Advertisement

ತೇಜಸ್ವಿ ಎಂಬ ಮ್ಯಾಜಿಕ್‌

12:26 PM Sep 09, 2017 | |

ತೇಜಸ್ವಿ ಎಷ್ಟು ನಿಜವೋ ಅಷ್ಟೇ ಅವರ ಸ್ಕೂಟರ್‌ ಸಹ ನಿಜ. ಅವರ ಪ್ಯಾರ, ಗಯ್ನಾಳಿಗಳು, ಎಂಗ್ಟ, ಮಂದಣ್ಣ, ಎಲ್ಲವೂ.. ತೇಜಸ್ವಿ ಎಂದರೆ ಎಲ್ಲರಿಗೂ ತೇಜಸ್ವಿ ಮಾತ್ರವಲ್ಲ. ಈ ಪಾತ್ರಗಳೆಲ್ಲಾ ಸೇರಿದ ಕೂಡು ಕುಟುಂಬ.

Advertisement

KA 01 ಗೂ KA-18ಗೂ ಎತ್ತಣಿಂದೆತ್ತ ಸಂಬಂಧವಯ್ಯ??

 ಜಿ.ಎನ್‌. ಮೋಹನ್‌ 

ನಿಜಕ್ಕೂ ಹೀಗೆ ಅನಿಸಿದ್ದು ಮೊನ್ನೆ ನ. ಸಂಪತ್‌ ಕುಮಾರ್‌ ಅವರ ಫೇಸ್‌ಬುಕ್‌ ವಾಲ… ನೋಡಿದಾಗ. “ಕಿರಗೂರಿನ ಗಯ್ನಾಳಿಗಳು’ ಸಿನಿಮಾದಲ್ಲಿ ಈತ ಒಂದೇ ಏಟಿಗೆ ಎಲ್ಲರನ್ನೂ ಆವರಿಸಿಕೊಂಡು ಬಿಡುವ ಉಳುಕು ತೆಗೆಯುವ ತಜ್ಞ. ಮೊನ್ನೆ ಅವರು ಗೆಳೆಯರೊಂದಿಗೆ ಟೀ ಕುಡಿಯಲೆಂದು ನಾಗರಬಾವಿಯ ರಸ್ತೆ ಬದಿ ಹೋಟೆಲ್‌  ಹೊಕ್ಕಿದ್ದಾರೆ. ಸೊರ್ರನೆ ಟೀ ಹೀರುತ್ತಾ  ನೋಡಿದರೆ ಒಂದು ಸ್ಕೂಟರ್‌ ಕಂಡಿದೆ. ಬೆಂಗಳೂರನ್ನು ಕಿಷ್ಕಿಂದೆ ಮಾಡಿರುವುದರಲ್ಲಿ ಈ ಸ್ಕೂಟರ್‌, ಬೈಕ್‌ಗಳ ಪಾತ್ರವೇನು ಕಡಿಮೆಯೇ?  ಹಾಗಂತ ಅವರೂ ಸುಮ್ಮನಿರುತ್ತಿದ್ದರೇನೋ… ಆದರೆ ಕ್ಷಣ ಮಾತ್ರದಲ್ಲಿ ಕೈಲಿದ್ದ ಕಪ್ಪನ್ನು ಕೆಳಗೆ ಇಟ್ಟವರೇ, ಓಡೋಡಿ ಆ ಸ್ಕೂಟರ್‌ನ ಬಳಿ ಹೋಗಿದ್ದಾರೆ. ಅಷ್ಟೇ ಅಲ್ಲ, ಕ್ಲಿಕ್‌ ಕ್ಲಿಕ್‌ ಕ್ಲಿಕ್‌ ಅಂತ ಸೆಲ್ಫಿ ಹೊಡೆದುಕೊಂಡಿದ್ದಾರೆ.

ಅಂಥಾದ್ದೇನಿತ್ತು ಆ ಸ್ಕೂಟರ್‌ನಲ್ಲಿ..? ಸ್ಕೂಟರ್‌ಗಳ ಮೇಲೆ ಈಗ ಕೇಸರಿ ಹನುಮಾನ್‌ನದ್ದೇ ಚಿತ್ರ. ಅದನ್ನು ಬಿಟ್ಟರೆ ಅಪ್ಪನ ಆಶೀರ್ವಾದ, ಅಮ್ಮನ ಆಶೀರ್ವಾದ.. ಅದೂ ಅಲ್ಲದಿದ್ದರೆ, ಗೌಡಾಸ್‌- ಕುರುಬಾಸ್‌ ಅಂತ ಜಾತಿ  ಮೊಹರು. ಅದಕ್ಕೂ ಆಚೆ ಸಿದ್ಧಲಿಂಗೇಶ್ವರ, ಜಡೆ ಮುನೇಶ್ವರ, ಮಲೆ ಮಹಾದೇವ ಅನ್ನೋ ದೇವರುಗಳು. ಆದರೆ ಈ ಸ್ಕೂಟರ್‌ ಅದಕ್ಕೆಲ್ಲಾ “ಬಾಯ್‌  ಬಾಯ್‌ ‘ ಹೇಳಿ ತನ್ನ ಇಡೀ ದೇಹದ ಮೇಲೆ ತೇಜಸ್ವಿಯವರ ಅಷ್ಟೂ ಕೃತಿಗಳ ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡು ನಿಂತಿತ್ತು!!.

Advertisement

“ನಿಗೂಢ ಮನುಷ್ಯ’ರಿಂದ ಹಿಡಿದು “ಮಾಯಾಲೋಕ’ದವರೆಗೆ, “ಪ್ಯಾಪಿಲಾನ್‌’ನಿಂದ ಹಿಡಿದು “ಪರಿಸರದ ಕಥೆಗಳ’ವರೆಗೆ, “ಅಬಚೂರಿನ ಪೋಸ್ಟಾಫೀಸಿ’ನಿಂದ ಹಿಡಿದು “ಜುಗಾರಿ ಕ್ರಾಸ್‌’ವರೆಗೆ, “ಅಲೆಮಾರಿ ಅಂಡಮಾನ್‌’ ನಿಂದ ಹಿಡಿದು “ವ್ಯಕ್ತಿ ವಿಶಿಷ್ಟ ಸಿದ್ಧಾಂತ’ದವರೆಗೆ..
ನಾನು ಫೋಟೋದಲ್ಲಿದ್ದ ಸ್ಕೂಟರ್‌ನ ರಿಜಿಸ್ಟ್ರೇಷನ್‌ ನಂಬರ್‌ ನೋಡಿದೆ KA-01. ಮೂಡಿಗೆರೆಯ ರಿಜಿಸ್ಟ್ರೇಷನ್‌ ನಂಬರ್‌ ಗೂಗಲ್‌ ಮಾಡಿದೆ KA 18.

ಅರೆ! ಆ ತಕ್ಷಣವೇ ಹೊಳೆದು ಹೋಯಿತು. ತೇಜಸ್ವಿ ಎನ್ನುವ ಮಾಯಾವಿಯ ತಾಕತ್ತೇ ಅದು..
ಅದಕ್ಕೆ ಗಡಿ ಗೋಡೆಗಳಿಲ್ಲ, ಹಾಗೆ ಗಾಡಿ ನಂಬರ್‌ ನೋಡಲು ಹೇಳಿಕೊಟ್ಟಿದ್ದೂ ತೇಜಸ್ವಿಯೇ. ಒಂದೇ ಸೀಟಿನ ತಮ್ಮ ಸ್ಕೂಟರ್‌ಅನ್ನು ದಂತಕಥೆಯಾಗಿಸುವ ಮೂಲಕ. ಯಾರಿಗೇ ಕೇಳಿ, ಅವರ ಸ್ಕೂಟರ್‌ ನಂಬರ MSN 6625 ಕಂಠಪಾಠ.

ಹಾಗಾಗಿಯೇ ತೇಜಸ್ವಿ ಬೆಂಗಳೂರಿಗೂ ಮೂಡಿಗೆರೆಗೂ, ಮೂಡಿಗೆರೆಗೂ ಜರ್ಮನಿಗೂ, ಜರ್ಮನಿಗೂ ದೆಹಲಿಗೂ ನಂಟು ಬೆಸೆದು ಹೋಗಿಬಿಟ್ಟರು. ತೇಜಸ್ವಿಯ ಹೊಸ ಪುಸ್ತಕ ಎಂದರೆ, 83ರ ನನ್ನ ಅಮ್ಮ, ಅಂದರೆ ಬಿ. ಎಂ. ವೆಂಕಟಲಕ್ಷ್ಮಮ್ಮ ಹೇಗೆ ಈಗಲೂ ಕಾತರಿಸುತ್ತಾರೋ ಹಾಗೆಯೇ ಜರ್ಮನಿಯ ವೂತ್ಸ್ì ಬರ್ಗ್‌ ವಿವಿಯ ವಿದ್ಯಾರ್ಥಿಗಳೂ ಕಾತರಿಸುತ್ತಾರೆ. ಟಿ ಪಿ ಅಶೋಕ ಅವರು ಕಮ್ಮಟ ನಡೆಸಿ ತೇಜಸ್ವಿ ಒಳಗಣ್ಣು ಪರಿಚಯಿಸುತ್ತಾ ಹೋದರೆ, ಬಿ. ಎ. ವಿವೇಕ ರೈ ಅವರು ಜರ್ಮನಿಯ ಪ್ರೊ ಬ್ರೂಕ್ನರ್‌ ಹಾಗೂ ಡಾ. ಕತ್ರಿನ್‌ ಬಿಂದರ್‌  ಕೂತು ತೇಜಸ್ವಿ ಕಥೆಗಳನ್ನು ಜರ್ಮನಿಗೆ ಅನುವಾದಿಸುತ್ತಾರೆ. 
ತೇಜಸ್ವಿ ಎನ್ನುವ “ಮ್ಯಾಜಿಕ್‌’ ಅನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಯತ್ನಿಸುತ್ತಿದ್ದೇನೆ. “ತೇಜಸ್ವಿ ಇನ್ನಿಲ್ಲ’ ಎಂದಾಗ ಅವರ ಅಪಾರ ಬಳಗದ ಒಳಹೊಕ್ಕು ನೋಡುವ ಅವಕಾಶ ನನಗೆ ಸಿಕ್ಕಿತ್ತು. ಹಾಗೆ ಶೋಕಿಸಿದವರು ಒಂದು ತಲೆಮಾರಿಗೆ ಸೇರಿದವರಲ್ಲ, ಬರೀ ಸಾಹಿತ್ಯ ಓದುವವರಲ್ಲ, ತೇಜಸ್ವಿ ಎಂಬ ನಿಗೂಢ ಲೋಕದಲ್ಲಿ ಟೆಕ್ಕಿಗಳಿದ್ದರು,  ಪರಿಸರವಾದಿಗಳಿದ್ದರು, ಚಾರಣಿಗರಿದ್ದರು, ಫೋಟೋಗ್ರಾಫ‌ರ್‌ಗಳಿದ್ದರು, ಮೀನು ಹಿಡಿಯುವ ಹುಚ್ಚಿನವರು, ಗೂಬೆ ಅಧ್ಯಯನ ಮಾಡುವವರೂ, ಹಕ್ಕಿ ಕುಕಿಲುಗಳನ್ನು ದಾಖಲಿಸುವವರು.. ಕುಡಿ ಮೀಸೆ ಮೂಡುತ್ತಿದ್ದವರೂ, ಹಣ್ಣಣ್ಣು ಗಡ್ಡದವರು ಎಲ್ಲರಿಗೂ ತೇಜಸ್ವಿ ಸೇರಿ ಹೋಗಿದ್ದರು. 

ತೇಜಸ್ವಿ ಎಷ್ಟು ನಿಜವೋ ಅಷ್ಟೇ ಅವರ ಸ್ಕೂಟರ್‌ ಸಹ ನಿಜ. ಅವರ ಪ್ಯಾರ, ಗಯ್ನಾಳಿಗಳು, ಎಂಗ್ಟ, ಮಂದಣ್ಣ, ಎಲ್ಲವೂ… ತೇಜಸ್ವಿ ಎಂದರೆ ಎಲ್ಲರಿಗೂ ತೇಜಸ್ವಿ ಮಾತ್ರವಲ್ಲ. ಈ ಪಾತ್ರಗಳೆಲ್ಲಾ ಸೇರಿದ ಕೂಡು ಕುಟುಂಬ. ಹಾಗಾಗಿ ಎಲ್ಲರೂ ತೇಜಸ್ವಿಯನ್ನು ಎಷ್ಟು ಪ್ರೀತಿಸಿದರೋ ಅವರ ಪಾತ್ರಗಳನ್ನೂ ಅಷ್ಟೇ ಪ್ರೀತಿಸಿದರು. 

ಈಗಲೂ ಬೆಂಗಳೂರು ವಿವಿಯ ಕನಸುಗಣ್ಣಿನ ಹುಡುಗ ಶಿವಪ್ರಸಾದ್‌ರ ಫೇಸ್‌ಬುಕ್‌ ಹೊಕ್ಕರೆ ಸಾಕು; ಅಲ್ಲಿ ತೇಜಸ್ವಿ ತೇಜಸ್ವಿ ತೇಜಸ್ವಿ ! ಈಶ್ವರಪ್ರಸಾದ್‌ರ ಮನೆಯ ಬಾಗಿಲು ತಟ್ಟಿದರೆ ಅಲ್ಲಿ ಹಕ್ಕಿ, ಗೂಗೆ, ಜೇಡ.. ಹೀಗೆ ತೇಜಸ್ವಿಗೆ ಪ್ರಿಯವಾದ ಎಲ್ಲವೂ ಇವೆ. ತೇಜಸ್ವಿ ನೆನಪುಗಳನ್ನು ಬದುಕುತ್ತಿವೆ. “ಅವಿರತ’ದ ಗೆಳೆಯರಿಗೆ ತೇಜಸ್ವಿ ಎನ್ನುವುದು ಗುಂಗು. ಆ.ನ. ರಾವ್‌ ಜಾಧವ್‌ ಅವರಿಗೆ ತೇಜಸ್ವಿ ಕೃತಿಗಳನ್ನು ರಂಗಕ್ಕೇರಿಸುವುದು ಎಂದರೆ ಮಹಾನ್‌ ಉತ್ಸಾಹ. ಸುಮನಾ ಕಿತ್ತೂರ್‌ ಕೈಯಲ್ಲಿ ಗಯ್ನಾಳಿಗಳಿಗೆ ಹಿರಿ ತೆರೆ ಪ್ರವೇಶ,  ಮಾತನಾಡುವುದನ್ನು ನಿಲ್ಲಿಸಿಯೇ ವರ್ಷಗಳಾಗಿ ಹೋಗಿರುವ ಬೆಂಗಳೂರಿನ ಮೌನಿ ಸ್ವಾಮಿಗೆ ತೇಜಸ್ವಿಯವರ ಪುಸ್ತಕಗಳನ್ನು ಮಾರುವುದೇ ಪ್ರಿಯ. ಮೈಸೂರಿನ ವೈದ್ಯ ಪ್ರಾಧ್ಯಾಪಕ ರವೀಂದ್ರನಾಥ್‌ ಅವರಿಗೆ ತಮ್ಮ ವೈದ್ಯಕೀಯ ಕಾಲೇಜಿನಲ್ಲಿ ತೇಜಸ್ವಿ ಕಾರ್ಯಕ್ರಮ ನಡೆಸದಿದ್ದರೆ ಸಮಾಧಾನವಿಲ್ಲ. ತೇಜಸ್ವಿಯವರ ಮಾಯಾ ಲೋಕದಲ್ಲಿ ಎಷ್ಟೆಲ್ಲಾ. ಈ ಒಗಟು ಬಿಡಿಸುವ ರೀತಿ ನನಗೂ ತಿಳಿದಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next