ಕುಣಿಗಲ್ : ತಾಲೂಕಿನ ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ವಿದ್ಯಾರ್ಥಿನಿಲಯಗಳಿಗೆ ದಿಢೀರ್ ಭೇಟಿ ನೀಡಿದ ತಹಶೀಲ್ದಾರ್ ಎಸ್.ವಿಶ್ವನಾಥ್ ಅಲ್ಲಿನ ಶೌಚಾಲಯದ ಅವ್ಯವಸ್ಥೆ ಕಂಡು ಇಲಾಖೆಯ ಸಿಬ್ಬಂದಿಗಳನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಪ್ರಸಂಗ ಹುಲಿಯೂರು ದುರ್ಗದಲ್ಲಿ ನಡೆಯಿತು.
ತಾಲೂಕಿನ ಹುಲಿಯೂರುದುರ್ಗದಲ್ಲಿ ಬಿಸಿಎಂ ಹಾಸ್ಟೆಲ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ ತಹಶೀಲ್ದಾರ್ ಸುಚಿತ್ವ, ಕುಡಿಯುವ ನೀರು,ಅಡುಗೆ ಕೋಣೆ, ವಿದ್ಯಾರ್ಥಿಗಳು ಮಲಗುವ ಕೊಠಡಿ, ಸ್ನಾನದ ಗೃಹ, ಶೌಚಾಲಯವನ್ನು ಪರಿಶೀಲಿಸಿದರು.
ಬಿಸಿಎಂ ಹಾಸ್ಟೆಲ್‌ನ ಶೌಚಾಲಯ ಸ್ವಚ್ಛತೆ ಇಲ್ಲದೆ ಗಬ್ಬೆದು ನಾರುತ್ತಿತ್ತು. ಇದನ್ನು ಕಂಡ ಎಸ್.ವಿಶ್ವನಾಥ್ ಅಡುಗೆ ಸಿಬ್ಬಂದಿಗಳ ವಿರುದ್ದ ಕೆಂಡಾಮಂಡಲರಾದರು, ನಿಮ್ಮ ಮನೆಯ ಶೌಚಾಲಯವನ್ನು ಇದೇ ರೀತಿ ಇಟ್ಟುಕೊಳ್ಳುತ್ತೀರಾ.. ಸರ್ಕಾರ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗಾಗಿ ಉಚಿತ ವಸತಿ, ಊಟ, ಪಠ್ಯ ಪುಸ್ತಕ, ಸಮವಸ್ತ್ರ ಮೊದಲಾದ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಆದರೆ ಹಾಸ್ಟೆಲ್‌ಗಳನ್ನು ಸುಚಿತ್ವವಾಗಿ ಇಟ್ಟುಕೊಳ್ಳದೇ ಈ ರೀತಿ ಇಟ್ಟುಕೊಂಡಿದ್ದೀರ ಇದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಟಪರಿಣಾಮ ಭೀರುವುದಿಲ್ಲವೇ ಎಂದು ಕಿಡಿಕಾರಿದರು.
ವಿದ್ಯಾರ್ಥಿಗಳಿಗೆ ಪಾಠ ಮಾಡಿದ ತಹಶೀಲ್ದಾರ್ : ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ ತಹಶೀಲ್ದಾರ್ ಎಸ್.ವಿಶ್ವನಾಥ್ ವಿದ್ಯಾರ್ಥಿಗಳನ್ನು ಪರಿಚಯಿಸಿಕೊಂಡರು, ವಿದ್ಯಾಭ್ಯಾಸದ ಬಗ್ಗೆ ವಿಚಾರ ಮಾಡಿದರು. ಪಠ್ಯ ಸಂಬಂಧ ಹಲವು ಪ್ರಶ್ನೆಗಳನ್ನು ಕೇಳಿದರು. ಬಳಿಕ ಹಲವು ವಿಷಯಕ್ಕೆ ಸಂಬಂಧಿಸಿದಂತೆ ಬೋಧನೆ ಮಾಡಿದರು. ಹಳ್ಳಿಗಾಡಿನ ಮಕ್ಕಳು ದಡ್ಡರಲ್ಲ, ಕಷ್ಟಪಟ್ಟು ಓದಿದರೇ ಸಾಧನೆ ಮಾಡಬಹುದು. ಇದಕ್ಕಾಗಿ ಶ್ರದ್ದೆಯಿಂದ ಪಾಠ ಪ್ರವಚನ ಶಿಕ್ಷಕರಿಂದ ಪಡೆದು ಉನ್ನತ ಶಿಕ್ಷಣ ಪಡೆಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಶಿಸ್ತು ಮೈಗೂಡಿಸಿಕೊಳ್ಳಬೇಕು. ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್‌ನಲ್ಲಿ ವಾರ್ಡ್ ಇಲ್ಲವೇ ಎಂದು ಇಲ್ಲಿನ ಅಡಿಗೆಯವರಾದ ಭಾನುಪ್ರಕಾಶ್ ಅವರನ್ನು ತಹಶೀಲ್ದಾರ್ ಪ್ರಶ್ನಿಸಿದರು, ವಾರ್ಡ್ ಇಲ್ಲ ಸಾರ್ ನಾನೇ ವಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.ಅಲ್ಲ ರೀ ಗುಮಾಸ್ತ ಒಬ್ಬ ತಹಶೀಲ್ದಾರ್ ಆಗಲು ಸಾಧ್ಯವೇ ಎಂದು ತಹಶೀಲ್ದಾರ್ ಅಡುಗೆಯವರು ವಾರ್ಡ್ ಆಗಿ ಕೆಲಸ ಮಾಡಲು ಆಗುತ್ತದ್ದ ಎಂದರು. ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆಯುವುದ್ದಾಗಿ ತಿಳಿಸಿದರು.
ರಾತ್ರಿ ಕಾವಲುಗಾರನಿಗೆ ಛೀಮಾರಿ : ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗೆ ತಹಶೀಲ್ದಾರ್ ಭೇಟಿ ನೀಡಿದ್ದ ವೇಳೆ ಇಲ್ಲಿನ ರಾತ್ರಿ ಕಾವಲುಗಾರ ಲೋಕೇಶ್ ಎಂಬುವರು, ಶರ್ಟ್ ಹಾಕಿಕೊಳ್ಳದೇ ಬನಿಯನ್ ಹಾಕಿಕೊಂಡು ತಿರುಗಾಡುತ್ತಿದ್ದರು. ಇದರಿಂದ ಸಿಡಿಮಿಡಿಗೊಂಡ ತಹಶೀಲ್ದಾರ್ ಎಸ್.ವಿಶ್ವನಾಥ್ ಇಲ್ಲಿ ಏನು ಕೆಲಸ ಮಾಡುತ್ತಿದ್ದೀಯ ಎಂದು ಲೋಕೇಶನನ್ನು ಪ್ರಶ್ನಿಸಿದರು. ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಉತ್ತರಿಸಿದರು. ವಿದ್ಯಾರ್ಥಿಗಳ ಮುಂದೆ ಬನಿಯನ್ ಹಾಕಿಕೊಂಡು ಓಡಾಡಲು ನಿನ್ನಗೇನು ಅನಿಸುವುದಿಲ್ಲವೇ ಎಂದು ಲೋಕೇಶ್‌ಗೆ ಛೀಮಾರಿ ಹಾಕಿದರು.
ಕೆಲ ಊರುಗಳಲ್ಲಿ ಈಗಾಗಲೇ ಡೆಂಗ್ಯೂ ಕಾಯಿಲೆ ಕಾಣಿಸಿಕೊಂಡು ಆನೇಕ ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಹಾಸ್ಟೆಲ್‌ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಮಕ್ಕಳಿಗೆ ಗುಣಮಟ್ಟದ ಊಟ ಶುದ್ದ ಕುಡಿಯುವ ನೀರು ನೀಡಬೇಕೆಂದು ಸಿಬ್ಬಂದಿಗಳಿಗೆ ಸೂಚಿಸಿದರು.