ಬೆಂಗಳೂರು : ಭಾರೀ ಕುತೂ ಹಲ ಮೂಡಿಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಟಿಕೆಟ್ ನೀಡದೆ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿರುವುದಕ್ಕೆ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ.
ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಅವಕಾಶ ನೀಡದಿರುವ ಬಗ್ಗೆ ಬಹಿರಂಗ ವಾಗಿಯೇ ಆಕ್ರೋಶ ವ್ಯಕ್ತಪಡಿಸಿರುವ ಗೋವಿಂದರಾಜನಗರ ಕ್ಷೇತ್ರದ ಶಾಸಕ ವಿ.ಸೋಮಣ್ಣ, ಟಿಕೆಟ್ ನೀಡದಿರುವುದಕ್ಕೆ ಕಾರಣವನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲು ಕಷ್ಟವಾಗಲಿದೆ ಎಂದು ಪರೋಕ್ಷವಾಗಿ ಪ್ರಚಾರದಿಂದ ದೂರ ಉಳಿಯುವ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಜತೆಗೆ ತೇಜಸ್ವಿ ಸೂರ್ಯ ಆಯ್ಕೆ ಹಿಂದೆ ಅವರ ಚಿಕ್ಕಪ್ಪ ಶಾಸಕ ರವಿ ಸುಬ್ರಹ್ಮಣ್ಯ ಅವರ ಮಹತ್ತರ ಪಾತ್ರವಿದೆ ಎಂದು ಹೇಳಿದ್ದಾರೆ.
ಆದರೆ ಬಿಕ್ಕಟ್ಟಿನ ಸ್ಥಿತಿಯನ್ನು ತಿಳಿಯಾಗಿ ಸುವ ರೀತಿಯಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ವಕ್ತಾರ ಎಸ್.ಸುರೇಶ್ ಕುಮಾರ್, ಸೋಮಣ್ಣ ಅವರೊಂದಿಗೆ ಪಕ್ಷದ ಹಿರಿಯರು ಚರ್ಚಿಸಿ ಕಾರಣಗಳನ್ನು ತಿಳಿಸಿ ಸಮಾಧಾನಪಡಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬುಧವಾರ ತೇಜಸ್ವಿನಿ ಅನಂತ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಸೋಮಣ್ಣ ಕೆಲವು ಹೊತ್ತು ಮಾತುಕತೆ ನಡೆಸಿದರು. ಅನಂತರ ಪ್ರತಿಕ್ರಿಯಿಸಿದ ಸೋಮಣ್ಣ, ಈ ರೀತಿಯ ಬೆಳವಣಿಗೆ ನಡೆದಿರುವುದು ದುರ್ದೈವ. ತೇಜಸ್ವಿನಿ ಅವರಿಗೆ ಅವಕಾಶ ಕೈತಪ್ಪಿರುವುದಕ್ಕೆ ಕಾರಣವಾದರೂ ಏನು ಎಂಬ ಯಕ್ಷ ಪ್ರಶ್ನೆ ಮೂಡಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಈ ಬೆಳವಣಿಗೆ ಹಿಂದಿನ ಕಾರಣವೇನು ಎಂಬುದರ ಬಗ್ಗೆ ನನಗೆ ಸ್ಪಷ್ಟತೆ ಬೇಕು. ಯಾರ್ಯಾರು ದೊಡ್ಡವರಿದ್ದಾರೆ, ಕಾರಣವೇನೆಂದು ಮನವರಿಕೆಯಾಗಬೇಕಿದೆ ಎಂದಿದ್ದಾರೆ.