Advertisement

25 ವರ್ಷದ ಅಭಿವೃದ್ಧಿಯ ದೂರದೃಷ್ಟಿ: ಬಜೆಟ್‌ ವಿಶ್ಲೇಷಣೆ ಸಂವಾದದಲ್ಲಿ ಸಂಸದ ತೇಜಸ್ವಿ ಸೂರ್ಯ

11:28 PM Feb 05, 2023 | Team Udayavani |

ಮಂಗಳೂರು: ಮುಂದಿನ 25 ವರ್ಷಗಳಲ್ಲಿ ದೇಶದ ಅಭಿವೃದ್ಧಿ ಹೇಗಿರಬೇಕು ಎನ್ನುವ ದೂರದೃಷ್ಟಿಗೆ ನೀಲನಕ್ಷೆ ರೂಪದಲ್ಲಿ ಈ ಬಾರಿ ಕೇಂದ್ರದ ಬಜೆಟ್‌ ಮಂಡನೆಯಾಗಿದೆ ಎಂದು ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.

Advertisement

ದ.ಕ. ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠ ವತಿಯಿಂದ ರವಿವಾರ ಡೊಂಗರಕೇರಿ ಕೆನರಾ ಹೈಸ್ಕೂಲ್‌ ಸಭಾಂಗಣದಲ್ಲಿ ಆಯೋಜಿಸಲಾದ “ಕೇಂದ್ರ ಬಜೆಟ್‌ ವಿಶ್ಲೇಷಣೆ-2023 ಒಂದು ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

8 ವರ್ಷಗಳಲ್ಲಿ ಸರಕಾರ ದೇಶದ ಸಮೃದ್ಧಿಶೀಲ ಭವಿಷ್ಯಕ್ಕೆ ಅಡಿಪಾಯ ಹಾಕುವ ಕೆಲಸ ಮಾಡಿದೆ. ಮುಖ್ಯವಾಗಿ 49.5 ಕೋಟಿ ಮಂದಿಗೆ ಮೊದಲ ಬಾರಿಗೆ ಬ್ಯಾಂಕ್‌ ಖಾತೆ, 12 ಕೋಟಿ ಮನೆಗಳಲ್ಲಿ ಶೌಚಾಲಯ, 9.5 ಕೋಟಿ ಎಲ್‌ಪಿಜಿ ಸಂಪರ್ಕ, 26 ಲಕ್ಷ ಮನೆಗಳಿಗೆ ನೀರಿನ ಸಂಪರ್ಕಗಳನ್ನು ಒದಗಿಸಿರುವುದು ಸಹಿತ ವಿವಿಧ ಕಾರ್ಯಕ್ರಮಗಳ ಮೂಲಕ ಭದ್ರ ಬುನಾದಿ ಹಾಕಲಾಗಿದೆ ಎಂದರು.

ಪ್ರಪಂಚದ 5ನೇ ಅತೀ ದೊಡ್ಡ ಶಕ್ತಿ
2013ರ ಮೊದಲು ಭಾರತದ ಆರ್ಥಿಕತೆಗೆ ವಿಶ್ವಸ್ತರದಲ್ಲಿ ಫ್ರೆಜೈಲ್‌-5 ಎನ್ನಲಾಗುತ್ತಿತ್ತು. ಕ್ಷೀಣವಾಗಿರುವ ಅರ್ಥಿಕ ವ್ಯವಸ್ಥೆಗಳಲ್ಲಿ ಭಾರತವೂ ಒಂದಾಗಿತ್ತು. 8-9 ವರ್ಷಗಳ ನಿರಂ ತರ ಪ್ರಯತ್ನ, ಸುಶಾಸನ, ಬಜೆಟ್‌ಗಳಲ್ಲಿ ಮಾಡಲಾದ ನಿಯಮ ಬದಲಾ ವಣೆ, ಭ್ರಷ್ಟಾಚಾರ ರಹಿತ ಆಡಳಿತ, ರಾಜಕೀಯ ಸ್ಥಿರತೆ ಮೊದಲಾದ ಕಾರಣದಿಂದಾಗಿ ಫ್ರೆಜೈಲ್‌-5ರಿಂದ ಭಾರತ ಹೊರಬಂದು ಪ್ರಪಂಚದ 5ನೇ ಅತೀದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದರು.

ಕೃಷಿ, ಆರೋಗ್ಯ ಕ್ಷೇತ್ರಕ್ಕೆ ಭರಪೂರ
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಯುಪಿಐ ಮಾದರಿಯಲ್ಲಿ ಕಾಮನ್‌ ಸಾಫ್ಟ್‌ವೇರ್‌ ನಿರ್ಮಾಣ ಮಾಡುವ ಮಹತ್ವಪೂರ್ಣ ಯೋಜನೆ ಈ ಬಾರಿಯ ಬಜೆಟ್‌ನಲ್ಲಿ ರಚಿಸಲಾಗಿದೆ. ಕೃಷಿಗೆ ಸಂಬಂಧಿಸಿದ ಉಪಕರಣಗಳು ತಯಾರಿಸುವ ಸ್ಟಾರ್ಟಪ್‌ಗ್ಳಿಗೆ ಎಗ್ರಿಲ್‌ಕಲ್ಚರ್‌ ಆ್ಯಕ್ಸಿಲರೇಟರ್‌ ಫಂಡ್‌ ಘೋಷಣೆ ಮಾಡಲಾಗಿದೆ. ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿ ಕಳೆದ 8 ವರ್ಷದಲ್ಲಿ ನಿರ್ಮಾಣವಾಗಿರುವ 157 ಮೆಡಿಕಲ್‌ ಕಾಲೇಜುಗಳಿಗೆ ಪೂರಕವಾಗಿ 157 ನರ್ಸಿಂಗ್‌ ಕಾಲೇಜುಗಳನ್ನು ಘೋಷಿಸ‌ಲಾಗಿದೆ ಎಂದರು.

Advertisement

ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಮೇಯರ್‌ ಜಯಾನಂದ ಅಂಚನ್‌, ಕೆನರಾ ಇಂಡಸ್ಟ್ರಿಯಲ್‌ ಅಸೋಸಿಯೇಶನ್‌ ಬೈಕಂಪಾಡಿ ಅಧ್ಯಕ್ಷ ಅನಂತೇಶ ಪ್ರಭು, ಅಭಿವ್ಯಕ್ತ ಪರಿಷತ್‌ ಅಧ್ಯಕ್ಷ ರವೀಂದ್ರನಾಥ್‌ ಪಿ.ಎಸ್‌., ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್‌ ರೈ, ಅರ್ಥಿಕ ಪ್ರಕೋಷ್ಠ ರಾಜ್ಯ ಸದಸ್ಯ ಚಿದಾನಂದ ಉಚ್ಚಿಲ್‌ ಉಪಸ್ಥಿತರಿದ್ದರು.

ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕ ಶಾಂತಾರಾಮ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು.

ರಾಹುಲ್‌ ಗಾಂಧಿ ಕನ್‌ಫ್ಯೂಸ್‌
ದೇಶದಲ್ಲಿ ನಿರುದ್ಯೋಗ ಇದೆ ಎಂದು ಭಾರತ್‌ ಜೋಡೋ ಯಾತ್ರೆ ವೇಳೆ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ನಿರುದ್ಯೋಗದ ವಿಷಯದಲ್ಲಿ ಅವರು ಕನ್‌ಫ್ಯೂಸ್‌ ಮಾಡಿಕೊಂಡಿದ್ದಾರೆ. ಕಳೆದ 8 ವರ್ಷಗಳ‌ಲ್ಲಿ ದೇಶದಲ್ಲಿ ಪಿಎಫ್‌ಒ ನೋಂದಣಿ 9.5 ಕೋಟಿಯಿಂದ 27 ಕೋಟಿಗೆ ಏರಿಕೆಯಾಗಿದೆ. ಇದು ದೇಶದಲ್ಲಿ ಎಷ್ಟು ಮಂದಿ ಉದ್ಯೋಗ ಪಡೆಯುತ್ತಿದ್ದಾರೆ ಎನ್ನುವುದನ್ನು ಸೂಚಿ ಸುತ್ತದೆ ಎಂದು ತೇಜಸ್ವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next