Advertisement

ಡ್ರಗ್ಸ್‌ ಮಾರಾಟ ಜಾಲದಲ್ಲಿ ಸಿಕ್ಕಿಬಿದ್ದ ಟೆಕ್ಕಿ

12:17 PM Nov 03, 2018 | |

ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಪಬ್‌ಗಳು ಹಾಗೂ  ಪಾರ್ಟಿಗಳಿಗೆ ಕೊಕೇನ್‌ ಸೇರಿದಂತೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಜಾಲ ಬೇಧಿಸಿರುವ  ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು, ಮಂಗಳೂರು ಮೂಲದ ಸಾಫ್ಟ್ವೇರ್‌ ಇಂಜಿನಿಯರ್‌ ಹಾಗೂ ಇಬ್ಬರು ಆಫ್ರಿಕಾ ಪ್ರಜೆಗಳನ್ನು ಬಂಧಿಸಿದ್ದಾರೆ.  

Advertisement

ದಕ್ಷಿಣ ಆಫ್ರಿಕಾದ ಫೇತ್‌ ಚುಕ್‌ (32)  ಹಾಗೂ ಕಂಟೆ ಹೆನ್ರಿ (24)  ಮಂಗಳೂರಿನ ಪ್ರತೀಕ್‌ ಶೆಟ್ಟಿ  (29) ಬಂಧಿತರು. ಆರೋಪಿಗಳಿಂದ  1.30 ಕೋಟಿ ರೂ. ಮೌಲ್ಯದ ಕೊಕೇನ್‌ ಹಾಗೂ ಎಕ್ಸ್‌ಟೆಸಿ ಮಾತ್ರೆಗಳು ಹಾಗೂ ಒಂದು ಕಾರು, ಬೈಕ್‌ನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಪ್ರಮುಖ ಆರೋಪಿ ಎಂದು ಪರಿಗಣಿಸಿರುವ ಫೇತ್‌ಚುಕ್‌ ಹಲವು ವರ್ಷಗಳಿಂದ ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದಾನೆ. ಮುಂಬೈ, ಹೊರದೇಶಗಳಿಂದ  ಕೋಕೇನ್‌ ತರಿಸಿಕೊಳ್ಳುತ್ತಿದ್ದ ಆತ ನೈಜೀರಿಯನ್‌ ಯುವಕರನ್ನಿಟ್ಟುಕೊಂಡು  ಕಾಲೇಜು ವಿದ್ಯಾರ್ಥಿಗಳು, ಪ್ರತಿಷ್ಠಿತ ಕಂಪೆನಿಗಳ ಉದ್ಯೋಗಿಗಳು, ಪಬ್‌ಗಳು ಹಾಗೂ ಪಾರ್ಟಿಗಳಲ್ಲಿ ಮಾರಾಟ ಮಾಡಿಸುತ್ತಿದ್ದ.

ಈ ಮಾರಾಟ ಜಾಲದಲ್ಲಿ ಟೆಕ್ಕಿ ಪ್ರತೀಕ್‌ ಶೆಟ್ಟಿಯೂ ತೊಡಗಿಸಿಕೊಂಡಿದ್ದ. ಆರೋಪಿಗಳು ಒಂದು ಗ್ರಾಂ ಕೊಕೇನ್‌ಗೆ 8 ಸಾವಿರ ರೂ.ಗಳಿಗೆ ಮಾರುತ್ತಿದ್ದರು. ಅದೇ ರೀತಿ ಎಕ್ಸೆಟಿಸಿ ಮಾತ್ರೆ ಒಂದಕ್ಕೆ ಒಂದೂವರೆ ಸಾವಿರ ರೂ. ಪಡೆಯುತ್ತಿದ್ದರು ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಫ್ರಿಕನ್‌ ಮೂಲದ ಇಬ್ಬರು  ಆರೋಪಿಗಳು ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಾಂಗಕ್ಕೆ ಸೇರಿಕೊಂಡಿದ್ದಾರೆ. ಇಬ್ಬರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದು. ಇವರಿಗೆ ಮಾದಕ ವಸ್ತು ಪೂರೈಸುತ್ತಿದ್ದ ಜಾಲ ಯಾವುದು? ಆರೋಪಿಗಳ ಜತೆ ಭಾಗಿಯಾಗಿದ್ದ ಇತರೆ ಆರೋಪಿಗಳು ಯಾರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ಹೇಳಿದರು.

Advertisement

ಚಟದಿಂದ ದಂಧೆಗೆ ಸೇರಿಕೊಂಡ: ಮಂಗಳೂರು ಮೂಲದ ಆರೋಪಿ ಪ್ರತೀಕ್‌ ಶೆಟ್ಟಿ, ಸಾಫ್ಟ್ವೇರ್‌ ಉದ್ಯೋಗಿ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆತನಿಗೆ ತಿಂಗಳಿಗೆ 60 ಸಾವಿರ ರೂ. ಸಂಬಳವಿದೆ. ಈ ಹಿಂದೆ ಆರೋಪಿ ಪೇತ್‌ಚುಕ್‌ನಿಂದ ಮಾದಕ ವಸ್ತು ಖರೀದಿಸಿ ಸೇವಿಸುತ್ತಿದ್ದ ಪ್ರತೀಕ್‌, ಕ್ರಮೇಣ ವ್ಯಸನಿಯಾಗಿದ್ದಾನೆ. ಬಳಿಕ, ಆತನೇ ಪಾರ್ಟಿಗಳಿಗೆ ಮಾದಕ ವಸ್ತು ಪೂರೈಸುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ.

ದಿನಪೂರ್ತಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರತೀಕ್‌, ರಾತ್ರಿ ವೇಳೆ ಮಾದಕ ವಸ್ತು ಮಾರಾಟದಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಪಾರ್ಟಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

40 ಗ್ರಾಹಕರ ಪಟ್ಟಿ: ಆರೋಪಿಗಳಿಂದ ಪಾರ್ಟಿಗಳಲ್ಲಿ, ಪಬ್‌ಗಳಲ್ಲಿ ಮಾದಕ ವಸ್ತು ಖರೀದಿ ಮಾಡುತ್ತಿದ್ದ 40 ಮಂದಿಯ ಹೆಸರು  ವಿವರಗಳನ್ನು ಪಟ್ಟಿ ಮಾಡಲಾಗಿದೆ. ಬಹುತೇಕರು 40ರೊಳಗೆ ವಯೋಮಾನದವರೇ ಆ ಪಟ್ಟಿಯಲ್ಲಿದ್ದಾರೆ.

ಅದೇ ರೀತಿ, ನಗರದಲ್ಲಿ ಮಾದಕ ವಸ್ತು ಸೇವನೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು, ಉದ್ಯೋಗಿಗಳ ಪಟ್ಟಿಯನ್ನು ಆಯಾ ವಿಭಾಗದಲ್ಲಿ ಮಾಡಲಾಗಿದೆ. ನವೆಂಬರ್‌ 14ರ ಬಳಿಕ ಅವರೆಲ್ಲರನ್ನೂ ಪೋಷಕರ ಸಮ್ಮುಖದಲ್ಲಿ ಸಭೆ ನಡೆಸಿ, ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳು ಹಾಗೂ ಕಾನೂನು ಕ್ರಮಗಳ ಬಗ್ಗೆ ಮನವರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಆಯುಕ್ತ ಟಿ. ಸುನೀಲ್‌ ಕುಮಾರ್‌ ತಿಳಿಸಿದರು. 

ಜಪ್ತಿ ಮಾಡಿಕೊಂಡ ಮಾದಕ ವಸ್ತುಗಳ ವಿವರ ಹಾಗೂ ಮೌಲ್ಯ 
-ಕೋಕೇನ್‌- 1.50 ಕೆ.ಜಿ – 1,20, ಕೋಟಿ ರೂ. 
-ಎಕ್ಸ್‌ಟೆಸಿ ಮಾತ್ರೆ (ಕಂದು ಬಣ್ಣ) – 1350 – 20.25,ಲಕ್ಷ ರೂ. 
-ಎಕ್ಸ್‌ಟೆಸಿ ಮಾತ್ರೆ  (ಕಡು ನೇರಳೆ ಬಣ್ಣ)- 580 – (286 ಗ್ರಾಂ)- 8.70, ಲಕ್ಷ ರೂ. 
-ಕಾರು- 3,50,ಲಕ್ಷ ರೂ. 
-ಬೈಕ್‌ – 35, ಸಾವಿರ ರೂ. 
-ನಗದು ಹಣ- ಆರು ಸಾವಿರ ರೂ. 
-ಒಟ್ಟು 1,52,86,000 ಕೋಟಿ ರೂ.

ಒಂದು ಲಕ್ಷ ರೂ. ಬಹುಮಾನ: ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಎಸಿಪಿ ಬಿ.ಎಸ್‌. ಮೋಹನ್‌ಕುಮಾರ್‌,ಇನ್ಸ್‌ಪೆಕ್ಟರ್‌, ಎಸ್‌. ಆಯಿಷಾ, ಸಬ್‌ ಇನ್ಸ್‌ಪೆಕ್ಟರ್‌ ಮಿರ್ಜಾ ಅಲಿ ರಾಜಾ, ಪಿ.ಎಸ್‌.ಐ. ಲಕ್ಷಿನರಸಿಂಹಯ್ಯ, ಪೊಲೀಸ್‌ ಪೇದೆ ಶಶಿಧರ್‌, ಯೋಗಾನಂದ  ಸೇರಿ ಮತ್ತಿತರರ  ಸಿಬ್ಬಂದಿಯನ್ನೊಳಗೊಂಡ ತಂಡಕ್ಕೆ ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ 1ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ.

ನಗರದ ಕೆಲವು ಪಬ್‌ಗಳು ಹಾಗೂ ಹೋಟೆಲ್‌ಗ‌ಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ಆರೋಪಿಗಳ ವಿಚಾರಣೆಯಿಂದ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು  ಆಳವಾಗಿ ತನಿಖೆ ನಡೆಸಲಾಗುತ್ತಿದೆ.
-ಅಲೋಕ್‌ ಕುಮಾರ್‌, ಸಿಸಿಬಿ ಹೆಚ್ಚುವರಿ ಪೊಲೀಸ್‌ ಆಯುಕ್ತ 

Advertisement

Udayavani is now on Telegram. Click here to join our channel and stay updated with the latest news.

Next