ಬೆಂಗಳೂರು: ಸ್ವಾತಂತ್ರ್ಯೋತ್ಸವದ 75 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ, ಭಾನುವಾರದಂದು ಇತರ ಸೈಕ್ಲಿಸ್ಟ್ ಗಳೊಂದಿಗೆ “ಸೈಕಲ್ ಟು ಫ್ರೀಡಮ್” ಅಭಿಯಾನದ ಅಂಗವಾಗಿ ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿನ ವಿಧಾನ ಸೌಧದಿಂದ ಕೋಲಾರದವರೆಗೆ 75 ಕಿಮೀ ಸೈಕ್ಲಥಾನ್ ನಡೆಸಿದರು.
ಬೆಳಿಗ್ಗೆ 7 ಘಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ನಂತರ 5 ಘಂಟೆಗಳ ಅವಧಿಯಲ್ಲಿ ನಗರದ 450ಕ್ಕೂಅಧಿಕ ಉತ್ಸಾಹಿ ಸೈಕ್ಲಿಸ್ಟ್ ಗಳೊಂದಿಗೆ ಸೈಕ್ಲಥಾನ್ ಆರಂಭಗೊಂಡಿತು. ನರಸಾಪುರದಿಂದ ಕೋಲಾರ ಸಂಸದ ಎಸ್ ಮುನಿಸ್ವಾಮಿ ಜೊತೆಗೂಡಿದರು.
ಇದನ್ನೂ ಓದಿ:ಶ್ರವಣಬೆಳಗೊಳಕ್ಕೆ ಶೀಘ್ರವೇ ನಮೋ ಭೇಟಿ : ಪ್ರಧಾನಿ ಮೋದಿ ಆಗಮನದಿಂದ ಹೊಸ ಸಂಚಲನ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ” ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ರವರ ಕರೆಯ ಮೇರೆಗೆ ಕ್ರೀಡೆ ಮತ್ತು ಸದೃಢ ಆರೋಗ್ಯ ವೃದ್ಧಿಗೆ ಸಾಕಷ್ಟು ಉತ್ತೇಜನ ದೊರಕಿದ್ದು, ವಿಶ್ವ ಯೋಗ ದಿನಾಚರಣೆ, ಫಿಟ್ ಇಂಡಿಯಾ ಅಭಿಯಾನ, ಒಲಂಪಿಕ್ಸ್ ಕ್ರೀಡೆಗಳನ್ನು ಒಳಗೊಂಡಂತೆ ಅನೇಕ ಉತ್ತೇಜನ ಕ್ರಮಗಳನ್ನು ಕೈಗೊಳ್ಳಲಾಗಿದೆ. “ಸೈಕಲ್ ಟು ಫ್ರೀಡಮ್” ನ ಮೂಲಕ ಪ್ರಧಾನಿ ಮೋದಿ ಆಶಯಕ್ಕೆ ಬೆಂಗಳೂರಿನ ಸೈಕ್ಲಿಂಗ್ ಸಮುದಾಯ ಜೊತೆಗೂಡಿದ್ದು ಅನುಕರಣೀಯ” ಎಂದರು.
ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಡಾ. ಕೆ ವೈ ವೆಂಕಟೇಶ್, ಪ್ಯಾರಾ ಅಥ್ಲೀಟ್ ಪಟು ಆನಂದ್ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.