Advertisement

ತೇಜಸ್ವಿನಿ ನಡೆ ಇನ್ನೂ ನಿಗೂಢ

11:59 AM Apr 06, 2019 | Team Udayavani |

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ತೇಜಸ್ವಿನಿ ಅನಂತ ಕುಮಾರ್‌ ಪ್ರಚಾರದಲ್ಲಿ ಕಾಣಿಸಿಕೊಳ್ಳದಿರುವುದು ಚರ್ಚೆಗೆ ಗ್ರಾಸವಾಗಿದ್ದು, ಅವರ ಮುಂದಿನ ನಡೆ ಇನ್ನೂ ನಿಗೂಢವಾಗಿದೆ.

Advertisement

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಏ.2ರಂದು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಡೆಸಿದ ರೋಡ್‌ ಶೋನಲ್ಲಿ ತೇಜಸ್ವಿನಿ ಅನಂತ ಕುಮಾರ್‌ ಕಾಣಿಸಿಕೊಂಡಿದ್ದರು. ಆದರೆ ನಂತರ ಬಹಿರಂಗವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿಲ್ಲ. ಇನ್ನೊಂದೆಡೆ ಅವರು ಸಂಸ್ಥಾಪಕರಾಗಿರುವ ಅದಮ್ಯ ಚೇತನ ಸಂಸ್ಥೆಯ ಕೆಲ ಸಿಬ್ಬಂದಿಯೂ ಈ ಬಾರಿ ಪ್ರಚಾರದಲ್ಲಿ ಕಾಣಿಸಿಕೊಳ್ಳದಿರುವುದು ಕುತೂಹಲ ಮೂಡಿಸಿದೆ.

ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ಅದಮ್ಯ ಚೇತನ ಸಂಸ್ಥೆ ವತಿಯಿಂದಲೂ 100ಕ್ಕೂ ಹೆಚ್ಚು ಮಂದಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದರು. ಮನೆ ಮನೆ ಪ್ರಚಾರ, ಪಾದಯಾತ್ರೆಯಲ್ಲೂ ತೊಡಗಿಸಿ ಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಪಕ್ಷಕ್ಕೆ ಪ್ರಚಾರದ ವ್ಯವಸ್ಥೆ ತಪ್ಪುತ್ತಿತ್ತು. ಆದರೆ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಅದಮ್ಯ ಚೇತನ ಸಂಸ್ಥೆ ಸಿಬ್ಬಂದಿ ಪ್ರಚಾರದಲ್ಲಿ ಕಾಣಿಸಿಕೊಳ್ಳದಿರುವುದು ಸಹ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ತೇಜಸ್ವಿನಿ ಅನಂತ ಕುಮಾರ್‌ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ಶುಕ್ರವಾರ ಮಾಧ್ಯಮ ಸಂವಾದದಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ತೇಜಸ್ವಿನಿ ಅನಂತ ಕುಮಾರ್‌ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ನನ್ನ ಪ್ರಕಾರ ಅವರು ಖುಷಿಯಾಗಿದ್ದಾರೆ. ಈಗಾಗಲೇ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ನಡೆಸಿದ ರೋಡ್‌ ಶೋ ನಲ್ಲಿ ಪಾಲ್ಗೊಂಡಿದ್ದಾರೆ. ಹಾಗಾಗಿ ಯಾವುದೇ ಸಮಸ್ಯೆ ಇದ್ದಂತಿಲ್ಲ ಎಂದು ಹೇಳಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕವಾಗಿರುವ ಬಗ್ಗೆ ತೇಜಸ್ವಿನಿ ಅನಂತ ಕುಮಾರ್‌ ಅವರು ಈವರೆಗೆ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಅವರ ಮುಂದಿನ ನಡೆ ಏನಿರಲಿದೆ ಎಂಬ ಕುತೂಹಲ ಮೂಡಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ತೇಜಸ್ವಿನಿ ಅನಂತ ಕುಮಾರ್‌ ಅವರಿಗೆ ಅವಕಾಶ ಕೈತಪ್ಪಿರುವ ಬಗ್ಗೆ ಪಕ್ಷದ ಕೆಲ ಮುಖಂಡರು, ಬೆಂಬಲಿಗರು, ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿರುವುದು ನಿಜ. ಆದರೆ ಇದು ಗುಪ್ತ ಗಾಮಿನಿಯಾಗಿ ಪರಿಣಾಮ ಬೀರುವುದೇ ಅಥವಾ ಸಾಂದರ್ಭಿಕ ಅಸಮಾಧಾನ ಕ್ರಮೇಣ ಮರೆಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. ಮುಂದಿನ ದಿನಗಳಲ್ಲಿ ಅವರು ಪ್ರಚಾರಕ್ಕೆ ಬರುವ ವಿಶ್ವಾಸವಿದೆ ಎಂದು ಬಿಜೆಪಿ
ನಾಯಕರೊಬ್ಬರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next