ಪಟ್ನಾ : “ಸಾಧ್ಯವಿದ್ದರೆ ನನ್ನ ವಿರುದ್ಧ CBI ಚಾರ್ಜ್‌ಶೀಟ್ ಹಾಕಿಸಿ’ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಆಳುವ ಬಿಜೆಪಿ ಸರಕಾರಕ್ಕೆ ಸವಾಲು ಹಾಕಿದ್ದಾರೆ.
ಜೈಲು ಪಾಲಾಗಿರುವ ಲಾಲು ಅನುಪಸ್ಥಿತಿಯಲ್ಲಿ ಆರ್‌ಜೆಡಿ ಪಕ್ಷವನ್ನು ತೇಜಸ್ವಿ ಯಾದವ್ ರಾಜ್ಯದಲ್ಲಿ ಮುನ್ನಡೆಸುತ್ತಿದ್ದು ಸದಾ ಸುದ್ದಿಯ ಕೇಂದ್ರವಾಗಿದ್ದಾರೆ.
“ರಾಜ್ಯ ವಿಧಾನಸಭೆಯಿಂದ ಬೀದಿಯ ತನಕ ನಾನು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರಿಗೆ ಸಿಬಿಐಗೆ ಹೇಳಿ ನನ್ನ ವಿರುದ್ಧ ಚಾರ್ಜ್‌ಶೀಟ್ ಹಾಕಿಸುವಂತೆ ಬಹಿರಂಗವಾಗಿ ಸವಾಲು ಹಾಕಿದ್ದೇನೆ. ನನ್ನ ಹಾಗೆ ಚಾರ್ಜ್ ಶೀಟ್ ಹಾಕಿಸಿ ಎಂದು ಹೇಳಿರುವ ಯಾವುದೇ ನಾಯಕ ರಾಷ್ಟ್ರ ರಾಜಕಾರಣದಲ್ಲಿ ಇದ್ದಾರೆಯೇ ? ಎಂದು ತೇಜಸ್ವಿ ಕಟಕಿಯಾಡಿದ್ದಾರೆ.
ಸಿಬಿಐ ಅನ್ನು ಬಳಸಿಕೊಂಡು ಟೇಬಲ್ ಪಾಲಿಟಿಕ್ಸ್ ನಡೆಸುವವರು ನಿತೀಶ್ ಕುಮಾರ್ ಅವರಂತಹವರನ್ನು ಬೆದರಿಸಬಹುದೇ ಹೊರತು ನನ್ನನ್ನು ಅಲ್ಲ ಎಂದು ತೇಜಸ್ವಿ ಯಾದವ್ ಟ್ವಿಟರ್‌ನಲ್ಲಿ ಗುಡುಗಿದ್ದಾರೆ.
ತೇಜಸ್ವಿ ಅವರು ಈಚೆಗೆ ತನ್ನ ತಂದೆ ಲಾಲು ಪ್ರಸಾದ್ ಯಾದವ್ ಜೈಲು ಪಾಲಾದಾಗ ಅವರಿಗೆ ಜೈಲಲ್ಲಿ ಜೀವ ಬೆದರಿಕೆ ಇದೆ ಮತ್ತು ಇದಕ್ಕಾಗಿ ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ದೂರಿದ್ದರು.