್ಕೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಮತ್ತು ತಾಂತ್ರಿಕ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಸ್ಥಳೀಯರಿಂದ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದ ನಂತರ ಮಾತನಾಡಿ, ಸ್ಥಳೀಯವಾಗಿ ಜನರು, ವಾಹನಗಳ ಸಂಚಾರಕ್ಕೆ ಟೇಕಲ್ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗುತ್ತದೆ ಎಂದು ವಿವರಿಸಿದರು.
8 ರಿಂದ 10 ಕಿ.ಮೀ. ಸುತ್ತಿಕೊಂಡು ಬರಬೇಕು: ಮಾಲೂರು ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಡಿಆರ್‌ಎಂ ಸಂಜೀವ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು, ತಾಲೂಕಿನ ಚಿಕ್ಕಾಪುರ ಗ್ರಾಮ ಬಳಿಯಲ್ಲಿ ಅಂಡರ್ ಪಾಸ್ ನಿರ್ಮಾಣದ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಮನವಿ ನೀಡಿದ್ದರು. ಹಿರಿಯ ಅಧಿಕಾರಿಗಳ ಹಾದಿಯಾಗಿ ರೈಲ್ವೆ ಸಚಿವರೂ ಕಾಮಗಾರಿ ಆರಂಭಿಸುವ ವಿಶ್ವಾಸ ವ್ಯಕ್ತಪಡಿಸಿದ್ರು. ಆದರೆ, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದ 10 ರಿಂದ 15 ಹಳ್ಳಿಗಳ ಜನರು ಮಾಲೂರು ಪಟ್ಟಣಕ್ಕೆ ಬರಲು 8 ರಿಂದ 10 ಕಿ.ಮೀ. ಸುತ್ತಿಕೊಂಡು ಬರುವಂತಾಗಿದೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ಮನವಿ ಮಾಡಿದರು.
ಸೌಲಭ್ಯಗಳನ್ನು ಒದಗಿಸಿ: ನಿಲ್ದಾಣದಲ್ಲಿ ಧ್ವನಿವರ್ಧಕದ ಮೂಲಕ ರೈಲುಗಳು ಬರುವ ಬಗ್ಗೆ ಮಾಹಿತಿ ನೀಡಬೇಕು, ಶೌಚಾಲಯ, ಕುಡಿಯುವ ನೀರಿನ ಕೊರತೆ ಇದೆ. ರೈಲ್ವೆ ಪೊಲೀಸ್ ನೇಮಿಸಬೇಕು, ನಿಲ್ದಾಣದಲ್ಲಿ ಎರಡು ಶೆಲ್ಟರ್, ಸಿಬ್ಬಂದಿ ನೇಮಕ ಮಾಡಬೇಕು, ಈ ನಿಲ್ದಾಣದಲ್ಲಿ ಶೇಷಾದ್ರಿ ಎಕ್ಸ್‌ಪ್ರೆಸ್ ಮುಂಜಾನೆ ನಿಲುಗಡೆ ಮಾಡಿದರೆ ಪ್ರಯಾಣಿಕರಿಗೆ ಅನುಕೂಲ ಆಗುತ್ತದೆ. ಅತಿ ಮುಖ್ಯವಾಗಿ ಟೇಕಲ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲು ಒತ್ತಾಯ ಮಾಡಿದ್ದು, ಇಲ್ಲಿ ಗೇಟ್ ಹಾಕಿದರೆ ಅರ್ಧ ಗಂಟೆಗೂ ಹೆಚ್ಚು ತೆಗೆಯಲು ವಿಳಂಬವಾಗುತ್ತದೆ ಎಂದು ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ಅಧಿಕಾರಿ ಸಂಜೀವ್ ಕಿಶೋರ್, ನಿಮ್ಮ ಬೇಡಿಕೆ ಕೂಲಂಕಷವಾಗಿ ಪರಿಶೀಲಿಸಿ ಹಂತವಾಗಿ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮರಲಹಳ್ಳಿ ರೈಲ್ವೆ ನಿಲ್ದಾಣಕ್ಕೆ ಭೇಟಿ: ಇದಾದ ನಂತರ ಸಂಸದ ಮುನಿಸ್ವಾಮಿ ಮರಲಹಳ್ಳಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದರು. ಅಲ್ಲಿ ಎರಡು ವರ್ಷಗಳಿಂದ ಯಾವುದೇ ರೈಲು ನಿಲುಗಡೆ ಆಗದೆ ಆ ಭಾಗದ ಜನರಿಗೆ ತೊಂದರೆ ಯಾಗಿತ್ತು. ಈಗ 4 ರೈಲು ನಿಲುಗಡೆ ಮಾಡಲಾಗುತ್ತಿದ್ದು, ಮರಲಹಳ್ಳಿ ಸುತ್ತಮುತ್ತಲಿನ ಜನಕ್ಕೆ ಉಪಯುಕ್ತವಾಗಿದೆ. ಈ ನಿಟ್ಟಿನಲ್ಲಿ ಸಂಸದರಿಗೆ ಹಾಗೂ ಅಧಿಕಾರಿಗಳಿಗೆ ಸ್ಥಳೀಯರು ಅಭಿನಂದಿಸಿದರು.