ವಿದ್ಯಾರ್ಥಿ ಜೀವನ ಒಂದು ಬಹಳ ಸುಂದರವಾದ ಜೀವನ. ಎಲ್ಲರೂ ಪ್ರಬುದ್ಧರಾದ ಮೇಲೆ ವಿದ್ಯಾರ್ಥಿಗಳಾಗಿದ್ದ ದಿನಗಳನ್ನು ನೆನೆಯುತ್ತಾರೆ. ಅದು ಜ್ಞಾನವನ್ನು ಪಡೆಯುವ ಕಾಲಘಟ್ಟ ಎಂಬುದು ನಿಜವೇ. ಆದರೆ, ಜೀವನದ ಅತ್ಯಂತ ಸಂತೋಷದಾಯಕ ಸಮಯವೂ ಹೌದು. ವಿದ್ಯಾರ್ಥಿ ಜೀವನದಲ್ಲಿ ಅನೇಕ ಸೋಲುಗೆಲುವುಗಳನ್ನು ಕಾಣುತ್ತೇವೆ. ಆದರೆ, ಅಲ್ಲಿ ಸೋಲು ಮುಖ್ಯವಾಗುವುದೇ ಇಲ್ಲ. ಸೋಲಿನಲ್ಲಿಯೂ ಒಂದು ಬಗೆಯ ನಿರ್ಲಿಪ್ತ ಭಾವವನ್ನು ಹೊಂದಿ “ಬಂದಂತೆ ಬದುಕು’ ಎಂಬು ಸಾಗುವ ಆತ್ಮವಿಶ್ವಾಸ ಮೂಡುವುದು ಇದೇ ಸಂದರ್ಭದಲ್ಲಿ.
ವಿದ್ಯಾರ್ಥಿ ಜೀವನ ಬರುವುದು ಹದಿಹರೆಯದಲ್ಲಿ. ಅದು ಕನಸು ಕಾಣುವ ದಿನಗಳು. ಹದಿಹರೆಯದ ದಿನಗಳು ಎಂದಾಕ್ಷಣ ಒಂದು ರೀತಿಯ ನವಿರು ಭಾವನೆ ನಮ್ಮಲ್ಲಿ ಮೂಡುತ್ತದೆ. ಕಷ್ಟವನ್ನೂ ಸಂಭ್ರಮಿಸುವ ದಿನಗಳಿವು. ತುಂಟತನ, ಚೇಷ್ಟೆ , ಚೆಲ್ಲಾಟ, ಆಟ, ನೋವು-ನಲಿವು… ಇತ್ಯಾದಿಗಳ ನಡುವೆ ಎಲ್ಲ ಸಂಕಟಗಳು ಮರೆತುಹೋಗುತ್ತವೆ.
ಹಾಗೆಂದು, ಹದಿಹರೆಯದ ವಿದ್ಯಾರ್ಥಿ ಜೀವನದಲ್ಲಿ ಎಚ್ಚರಿಕೆಯೂ ಅಗತ್ಯ. ಇವೇ ದಿನಗಳಲ್ಲಿ ವಿದ್ಯಾರ್ಥಿ ದಾರಿತಪ್ಪುವುದು. ಈ ಹಿಂದಿನ ದಿನಗಳಲ್ಲಂತೂ ದಾರಿ ತಪ್ಪಿಸುವ ಸಾಧ್ಯತೆಗಳು ಕಡಿಮೆ ಇದ್ದವು. ಈಗ ಸಾಮಾಜಿಕ ಜಾಲತಾಣಗಳಿವೆ, ಸೋಶಿಯಲ್ ಮೀಡಿಯಾಗಳಿವೆ. ದಾರಿ ತಪ್ಪಲು ಸಾಕಷ್ಟು ಅವಕಾಶಗಳಿವೆ.
ಈ ವಿದ್ಯಾರ್ಥಿ ಜೀವನದಲ್ಲಿಯೇ ಕೆಲವರು ಮೊಬೈಲ್‌ಗೆ ದಾಸರಾಗಿಬಿಡುತ್ತಿದ್ದಾರೆ. ಈ ಸಮಯದಲ್ಲಿ ವಿದ್ಯಾರ್ಥಿಯ ವರ್ತನೆ ಕೂಡ ಕೊಂಚ ಬದಲಾಗಿರುತ್ತದೆ. ಇಂದಿನ ವಿದ್ಯಾರ್ಥಿಗಳು ಸಹಜವಾಗಿ ಹಲವಾರು ಮೊಬೈಲ್ ಗೇಮ್‌ಗಳಾದ ಪಬ್-ಜಿ, ಕ್ಯಾಡಿಕ್ರಶ್, ಟಿಕ್-ಟಾಕ್‌ಗಳಲ್ಲಿ ಸಕ್ರಿಯವಾಗಿರುವುದನ್ನು ನೋಡುತ್ತೇವೆ.
ಈ ದಿನಗಳು ಹೇಗಿರುತ್ತವೆ ಎಂದರೆ ಯಾರು ಏನು ಬುದ್ಧಿ ಮಾತು ಹೇಳಿದರೂ ಕೇಳುವ ಸ್ಥಿತಿ ಇರುವುದಿಲ್ಲ. ಸ್ವತಃ ತಂದೆತಾಯಿಯ ಮಾತುಗಳನ್ನು ಮೀರಿ ನಡೆಯುವ ಹುಡುಗ-ಹುಡುಗಿಯರಿದ್ದಾರೆ. ಅವರಿಗೆ ಆ ಸಂದರ್ಭದಲ್ಲಿ ಏನೂ ಅನ್ನಿಸುವುದಿಲ್ಲ. ಆದರೆ, ಕಾಲ ಕಳೆದ ಬಳಿಕ ಕೆಲವರು ವ್ಯಥಿಸುತ್ತಾರೆ. ವಿದ್ಯಾರ್ಥಿಗಳಿಗೆ ತಾವು ಮಾಡುತ್ತಿರುವುದು ಸರಿಯೋ ತಪ್ಪೋ ಎಂದು ಅವರಿಗೆ ಅರಿವಿರುವುದಿಲ್ಲ. ಆಗ ಅವರ ಸ್ಥಿತಿಯನ್ನು ಎಚ್ಚರಿಸುವ ಕೆಲಸ ನಡೆಯಲೇಬೇಕು. ಮನಸ್ಸು ಎಂಬುದು ಚಂಚಲವಾದುದು. ಆದರೆ, ಸತತವಾಗಿ ಒಳ್ಳೆಯ ನುಡಿಗಳನ್ನು ಹೇಳುವಂತಾದರೆ ಯಾರಿಗಾದರೂ ಬುದ್ಧಿ ಬಂದೇ ಬರುತ್ತದೆ.
ತಂದೆತಾಯಿಗಳಾಗಲಿ, ಪ್ರಾಧ್ಯಾಪಕರಾಗಲಿ ಬುದ್ಧಿಮಾತು ಹೇಳದೆ ಸುಮ್ಮನಿರುವುದು ಕೂಡ ಸರಿಯಲ್ಲ. ದಾರಿ ತಪ್ಪುವ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವಲ್ಲಿ ಯಶಸ್ವಿಯಾದರೆ ಮಾತ್ರ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿದಂತಾಗುತ್ತದೆ.
ದಿಶಾ
ಪ್ರಥಮ ಎಲ್‌ಎಲ್‌ಬಿ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಮಂಗಳೂರು