ಹೊಸದಿಲ್ಲಿ : ಸಿಬಿಐ ನಿಂದ ಬಂಧಿತನಾದ ಗುರುಗ್ರಾಮದ ರಯಾನ್ ಇಂಟರ್‌ನ್ಯಾಶನಲ್ ಸ್ಕೂಲ್‌ನ 11ನೇ ತರಗತಿಯ ವಿದ್ಯಾರ್ಥಿ, ತಾನು 2ನೇ ತರಗತಿಯ ವಿದ್ಯಾರ್ಥಿ ಪ್ರದ್ಯುಮ್ನನನ್ನು ಕತ್ತು ಸೀಳಿ ಕೊಂದದ್ದು ಹೌದು ಎಂದು ತನ್ನ ತಂದೆ ಹಾಗೂ ಸ್ವತಂತ್ರ ಸಾಕ್ಷಿದಾರರೋರ್ವರ ಮುಂದೆ ಒಪ್ಪಿಕೊಂಡಿದ್ದಾನೆ ಎಂಬುದಾಗಿ ಸಿಬಿಐ ಬಾಲಾಪರಾಧ ನ್ಯಾಯಾಲಯಕ್ಕೆ ತಿಳಿಸಿದೆ.
ಪ್ರದ್ಯುಮ್ನನ ಕೊಲೆ ಕೃತ್ಯದಲ್ಲಿ ಇತರ ವ್ಯಕ್ತಿಗಳು ಶಾಮೀಲಾಗಿದ್ದಾರೆಯೇ ಎಂಬುದನ್ನು ತನಿಖೆ ಮಾಡುವ ಸಲುವಾಗಿ ಕೊಲೆ ಆರೋಪಿ 11ನೇ ತರಗತಿಯ ವಿದ್ಯಾರ್ಥಿಯನ್ನು 3 ದಿನಗಳ ಕಸ್ಟಡಿಗೆ ನೀಡಬೇಕು ಎಂದು ಸಿಬಿಐ, ಬಾಲಾಪರಾಧ ನ್ಯಾಯಾಲಯಕ್ಕೆ ನಿನ್ನೆ ಬುಧವಾರ ಸಲ್ಲಿಸಿದ್ದ ಟಿಪ್ಪಣಿಯಲ್ಲಿ ಕೋರಿತ್ತು.
2ನೇ ತರಗತಿಯ ವಿದ್ಯಾರ್ಥಿ ಪ್ರದ್ಯುಮ್ನನ ಕೊಲೆಗೆ ಬಳಸಲಾದ ಚೂರಿಯನ್ನು ಆರೋಪಿ ಬಾಲಕನು ಯಾವ ಅಂಗಡಿಯಲ್ಲಿ ಖರೀದಿಸಿದ್ದ ಎಂಬುದನ್ನು ಆತನಿಂದಲೇ ತಿಳಿಯಲು ಮತ್ತು ಇತರ ಕೆಲವು ಸಂಬಂಧಿತ ಸಾಕ್ಷ್ಯಗಳನ್ನು ಸಂಗ್ರಹಿಸಲು ಆರೋಪಿ ಬಾಲಕನನ್ನು ತನ್ನ ಕಸ್ಟಡಿಗೆ ಒಪ್ಪಿಸುವಂತೆ ಸಿಬಿಐ ಕೋರಿತ್ತು.
ಸಿಬಿಐ ನಡೆಸಿದ್ದ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಬಾಲಕನು, ‘ಶಾಲೆಯಲ್ಲಿ ಪುಂಡ ಹುಡುಗನಾಗಿದ್ದ; ಓದಿನಲ್ಲಿ ಹಿಂದಿದ್ದ; ಶಾಲೆಗೆ ಬರುವಾಗ ಕೆಲವೊಮ್ಮೆ ಚೂರಿಯನ್ನು ತರುತ್ತಿದ್ದ; ಚಿಕ್ಕ ಮಕ್ಕಳನ್ನು ಹೊಡೆದು ಹಿಂಸಿಸಿ ಅವರಿಗೆ ಭಯ ಹುಟ್ಟಿಸುತ್ತಿದ್ದ; ಎಲ್ಲಕ್ಕಿಂತ ಮೇಲಾಗಿ ಆತನಿಗೆ ಇಂಟರ್‌ನೆಟ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವ ಅಭ್ಯಾಸವಿತ್ತು ಮತ್ತು ಪ್ರದ್ಯುಮ್ನನನ್ನು ಕೊಲೆ ಮಾಡುವ ಹಿಂದಿನ ದಿನವೂ ಪೋರ್ನ್ ಚಿತ್ರವನ್ನು ವೀಕ್ಷಿಸಿದ್ದ, ಹೆತ್ತವರು ಮತ್ತು ಶಿಕ್ಷಕರ ಸಭೆ ಮುಂದಕ್ಕೆ ಹೋಗುವಂತೆ ಮತ್ತು ಅದರೊಂದಿಗೆ ಪರೀಕ್ಷೆಗಳೂ ಮುಂದಕ್ಕೆ ಹೋಗುವಂತೆ ನಾನು ಏನಾದರೂ ಮಾಡುವೆ ಎಂದು ಸಹ ವಿದ್ಯಾಥಿಗಳಲ್ಲಿ ಕೊಚ್ಚಿಕೊಂಡಿದ್ದ’ ಎಂಬ ಮಾಹಿತಿಗಳನ್ನು ಕಲೆ ಹಾಕಿತ್ತು.
ಸಿಬಿಐ ಕೊಲೆ ಆರೋಪಿ ಬಾಲಕನನ್ನು ಬಂಧಿಸುವ ಮುನ್ನ ಶಾಲೆಯ ಸಿಸಿಟಿವಿ ಚಿತ್ರಿಕೆಗಳನ್ನು ಅವಲೋಕಿಸಿತ್ತು ಮತ್ತು 125 ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಹಿತ ಹಲವು ಶಂಕಿತರನ್ನು ಪ್ರಶ್ನಿಸಿತ್ತು.