ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಸಿಗದ ಕಾರಣ ಸಾರ್ವಜನಿಕ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದ ತೇಜಸ್ವಿನಿ ಅನಂತ ಕುಮಾರ್, ಶುಕ್ರವಾರ “ದೇಶ ಮೊದಲು- ಮೋದಿ ಮತ್ತೂಮ್ಮೆ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನಮತ ಸಂಸ್ಥೆಯು ಶುಕ್ರವಾರ ಸಂಜೆ 5 ಗಂಟೆಗೆ “ದೇಶ ಮೊದಲು- ಮೋದಿ ಮತ್ತೂಮ್ಮೆ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಯನಗರದ ಎನ್‌ಎಂಕೆಆರ್‌ವಿ ಕಾಲೇಜು ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೇಜಸ್ವಿನಿ ಅನಂತ ಕುಮಾರ್ ವಹಿಸಲಿದ್ದಾರೆ. ಸಾಹಿತಿ ದೊಡ್ಡರಂಗೇಗೌಡ, ಸುಮಿತ್ತಾ, ಡಾ.ಆರತಿ, ಡಾ.ವಿಜಯಕ್ಷ್ಮೀ ದೇಶಮಾನೆ ಇತರರು ಭಾಗವಹಿಸಲಿದ್ದಾರೆ.
ಟಿಕೆಟ್ ಕೈತಪ್ಪಿದ ಬಳಿಕ ಪ್ರಚಾರದಲ್ಲಿ ಕಾಣಿಸಿಕೊಳ್ಳದ ತೇಜಸ್ವಿನಿ ಅವರು, ಕಳೆದ ವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಡೆಸಿದ ರೋಡ್ ಶೋನಲ್ಲಿ ಭಾಗವಹಿಸಿದ್ದರು. ಬಳಿಕ ಸಾರ್ವಜನಿಕವಾಗಿ ಪ್ರಚಾರ ನಡೆಸಿರಲಿಲ್ಲ. ಈ ನಡುವೆ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರೂ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಹಾಗಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುವರೇ ಎಂಬ ಪ್ರಶ್ನೆ ಉದ್ಭವಿಸಿತ್ತು.
ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಪ್ರಚಾರ ನಡೆಸುವ ಬಗ್ಗೆ ತೇಜಸ್ವಿನಿ ಅವರು ಇನ್ನೂ ತೀರ್ಮಾನ ಕೈಗೊಂಡಂತಿಲ್ಲ. ಆದರೆ ಬಿಜೆಪಿ ಪರ ಪ್ರಚಾರ ನಡೆಸುವ ವಿಶ್ವಾಸವಿದೆ ಎಂದು ತೇಜಸ್ವಿನಿ ಆಪ್ತರೊಬ್ಬರು ತಿಳಿಸಿದರು.