Advertisement

ತೇಜಸ್ವಿನಿಗೆ ತಪ್ಪಿದ ಟಿಕೆಟ್‌: ನಾನಾ ವ್ಯಾಖ್ಯಾನ

11:44 AM Mar 27, 2019 | Lakshmi GovindaRaju |

ಬೆಂಗಳೂರು: ರಾಜ್ಯ ಬಿಜೆಪಿ ಕೋರ್‌ ಕಮಿಟಿಯಿಂದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಏಕೈಕ ಸಂಭಾವ್ಯ ಅಭ್ಯರ್ಥಿ ಎಂದು ಶಿಫಾರಸು ಮಾಡಲಾಗಿದ್ದ ತೇಜಸ್ವಿನಿ ಅನಂತ ಕುಮಾರ್‌ ಅವರ ಹೆಸರನ್ನು ಕೈಬಿಟ್ಟು ಅಂತಿಮವಾಗಿ ತೇಜಸ್ವಿ ಸೂರ್ಯ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ಅಚ್ಚರಿ ಮೂಡಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್‌ ಅವರು ನಿಧನರಾದ ಬಳಿಕ ತೇಜಸ್ವಿನಿ ಅನಂತ ಕುಮಾರ್‌ ಅವರೇ ಆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆರಂಭದಲ್ಲಿ ಆಸಕ್ತಿ ತೋರದಂತಿದ್ದ ತೇಜಸ್ವಿನಿ ಅವರು ಬಳಿಕ ಪಕ್ಷ ಬಯಸಿದರೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.

ಆರಂಭದಲ್ಲಿ ನಗರ ಕೆಲ ಬಿಜೆಪಿ ಪ್ರಮುಖರು ತೇಜಸ್ವಿನಿಯವರ ನಿಲುವಿನ ಬಗ್ಗೆ ಅಪಸ್ವರ ತೆಗೆದಿದ್ದು, ಸುದ್ದಿಯಾಗಿತ್ತು. ಅಂತಿಮವಾಗಿ ನಗರದ ಪ್ರಮುಖ ನಾಯಕರೆಲ್ಲಾ ಚರ್ಚಿಸಿ ತೇಜಸ್ವಿನಿ ಅನಂತ ಕುಮಾರ್‌ ಅವರ ಹೆಸರನ್ನೇ ರಾಜ್ಯ ಕೋರ್‌ ಕಮಿಟಿ ಸಭೆಗೆ ಶಿಫಾರಸು ಮಾಡಲು ನಿರ್ಧಾರ ಕೈಗೊಂಡಿರುವ ಬಗ್ಗೆ ಪ್ರಕಟಿಸಿದ್ದರು.

ಇದಕ್ಕೆ ಸ್ಪಂದಿಸಿದ ಕೋರ್‌ ಕಮಿಟಿಯು ತೇಜಸ್ವಿನಿ ಅನಂತ ಕುಮಾರ್‌ ಅವರ ಹೆಸರನ್ನಷ್ಟೇ ಸಂಭಾವ್ಯ ಅಭ್ಯರ್ಥಿಯಾಗಿ ಶಿಫಾರಸು ಮಾಡುವ ಮೂಲಕ ಸ್ಪರ್ಧೆಗೆ ಬೆಂಬಲ ನೀಡಿತ್ತು. ಹಾಗಾಗಿ ಕೊನೆಯ ಕ್ಷಣದವರೆಗೂ ತೇಜಸ್ವಿನಿಯವರೇ ಅಭ್ಯರ್ಥಿಯಾಗುವ ನಿರೀಕ್ಷೆ ಇತ್ತು.

ಆದರೆ ರಾಜ್ಯ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಬಿಡುಗಡೆ ಮಾಡಿದ ಎರಡೂ ಪಟ್ಟಿಯಲ್ಲಿ ತೇಜಸ್ವಿನಿ ಅನಂತ ಕುಮಾರ್‌ ಅವರ ಹೆಸರು ಇಲ್ಲದಿದ್ದುದು ಅನುಮಾನಗಳನ್ನು ಹುಟ್ಟುಹಾಕಿತ್ತು. ಇಷ್ಟಾದರೂ ರಾಜ್ಯ ನಾಯಕರು ಅವರೇ ಸ್ಪರ್ಧಿಸಲಿದ್ದಾರೆ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸುತ್ತಾ ಬಂದರು.

Advertisement

ಆದರೆ ಅಂತಿಮವಾಗಿ ಟಿಕೆಟ್‌ ಕೈತಪ್ಪಿರುವುದು ತೇಜಸ್ವಿನಿ ಅನಂತ ಕುಮಾರ್‌ ಮಾತ್ರವಲ್ಲದೇ ಅವರ ಅಪಾರ ಬೆಂಬಲಿಗರು, ಕಾರ್ಯಕರ್ತರಿಗೆ ಅಸಮಾಧಾನ ಉಂಟು ಮಾಡಿದೆ. ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆಯೂ ಇದು ಸಾಬೀತಾಗಿತ್ತು.

ನಾನಾ ವ್ಯಾಖ್ಯಾನ: ತೇಜಸ್ವಿನಿ ಅನಂತ ಕುಮಾರ್‌ ಅವರ ಸ್ಪರ್ಧೆ ಬಗ್ಗೆ ವರಿಷ್ಠರಿಯಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿರಲಿಲ್ಲ. ಕೇವಲ ರಾಜ್ಯ ನಾಯಕರ ಮಟ್ಟದಲ್ಲಷ್ಟೇ ಚರ್ಚೆಯಾಗಿತ್ತು. ಇನ್ನೊಂದೆಡೆ ತೇಜಸ್ವಿನಿ ಅವರು ವರಿಷ್ಠರ ಗಮನಕ್ಕೆ ತರದೆ ಪ್ರಚಾರ ಆರಂಭಿಸಿದ್ದರು. ಚುನಾವಣಾ ಕಚೇರಿಗಳನ್ನೇ ಆರಂಭಿಸಿದ್ದ ಬಗ್ಗೆ ಅಸಮಾಧಾನವಿತ್ತು ಎಂಬ ಮಾತಿದೆ.

ಜತೆಗೆ ತೇಜಸ್ವಿನಿ ಅವರು ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ರಾಜನಾಥ ಸಿಂಗ್‌ ಇತರರನ್ನು ಭೇಟಿಯಾಗಿದ್ದು ಸಹ ವರಿಷ್ಠರ ಬೇಸರಕ್ಕೆ ಕಾರಣವಾಗಿತ್ತು. ರಾಜಕೀಯಕ್ಕೆ ಹೊಸಬರಾದ ಅವರು ಒಂದೊಮ್ಮೆ ತಪ್ಪು ಹೆಜ್ಜೆಗಳನ್ನಿಟ್ಟಿದ್ದರೆ ಹಿರಿಯ ನಾಯಕರು ಸಲಹೆ, ಮಾರ್ಗದರ್ಶನ ನೀಡಿ ಸರಿಪಡಿಸಲು ಗಮನ ಹರಿಸಬಹುದಿತ್ತು ಎಂಬ ವ್ಯಾಖ್ಯಾನ ಕೇಳಿಬರುತ್ತಿವೆ.

ಇನ್ನೊಂದೆಡೆ ತೇಜಸ್ವಿನ ಸೂರ್ಯ ಅವರ ಸ್ಪರ್ಧೆ ಬಗ್ಗೆ ಕೆಲ ತಿಂಗಳ ಹಿಂದೆ ಪಕ್ಷದ ಒಂದು ವಲಯ ಹಾಗೂ ಸಂಘ ಪರಿವಾರದ ಪ್ರಮುಖರಲ್ಲಿ ಚರ್ಚೆಯಾಗಿತ್ತು. ಈ ಬಗ್ಗೆ ಗೌಪ್ಯವಾಗಿಯೇ ಪ್ರಕ್ರಿಯೆಗಳು ನಡೆದಿದ್ದವು. ಅದರಂತೆ ಅಭ್ಯರ್ಥಿಯಾಗಿ ರೂಪುಗೊಂಡಿದ್ದಾರೆ.

ರಾಜ್ಯದ ಕೆಲ ನಾಯಕರು ತೇಜಸ್ವಿನಿ ಅನಂತ ಕುಮಾರ್‌ ಅವರಿಗೆ ಪಕ್ಷದ ವ್ಯವಸ್ಥೆಯ ಅರಿವಾಗಲಿ ಎಂಬ ಕಾರಣಕ್ಕೆ ಸಣ್ಣ ಮಟ್ಟದಲ್ಲಿ ನಡೆಸಿದ ಕೆಲ ಬೆಳವಣಿಗೆಯನ್ನೇ ಕೆಲ ಪ್ರಭಾವಿಗಳು ದಾಳವಾಗಿ ಬಳಸಿಕೊಂಡು ಟಿಕೆಟ್‌ ತಪ್ಪಿಸಿದ್ದಾರೆ ಎಂಬ ಮಾತುಗಳೂ ಇಂದು ಪಕ್ಷದ ವಲಯದಲ್ಲೇ ಕೇಳಿ ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next