Advertisement

Poornachandra Tejaswi: ಬಿಡದೆ ಕಾಡುವ ಮೂಡಿಗೆರೆಯ ಮಾಯಾವಿ!

12:52 PM Jul 28, 2024 | Team Udayavani |

ಪರಿಸರ ಪ್ರಿಯ, ಕೃಷಿಕ, ಸಾಹಿತಿ, ತಂತ್ರಜ್ಞ, ಛಾಯಾಗ್ರಾಹಕ, ಪಕ್ಷಿ ತಜ್ಞ, ವಿಜ್ಞಾನಿ, ವಿದ್ವಾಂಸ- ಈ ಎಲ್ಲಾ ಪಾತ್ರಗಳಲ್ಲೂ “ಬದುಕಿ’ ಮಹತ್ವದ್ದನ್ನು ಸಾಧಿಸಿದವರು. ಕೆ. ಪಿ. ಪೂರ್ಣಚಂದ್ರ ತೇಜಸ್ವಿ. ಕನ್ನಡದ ಓದುಗರ ಪಾಲಿಗೆ ಮೋಹವಾಗಿ, ವಿಸ್ಮಯವಾಗಿ ಕಂಡಿದ್ದು ಅವರ ಹೆಗ್ಗಳಿಕೆ. ಜು. 28 ಮತ್ತು 29 ರಂದು ಬೆಂಗಳೂರಿನಲ್ಲಿ ನಡೆವ ಕಾರ್ಯಕ್ರಮದಲ್ಲಿ ಮತ್ತೂಮ್ಮೆ “ತೇಜಸ್ವಿ ದರ್ಶನ’ ಆಗಲಿದೆ…

Advertisement

ಒಮ್ಮೆ ತೇಜಸ್ವಿಯವರು ಕಡ್ಡಿಯೊಂದನ್ನು ಕೈಲಿ ಹಿಡಿದು ಕಸದ ರಾಶಿಯನ್ನು ಕೆದಕುತ್ತಾ ನಿಂತಿದ್ದರು. ಈ ಮಾರಾಯ ಇಲ್ಲೇನು ಹುಡುಕುತ್ತಿರಬಹುದೆಂಬ ಕುತೂಹಲ, ನೋಡಿದವರಿಗೆ. ವಿಚಾರಿಸಿದಾಗ ಗೊತ್ತಾಗಿದ್ದೇನೆಂದರೆ; ರಸ್ತೆಯಂಚಿನಲ್ಲೇ ಇರುವ ತೇಜಸ್ವಿಯವರ ತೋಟದೊಳಗೆ ಯಾರೋ ಒಂದು ಲೋಡ್‌ ಆಗುವಷ್ಟು ಕಸ ತಂದು ಸುರಿದು ಹೋಗಿದ್ದರು. ಯಾರಿರಬಹುದೆಂದು ಪತ್ತೆ ಹಚ್ಚಲು ತೇಜಸ್ವಿ ಕೈಯಲ್ಲಿ ಕೋಲು ಹಿಡಿದು ಕಸ ಕೆದಕುತ್ತಿದ್ದರು. ಹಾಗೆ ಕೆದಕುವಾಗ ಕಸದಲ್ಲಿ ವಿಳಾಸವಿದ್ದ ಪತ್ರಗಳು, ಇನ್ವಿಟೇಷನ್‌ಗಳು ದೊರೆತವು. ಅದರ ನೆರವಿನಿಂದ ಕಸ ಸುರಿದವರನ್ನು ಪತ್ತೆ ಮಾಡಿದ ತೇಜಸ್ವಿ ಅವರನ್ನ ಕರೆಸಿ, ಚೆನ್ನಾಗಿ ಉಗಿದು, ಕಸವನ್ನೆಲ್ಲ ಅಲ್ಲಿಂದ ಎತ್ತಿಕೊಂಡು ಹೋಗುವ ಹಾಗೆ ಮಾಡಿದರು.

ಹಳ್ಳಿ ಜನಕ್ಕೆ ಹೇಳಿಕೊಡ್ರಿ…

ನಾನೊಮ್ಮೆ ನಮ್ಮ ಕಾಲೇಜಿನ ಎನ್‌.ಎಸ್‌.ಎಸ್‌. ಶಿಬಿರಕ್ಕೆ ಬನ್ನಿ ಸಾರ್‌ ಅಂತ ಕರೆದಿದ್ದೆ. ಹೀಗೆ ಕರೆದರೆ ಬೈಯ್ದು ಬಿಡುತ್ತಿದ್ದ ಅವರು ಆ ದಿನ ಮಾತ್ರ ಸಮಾಧಾನ­ದಿಂದ-“ನೀವ್‌ ಯಾವ್ವಾದ್ರೂ ಒಂದು ಹಳ್ಳಿಗೆ ಹೋಗ್ತಿàರಲ್ಲ. ಅಲ್ಲಿ ಪ್ರತ್ಯೇಕವಾದ ಮೂರು ಡಸ್ಟ್ ಬಿನ್‌ ಇಟಿºಟ್ಟು ಅದರಲ್ಲಿ ಒಣ ಕಸ, ಹಸಿ ಕಸ ಮತ್ತು ಗಾಜು, ಪ್ಲಾಸ್ಟಿಕ್‌ನೆಲ್ಲಾ ಬೇರೆ ಬೇರೆ ಮಾಡಿ ಆಯಾ ಕಸದ ಡಬ್ಬಿಗಳಿಗೆ ತುಂಬಿಸೋದನ್ನ ಆ ಹಳ್ಳಿಯವರಿಗೆ ಕಲಿಸಿ. ಮುಂದೆ ಇದು ಇಡೀ ಜಗತ್ತಿನ ಗಮನ ಸೆಳೆಯೋ ಕೆಲಸವಾಗಿ ಮಾರ್ಪಡುತ್ತೆ. ಅದು ಬಿಟ್ಟು ಹುಡುಗ್ರನ್ನ ಗುಂಪು ಮಾಡ್ಕೊಂಡು ದೇವಸ್ಥಾನ, ಪಂಚಾಯ್ತಿ ಕಟ್ಟೆನೆಲ್ಲ ಎರಡು ದಿನ ಕ್ಲೀನ್‌ ಮಾಡಿ ವಾಪಸ್‌ ಬಂದ್ರೆ, ಮಾರ್ನೆ ದಿವಸದಿಂದ ಹಂಗೇ ಗಲೀಜು ಮಾಡ್ತಾರೆ’ ಅಂದಿದ್ದರು. ಕಾಡಲ್ಲಿ ಕೂತೇ ತೇಜಸ್ವಿ ಎಷ್ಟೆಲ್ಲ ಯೋಚನೆ ಮಾಡ್ತಿದ್ದರು!

Advertisement

ಸದ್ಯ ಡೈವೋರ್ಸ್‌ ಆಗೋದೊಳಗೆ ಬಂದ್ರಲ್ಲ!

ತೇಜಸ್ವಿಯವರ ಮದುವೆಗೆ ಆಹ್ವಾನ ಪತ್ರಿಕೆಯ ಬದಲು ಕುವೆಂಪು ಹಸ್ತಾಕ್ಷರದಲ್ಲಿ ಪತ್ರ ಬರೆದು, ಅದನ್ನು ಬ್ಲಾಕ್‌ ಮಾಡಿಸಿ ಇನ್‌ ಲ್ಯಾಂಡ್ ಲೆಟರಿನಲ್ಲಿ ಅಚ್ಚು ಹಾಕಿಸಿ, ಆಪ್ತ ಬಳಗಕ್ಕೆ ಕಳಿಸಲಾಗಿತ್ತು. ಅದರಲ್ಲಿ ಕುವೆಂಪು ಅವರು-ತೇಜಸ್ವಿ ಮತ್ತು ರಾಜೇಶ್ವರಿಯವರು ಮೂಡಿಗೆರೆಯಲ್ಲಿ ಮದುವೆಯಾಗುತ್ತಿರುವ ವಿವರ ಬರೆದು, ಅನುಕೂಲ, ವಿರಾಮ ದೊರೆತಾಗ ಅವರ ತೋಟದ ಮನೆ “ಚಿತ್ರಕೂಟ’ಕ್ಕೆ ಆಗಮಿಸಿ ವಧೂವರರ ಆತಿಥ್ಯ ಸ್ವೀಕರಿಸಿ, ಆಶೀರ್ವದಿಸ­ಬೇಕೆಂದು ಬರೆದಿದ್ದರು.

ಇದಾದ ಎಷ್ಟೋ ವರುಷಗಳ ಬಳಿಕ ವಿಮರ್ಶಕರಾದ ಗಿರಡ್ಡಿ ಗೋವಿಂದರಾಜ ಅವರು ತೇಜಸ್ವಿಯವರ ತೋಟಕ್ಕೆ ಬಂದರು. ಮಾತಿನ ನಡುವೆ, ನಿಮ್ಮ ತಂದೆಯವರು ಆಹ್ವಾನ ಪತ್ರದಲ್ಲಿ ನಿಮಗೆ ಅನುಕೂಲ, ವಿರಾಮ ದೊರೆ­ತಾಗ ಬರಲು ಹೇಳಿ­ದ್ದರು. “ನನಗೆ ಇವತ್ತು ಅನುಕೂಲ ಆಯ್ತು ನೋಡಿ, ಅದಕ್ಕೆ ಇಷ್ಟು ವರ್ಷ­ಗಳಾದ ಮೇಲೆ ಬಂದೀನಿ’ ಎಂದು ಹಾಸ್ಯ ಚಟಾಕಿ ಹಾರಿಸಿದರು. ಆಗ ತೇಜಸ್ವಿ ನಗುತ್ತಾ- “ಸದ್ಯ ನಮ್ಮ ಡೈವೋರ್ಸ್‌ ಆಗೋದ್ರೊಳಗೆ ಬಂದ್ರಲ್ಲ!’ ಎಂದಾಗ ಅಷ್ಟಾಗಿ ನಗುಮುಖದಲ್ಲಿ ಕಾಣಿಸಿಕೊಳ್ಳದ ಗಿರಡ್ಡಿಯವರೂ ಜೋರಾಗಿ ನಕ್ಕುಬಿಟ್ಟರು.

ತೇಜಸ್ವಿ ಹಾಡಿದ ಹಾಡು

ತೇಜಸ್ವಿಯವರು ಹಾಡಿದ ಹಾಡೊಂದನ್ನು ರಾಜೇಶ್ವರಿಯವರು “ನನ್ನ ತೇಜಸ್ವಿ’ಯಲ್ಲಿ ನೆನೆದಿದ್ದಾರೆ. ಅದು ಸುಸ್ಮಿತಾ ಹುಟ್ಟಿದ ದಿನಗಳ ಕಾಲ. ಮಗುವನ್ನು ಕರೆದುಕೊಂಡು ರಾಜೇಶ್ವರಿಯವರು ತೋಟದ ಮನೆಗೆ ಮರಳಿದ್ದರು. ವಿಪರೀತ ಮಳೆ, ಚಳಿಗಳಿದ್ದ ಕಾರಣ ಮಗುವಿಗೆ, ಬಾಣಂತಿಗೆ ಹಂಡೆಯಲ್ಲಿ ಸದಾ ಬಿಸಿನೀರಿನ ಅಗತ್ಯವಿತ್ತು. ಆಗಾಗ ಒದ್ದೆಯಾಗುತ್ತಿದ್ದ ಚಿಕ್ಕ ಮಗುವಿನ ಬಟ್ಟೆ ತೊಳೆಯಲು, ಕೈ ಕಾಲು ತೊಳೆಯಲು ಮತ್ತು ಸ್ನಾನದ ಆಗತ್ಯಗಳಿಗೆ ಬಿಸಿನೀರಿರಲೇಬೇಕಲ್ಲ… ಬೆಳಗ್ಗೆ ಎದ್ದ ತಕ್ಷಣ ತೇಜಸ್ವಿಯವರು ಬಚ್ಚಲಿನ ಹಂಡೆ ಒಲೆಗೆ ಸೌದೆ ತುಂಬಿ, ಉರಿ ಮಾಡುತ್ತಿದ್ದ ಸಮಯದಲ್ಲಿ ಒಂದು ದಿನ ಹಾಡು ಹೇಳಿಕೊಳ್ಳುತ್ತಿರುವುದು ರಾಜೇಶ್ವರಿಯವರ ಕಿವಿಗೆ ಬಿತ್ತು.

ಎಂದೂ ಬಾರದ ಮಳೆ ಬಂದಿತಣ್ಣ,/ ಎಂದೂ ಬಾರದ ಮಳೆ ಬಂದಿತಣ್ಣ! /ಎಂದೂ ಬಾರದ ಮಳೆ ಬಂದಿದ್ದ ಕಂಡು /ಬೀರಣ್ಣ ಕುರಿಗಳ ಬಿಟ್ಟನಣ್ಣ, /ಬೀರಣ್ಣ ಕುರಿಗಳ ಬಿಟ್ಟಿದ್ದ ಕಂಡು/ ತೋಳಣ್ಣ ಕುರಿಗಳ ಹೊತ್ತನಣ್ಣಾ…

ಎಂದು ತೇಜಸ್ವಿ ಹಾಡಿಕೊಳ್ಳುತ್ತಿದ್ದರು. “ತೋಳಣ್ಣ ಕುರಿಮರಿ ಹೊತ್ತಿದ್ದ ಕಂಡು, ಬೀರಣ್ಣ ಬಿಕ್ಕಿ ಬಿಕ್ಕಿ ಅತ್ತನಣ್ಣ’ ಎಂದು ಕೊನೆಗೊಳ್ಳುವ ಈ ಹಾಡನ್ನು ಕೇಳಿದ ಮಕ್ಕಳೆಲ್ಲ “ಅಯ್ಯಯ್ಯೋ ಪಾಪ!’ ಎನ್ನದಿರರು. ಅಪರೂಪಕ್ಕೆ ಈ ಹಾಡನ್ನು ಹಾಡಿಕೊಂಡು ಬಿಸಿನೀರು ಕಾಯಿಸುತ್ತಿದ್ದ ತೇಜಸ್ವಿಯವರ ಮನೋಲಹರಿಯನ್ನು ಕಂಡ ರಾಜೇಶ್ವರಿಯವರು “ಇದೇ ಅವರ ಬಾಯಲ್ಲಿ ಮೊದಲ ಬಾರಿಗೆ ಕೇಳಿದ ಹಾಡು’ ಎಂದು ಸ್ಮರಿಸಿದ್ದಾರೆ.

ಜನಕ್ಕೂ, ದನಕ್ಕೂ ವ್ಯತ್ಯಾಸವಿಲ್ಲ!

ತೇಜಸ್ವಿಯವರ ಪುಸ್ತಕಗಳನ್ನು ಓದಿದವರಿಗೆಲ್ಲ ಅದರ ಟೆಕ್ನಿಕಲ್‌ ಪೇಜಿನಲ್ಲಿರುವ ಬಾಪು ದಿನೇಶರ ಹೆಸರು ಪರಿಚಯವಿದ್ದೇ ಇರುತ್ತದೆ. ಒಮ್ಮೆ ಭದ್ರಾ ನದಿ ತೀರಕ್ಕೆ ಮೀನು ಹಿಡಿಯಲು ತೇಜಸ್ವಿಯವರ ಸ್ಕೂಟರಿನಲ್ಲಿ ದಿನೇಶ್‌ ಹೋಗುತ್ತಿದ್ದರು. ತೇಜಸ್ವಿಯವರು ರಸ್ತೆಯಲ್ಲಿದ್ದ ಗುಂಡಿಯನ್ನು ನೋಡದೆ ನೆಗೆಸಿದ ಪರಿಣಾಮ ದಿನೇಶ್‌ ಕೆಳಗೆ ಬಿದ್ದು ಬಿಟ್ಟರು. ಮೈ ಕೈ ತರಚಿ ರಕ್ತ ಸುರಿಯುತ್ತಿತ್ತು. “ನಿಂಗೆ ಸ್ಕೂಟರಲ್ಲಿ ಸರಿಯಾಗಿ ಕೂರಕ್ಕೂ ಬರಲ್ವೇನೋ ಮಾರಾಯ!’ ಎಂದು ಬೈಯುತ್ತಲೇ ಸ್ವಲ್ಪ ದೂರದಲ್ಲಿದ್ದ ಆಸ್ಪತ್ರೆಗೆ ನುಗ್ಗಿದ ತೇಜಸ್ವಿಯವರು-“ಸ್ವಲ್ಪ ಕಾಟನ್‌ ಕೊಡಿ, ಟಿಂಚರ್‌ ಕೊಡಿ ಎಂದು ಆಸ್ಪತ್ರೆಯವರಿಂದ ಕೇಳಿ ಪಡೆದು, ತಾವೇ ಕೈಯಾರ ಗಾಯಗಳನ್ನು ಶುಚಿ ಮಾಡಿ, ಟಿಂಚರ್‌ ಹಚ್ಚಿದರು. ಉರಿಯಿಂದ ಒದ್ದಾಡುತ್ತಿದ್ದ ದಿನೇಶರನ್ನು “ಏನಾಗಲ್ಲ ಸುಮ್ಮಿರು’ ಎಂದು ಗದರಿಕೊಂಡು ಹೊರಗೆ ಬಂದರು. ಕತ್ತೆತ್ತಿ ನೋಡಿದ ದಿನೇಶ್‌ಗೆ ಗಾಬರಿ, ಏಕೆಂದರೆ ಅವರು ಹೋಗಿದ್ದು ಪಶು ವೈದ್ಯಕೀಯ ಆಸ್ಪತ್ರೆ! “ಇಲ್ನೋಡಿ ಸಾರ್‌, ದನದ ಆಸ್ಪತ್ರೆಗಾ ಕರ್ಕಂಬರಾದು?’ ಎಂದ ದಿನೇಶ್‌ಗೆ ತೇಜಸ್ವಿ ಹೇಳಿದರು: ಜನಕ್ಕೂ, ದನಕ್ಕೂ ಒಂದೇ ಔಷಧಿ ಕಣೋ, ಅದ್ರಲ್ಲೇನೂ ವ್ಯತ್ಯಾಸ ಇಲ್ಲ, ಏನು ಆಗಲ್ಲ ಬಾ!

-ಸತ್ಯನಾರಾಯಣ ಎಚ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next