Advertisement

ಸಾವಿನಲ್ಲಿ ಅಂತ್ಯಗೊಂಡ ಟೆಕ್ಕಿ ಸಹಜೀವನ

12:41 PM Sep 26, 2018 | |

ಬೆಂಗಳೂರು: ಸಾಫ್ಟ್ವೇರ್‌ ಇಂಜಿನಿಯರ್‌ಗಳಿಬ್ಬರ ನಾಲ್ಕು ವರ್ಷಗಳ “ಲಿವಿಂಗ್‌ ಟುಗೆದರ್‌’ ಸಂಬಂಧ ಯುವಕನ ಸಾವಿನಲ್ಲಿ ಅಂತ್ಯಗೊಂಡಿದೆ.

Advertisement

ದೊಡ್ಡತೋಗೂರಿನ ಶ್ರೀವಾರಿ ಅಪಾರ್ಟ್‌ಮೆಂಟ್‌ನಲ್ಲಿ ಸಹಜೀವನ ನಡೆಸುತ್ತಿದ್ದ ಯುವತಿಯ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡು ಆಕೆಯನ್ನು ಫ್ಲ್ಯಾಟ್‌ನಿಂದ ಹೊರಹಾಕಿ ಒಳಗಿನಿಂದ ಡೋರ್‌ಲಾಕ್‌ ಮಾಡಿಕೊಂಡ ನಂಜನಗೂಡು ಮೂಲದ ಚಂದ್ರಶೇಖರ್‌ (33) ಸೋಮವಾರ ರಾತ್ರಿ 8-30ರ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತನ್ನ ಸಾವಿನ ಕುರಿತು ಎರಡು ಪುಟಗಳ ಡೆತ್‌ನೋಟ್‌ ಬರೆದಿರುವ ಚಂದ್ರಶೇಖರ್‌, ಈ ಜೀವನದಲ್ಲಿ ಅತ್ಯಂತ ಬೇಸರಗೊಂಡಿದ್ದೇನೆ. ಬದುಕಲು ಇಷ್ಟವಿಲ್ಲ. ಹೀಗಾಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾನೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾವಿಗೂ ಮುನ್ನ ಪರಸ್ಪರ ಹೊಡೆದಾಟ!: ಸೋಮವಾರ ಸಂಜೆ ಇಬ್ಬರ ನಡುವೆಯೂ ಜಗಳವಾಗಿದ್ದು ಚಂದ್ರಶೇಖರ್‌ ಹಾಗೂ ಶ್ರುತಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಆಕೆಯ ಮೈ ಮೇಲೆ ಬಾಸುಂಡೆ ರೀತಿಯ ಗಾಯಗಳಾಗಿದ್ದು, ಕೈ ಕಾಲಿನಲ್ಲಿಯೂ ಹೊಡೆತದ ಗುರುತುಗಳಿವೆ. ಬಳಿಕ ಆಕೆಯ ತಲೆ, ಕೈ ಕಾಲುಗಳಿಗೆ ದೊಡ್ಡದಾದ ಫ್ಲಾಸ್ಟರ್‌ ಅಂಟಿಸಿದ್ದಾನೆ. ಆತನೂ ರಕ್ತಬರದಂತೆ ಕೈಗೆ ಅಂಟಿಸಿಕೊಂಡಿದ್ದಾನೆ.

ಬಳಿಕ ಜಗಳ ವಿಕೋಪಕ್ಕೆ ರಾತ್ರಿ 8ಗಂಟೆ ಸುಮಾರಿಗೆ ಶ್ರುತಿಯನ್ನು ಫ್ಲ್ಯಾಟ್‌ನಿಂದ ಹೊರದಬ್ಬಿ ಅವಾಚ್ಯ ಪದಗಳಿಂದ ನಿಂದಿಸಿ ಒಳಗಿನಿಂದ ಡೋರ್‌ ಲಾಕ್‌ ಮಾಡಿಕೊಂಡು ಬಳಿಕ ಕೊಠಡಿಗೆ ತೆರಳಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊರಗಡೆಯೇ ಇದ್ದ  ಶ್ರುತಿ 20 ನಿಮಿಷ ಬಿಟ್ಟು, ಬಾಗಿಲು ತೆರೆಯುವಂತೆ ಕೂಗಿದ್ದಾರೆ. ಒಳಗಡೆಯಿಂದ ಪ್ರತಿಕ್ರಿಯೆ ಬಾರದಿದ್ದಕ್ಕೆ ಕಿಟಕಿಯಿಂದ ನೋಡಿದಾಗ ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. 

Advertisement

ಚಂದ್ರು ನೇಣುಹಾಕಿಕೊಂಡಿರುವುದನ್ನು ನೋಡತ್ತಲೇ ಆಘಾತಗೊಂಡು ಅಕ್ಕ-ಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅವರ ಸಹಾಯದಿಂದ ಬಾಗಿಲು ಹೊಡೆದು ಒಳನುಗ್ಗಿ ಆತನನ್ನು ಕೆಳಗಿಳಿಸಿ ಉಸಿರಾಡುವಂತೆ ಮಾಡಲು ಪ್ರಯತ್ನಿಸಲಾಯಿತು. ಬಳಿಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆವು. ಆದರೆ, ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದರು ಎಂದು ಯುವತಿ ಹೇಳಿದ್ದಾಳೆ ಎಂದು ಅಧಿಕಾರಿಗಳು ವಿವರಿಸಿದರು. 

ಮೃತ ಚಂದ್ರಶೇಖರ್‌ ತಂದೆ ಶಿವಪ್ಪ ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಶ್ರುತಿಯನ್ನು ಅವರ ತಂದೆ ಮನೆಗೆ ಕರೆದೊಯ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಕಣ್ಣೀರಿಟ್ಟ ತಂದೆ!: ಶಿವಪ್ಪ ದಂಪತಿಗೆ ಚಂದ್ರಶೇಖರ್‌ ಒಬ್ಬನೇ ಮಗನಾಗಿದ್ದ. ವಿಷಯ ತಿಳಿದ ಕೂಡಲೇ ಬಂದ ಅವರು ಮಗನ ಶವ ನೋಡುತ್ತಲೇ ದಿಗ್ಭ್ರಾಂತಿಗೆ ಒಳಗಾಗಿ, ಒಬ್ಬನೇ ಮಗ ಆತನ ಸಂತೋಷದ ಜೀವನ ನೋಡಲು ಆಗಲೇ ಇಲ್ಲ ಎಂದು ಕಣ್ಣೀರು ಹಾಕಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಹಲವು ಬಾರಿ ಠಾಣೆ ಮೆಟ್ಟಿಲೇರಿದ್ದ ಜೋಡಿ!: ನಂಜನಗೂಡು ಮೂಲದ ಚಂದ್ರಶೇಖರ್‌ ಹಾಗೂ ಮೈಸೂರು ಮೂಲದ ಶ್ರುತಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದಾಗ  ಐದು ವರ್ಷಗಳ ಹಿಂದೆ ಪ್ರೀತಿಸಿದ್ದರು. ಬಳಿಕ ನಾಲ್ಕು ವರ್ಷಗಳಿಂದ ಸಹಜೀವನ ನಡೆಸುತ್ತಿದ್ದರು. ಕಳೆದ ಒಂದೂವರೆ ವರ್ಷದ ಹಿಂದೆ ಶ್ರಿವಾರಿ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಿದ್ದರು.

ಇಬ್ಬರು ನಡುವೆಯೂ ಕ್ಷುಲ್ಲಕ ಕಾರಣಗಳಿಗೆ ಜಗಳವಾಗಿದ್ದು, ಪೊಲೀಸ್‌ ಠಾಣೆ ಮೆಟ್ಟಿಲೇರುತ್ತಿದ್ದರು. ಬಳಿಕ ಅವರೇ ರಾಜಿಯಾಗಿ ಹೋಗುತ್ತಿದ್ದರು. ಇಬ್ಬರೂ ಜಗಳಕ್ಕೆ ನಿಖರ ಕಾರಣ ತಿಳಿಸುತ್ತಿರಲಿಲ್ಲ. ದೂರು ನೀಡುವ ಮುನ್ನವೇ ವಾಪಾಸ್‌ ಹೋಗುತ್ತಿದ್ದರು. ಇಬ್ಬರ ರಿಲೇಶನ್‌ಶಿಪ್‌ ಬಗ್ಗೆ ಎರಡೂ ಮನೆಯ ಪೋಷಕರಿಗೂ ತಿಳಿದಿತ್ತು ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next