ಪಟ್ನಾ : ಹೊಟೇಲ್-ಭೂಮಿ ಭ್ರಷ್ಟಾಚಾರ ಪ್ರಕರಣದಲ್ಲಿ ತನ್ನ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಕೊನೆಗೂ ಮೌನ ಮುರಿದಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, “ನನ್ನ ವಿರುದ್ಧ ವಿಪಕ್ಷಗಳು ದ್ವೇಷದ ರಾಜಕಾರಣ ನಡೆಸುತ್ತಿವೆ’ ಎಂದು ಆರೋಪಿಸಿದ್ದಾರೆ.
ಬಿಹಾರದಲ್ಲಿನ ಆರ್‌ಜೆಡಿ – ಜೆಡಿಯು – ಕಾಂಗ್ರೆಸ್‌ನ ಮಹಾ ಮೈತ್ರಿಕೂಟಕ್ಕೆ ಇದರಿಂದ ಯಾವುದೇ ಧಕ್ಕೆ ಇಲ್ಲ ಎಂದು 27ರ ಹರೆಯದ ತೇಜಸ್ವಿ ಯಾದವ್ ಹೇಳಿದರು.
“ನಾನು ಯಾವುದೇ ತಪ್ಪು ಮಾಡಿಲ್ಲ; ಇದು ಕೇವಲ ನನ್ನ ವಿರುದ್ಧದ ರಾಜಕೀಯ ಸಂಚು. ನನ್ನ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು. ನಾನು ಸಚಿವನಾಗಿ ಪದಗ್ರಹಣ ಮಾಡಿದ್ದಾಗ ಭ್ರಷ್ಟಾಚಾರಕ್ಕೆ ಶೂನ್ಯ ಸಹನೆ ತೋರುವ ಪ್ರತಿಜ್ಞೆ ಮಾಡಿದ್ದೇನೆ. ನಾನು ನಿರ್ವಹಿಸುತ್ತಿರುವ ಮೂರು ಇಲಾಖೆಗಳಲ್ಲಿ ಯಾವೊಂದರಲ್ಲೂ ಈ ತನಕ ಭ್ರಷ್ಟಾಚಾರದ ಪ್ರಕರಣಗಳಿಲ್ಲ’ ಎಂದು ತೇಜಸ್ವಿ ಹೇಳಿದರು.
ತನ್ನ ವಿರುದ್ಧದ ಸಿಬಿಐ ದಾಳಿಗೆ ಭಾರತೀಯ ಜನತಾ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಕಾರಣರೆಂದು ದೂರಿರುವ ತೇಜಸ್ವಿ, “ಬಿಹಾರದಲ್ಲಿನ ಮಹಾ ಘಟಬಂದನವನ್ನು ಮುರಿಯುವುದೇ ಅವರ ಉದ್ದೇಶವಾಗಿದೆ’ ಎಂದು ಆರೋಪಿಸಿದರು.
ನಿನ್ನೆ ಮಂಗಳವಾರ ನಡೆದಿದ್ದ ಜೆಡಿಯು ಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಲಾಲು ಪ್ರಸಾದ್ ಯಾದವ್ ಕುಟುಂಬ ಸದಸ್ಯರ ಮೇಲೆ ಸಿಬಿಐ, ಇಡಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿಯ ರಾಜೀನಾಮೆ ಬಗ್ಗೆ ಆರ್‌ಜೆಡಿ ನಾಲ್ಕು ದಿನಗಳ ಒಳಗೆ ತೀರ್ಮಾನಕ್ಕೆ ಬರಬೇಕು ಎಂದು ಗಡುವು ವಿಧಿಸಿದ್ದರು.