Advertisement
“”ಹಳ್ಳಿಗಳಲ್ಲಿ ಸರಕಾರಿ ಕನ್ನಡ ಶಾಲೆಗಳು ಅಳಿವಿನಂಚಿನಲ್ಲಿವೆ. ಕನ್ನಡ ಶಾಲೆಗೆ ಮಕ್ಕಳು ಬರುತ್ತಿಲ್ಲ. ಜನರಿಗೆ ಇಂಗ್ಲಿಷ್ ಮೋಹ. ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಕನ್ನಡ ಶಾಲೆಗಳನ್ನು ಮುಚ್ಚುತ್ತೇವೆ” ಎಂದು ಸರಕಾರ ಹೇಳುತ್ತಿದೆ. ಅದು ಅಲ್ಲಿನ ವಾಸ್ತವ. ಆದರೆ ಮಗ್ಗಲು ಬದಲಿಸಿ ತಂತ್ರಜ್ಞಾನ ಕಂಪನಿಗಳನ್ನು ಕೇಳಿದರೆ “”ಇಲ್ಲ… ಇಲ್ಲ… ವರ್ಷದಿಂದ ವರ್ಷಕ್ಕೆ ಭಾರತೀಯ ಭಾಷೆಯಲ್ಲಿ ನಮ್ಮ ಪ್ರಾಡಕ್ಟ್ ಬಳಸುವ ಜನರು ಹೆಚ್ಚುತ್ತಿದ್ದಾರೆ. ಹೀಗಾಗಿ ನಾವು ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲೂ ನಮ್ಮ ಉತ್ಪನ್ನವನ್ನು ಕೊಡುತ್ತಿದ್ದೇವೆ” ಎನ್ನುತ್ತಾರೆ! ಇದೂ ಇಲ್ಲಿನ ವಾಸ್ತವವೇ! ಯಾಕೆಂದರೆ 2016ರಲ್ಲೇ ದೇಶದಲ್ಲಿ ಇಂಗ್ಲಿಷ್ ಹೊರತಾದ ಭಾರತೀಯ ಭಾಷೆಯಲ್ಲಿ ಇಂಟರ್‌ನೆಟ್ ಬಳಸಿದವರ ಸಂಖ್ಯೆ ಇಂಗ್ಲಿಷ್‌ನಲ್ಲಿ ಬಳಸುವವರಿಗಿಂತ ಹೆಚ್ಚಾಗಿದೆ. ಭಾಷೆ ಹಿಂದೊಮ್ಮೆ ಸಂಸ್ಕೃತಿಯ ಜೊತೆ ತನ್ನ ಸಂಬಂಧವನ್ನು ಹೊಂದಿತ್ತು. ಆ ಸಂಸ್ಕೃತಿಗೂ ಭಾಷೆಗೂ, ಭಾಷೆ ಬೆಳೆಯುವ ಹಾಗೂ ಹೊಸ ಹೊಸ ಮಜಲುಗಳಿಗೆ ತೆರೆದುಕೊಳ್ಳುವ ಸಾಧ್ಯತೆಗೂ ನೇರ ಸಂಬಂಧವಿತ್ತು. ಈಗಲೂ ಇದೆ. ಆದರೆ ಈಗ ಇದಕ್ಕಿಂತ ಹೆಚ್ಚಾಗಿ ತಂತ್ರಜ್ಞಾನಕ್ಕೆ ಭಾಷೆ ತೆರೆದುಕೊಂಡಿದೆ ಅಥವಾ ತಂತ್ರಜ್ಞಾನ ಭಾಷೆಗಳಿಗೆ ತನ್ನನ್ನು ತೆರೆದುಕೊಂಡಿದೆ ಎಂದೂ ಹೇಳಬಹುದು.
Related Articles
Advertisement
ಸಾಮಾನ್ಯವಾಗಿ 28-30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈಗಾಗಲೇ ಇಂಟರ್‌ನೆಟ್‌ಗೆ ಅಡಿಕ್ಟ್ ಆಗಿದ್ದಾರೆ. ಅವರು ಇಂಗ್ಲೀಷನಲ್ಲಿ ಓದಿಕೊಂಡು, ಮಾತೃಭಾಷೆಯಲ್ಲಿ ಅಥವಾ ಇಂಗ್ಲೀಷಿನಲ್ಲಿ ಬರೆದುಕೊಂಡು ಇಂಟರ್‌ನೆಟ್ ಬಳಸುತ್ತಿದ್ದಾರೆ. ಆದರೆ 40 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಗ್ರಾಮೀಣ ಭಾಗದ ಜನರು ಇನ್ನೂ ಇಂಟರ್‌ನೆಟ್‌ಗೆ ತಮ್ಮನ್ನು ಒಡ್ಡಿಕೊಂಡಿಲ್ಲ. ಅವರಿಗೆ ಇಂಟರ್‌ನೆಟ್ ಎಂಬುದು ಇನ್ನೂ ಕಗ್ಗಂಟು. ಅವರಿಗೆ ಈ ಗಂಟು ಬಿಡಿಸಲು ಅವರ ಭಾಷೆಯಲ್ಲೇ ವಿವರಿಸಬೇಕು. ಇಂಗ್ಲೀಷಲ್ಲಿ ಹೇಳಿದರೆ ಗಂಟು ಇನ್ನೂ ಸಿಕ್ಕಾಗುತ್ತದೆ. ಇದೇ ಕಾರಣಕ್ಕೆ ಕಂಪನಿಗಳು ಅವರದೇ ಭಾಷೆಯಲ್ಲಿ ಬಳಿ ಬರುತ್ತಿವೆ.
ಕಳೆದ 5 ವರ್ಷಗಳಲ್ಲಿ ಇಂಟರ್‌ನೆಟ್ ಹೆಚ್ಚು ಹೆಚ್ಚು ಜನರಿಗೆ ಕೈಗೆಟಕುವಂತಾಗುತ್ತಿದ್ದರೆ, ಮೊಬೈಲ್ ಸೇವೆ ಪೂರೈಕೆ ಕಂಪನಿಗಳು ಹಾಗೂ ಸ್ಮಾರ್ಟ್‌ಫೋನ್ ತಯಾರಿಕೆ ಕಂಪನಿಗಳು ಕನ್ನಡ ಸೇರಿದಂತೆ ಪ್ರಾಂತೀಯ ಭಾಷೆಯಲ್ಲಿ ಸೇವೆಯನ್ನು ಒದಗಿಸುವುದಕ್ಕೆ ಅನುವಾದಕರನ್ನು ನೇಮಿಸಿಕೊಳ್ಳುತ್ತಿವೆ. ಬಹುತೇಕ ಎಲ್ಲ ಕಂಪನಿಗಳಲ್ಲೂ ಈಗ ಅನುವಾದಕರಿದ್ದಾರೆ. ಅಷ್ಟೇ ಅಲ್ಲ, ಒಂದೊಂದು ಕಂಪನಿಯೂ ಕನಿಷ್ಠ ಮೂರ್‍ನಾಲ್ಕು ಮಂದಿಗಾದರೂ ಅನುವಾದದ ಹೊರಗುತ್ತಿಗೆ ನೀಡುತ್ತಿವೆ. ಇನ್ನೊಂದೆಡೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೂಡ ಪ್ರಾಂತೀಯ ಭಾಷೆಗೆ ಆದ್ಯತೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಅಪ್ಲಿಕೇಶನ್ ಕೂಡ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎಂಬ ಬಟ್ಟೆ ತೊಟ್ಟೇ ಮಾರುಕಟ್ಟೆಗಿಳಿಯುವಷ್ಟು ಅಗಾಧ ಸಾಧ್ಯತೆಯನ್ನು ಹೊಂದಿರುವ ಈ ಸಮಯದಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳನ್ನು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಪ್ಲಿಕೇಶನ್‌ಗಳಲ್ಲೂ ಅಳವಡಿಸುವ ಕಾರ್ಯ ನಡೆಯುತ್ತಿದೆ. ಕಮಾಂಡ್‌ಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಕನ್ನಡದಲ್ಲಿ ಔಟ್‌ಪುಟ್ ನೀಡುವ ಸೌಲಭ್ಯಗಳಿಗಾಗಿ ಹಲವು ಚಾಟ್ ಬೋಟ್ ಕಂಪನಿಗಳು ಕನ್ನಡ ಭಾಷೆ ತಿಳಿದಿರುವವರಿಗೆ ಕೆಲಸ ಕೊಟ್ಟಿವೆ. ಇದರ ಜೊತೆಗೇ ನ್ಯೂರಲ್ ಮಶಿನ್ ಅನುವಾದ ಕೂಡ ಅಭಿವೃದ್ಧಿಯಾಗುತ್ತಿದೆ. ಗೂಗಲ್ ಸೇರಿದಂತೆ ಹಲವು ಕಂಪನಿಗಳು ತಮ್ಮದೇ ನ್ಯೂರಲ್ ಮಶಿನ್ ಅಭಿವೃದ್ಧಿಪಡಿಸುತ್ತಿದ್ದು, ಇವು ಇಂಗ್ಲಿಷ್‌ನಿಂದ ಡೈಲಾಗ್‌ಗಳ ಅನುವಾದವನ್ನು ಇನ್ನಷ್ಟು ಸ್ಪಷ್ಟ ಹಾಗೂ ತಪ್ಪಿಲ್ಲದಂತೆ ಮಾಡಲು ಪ್ರಯತ್ನಿಸುತ್ತಿವೆ. ಸದ್ಯದ ಯಾಂತ್ರಿಕ ಅನುವಾದ ಅತ್ಯಂತ ಕ್ಲೀಷೆ ಎಂಬಂತಹ ಸ್ಥಿತಿಯಲ್ಲಿದ್ದು, ಗೂಗಲ್ ಟ್ರಾನ್ಸ್‌ಲೇಟ್ ಹೆಸರು ಹೇಳಲೇ ಮುಜುಗರ ಪಡುವಂತಿದೆ. ಇದು ನಿಧಾನಕ್ಕೆ ಅಭಿವೃದ್ಧಿಯಾಗುತ್ತಿದೆ. ಹಿಂದಿಗಿಂತ ತುಂಬ ಸುಧಾರಣೆ ನ್ಯೂರಲ್ ಮಶಿನ್‌ನಿಂದ ಆಗಿದೆ.
ಆದರೆ ಇದೆಲ್ಲ ನಡೆಯುತ್ತಿರುವುದು ಓದುವ ಮತ್ತು ಬಳಸುವ ಹಂತದಲ್ಲಿಯೇ ಹೊರತು ಬರೆಯುವ ಹಂತದಲ್ಲಲ್ಲ. ಅಂದರೆ ಕನ್ನಡ ಬರೆಯಲು ಹೊಸ ಸಾಫ್ಟ್ವೇರ್‌ಗಳು, ಕೀಬೋರ್ಡ್‌ಗಳು ಉಚಿತವಾಗಿ ಜನರಿಗೆ ಸಿಗುತ್ತಿಲ್ಲ. ಅಷ್ಟೇ ಅಲ್ಲ, ಹಳೆಯ ಕೀಬೋರ್ಡ್ ಗಳು, ಇಂಜಿನ್‌ಗಳನ್ನಾದರೂ ಹೊಸ ವ್ಯವಸ್ಥೆಗೆ ಅಭಿವೃದ್ಧಿ ಪಡಿಸುತ್ತಿಲ್ಲ. ಕನ್ನಡ ಗಣಕ ಪರಿಷತ್ ಅಭಿವೃದ್ಧಿಪಡಿಸಿದ ಉಚಿತ ಸಾಫ್ಟ್ವೇರ್ ನುಡಿ ಇನ್ನೂ ತೊದಲುತ್ತಲೇ ಇದೆ. ಆರಂಭದ ಆವೃತ್ತಿಗಳನ್ನು ಜನರು ವ್ಯಾಪಕವಾಗಿ ಬಳಸುತ್ತಿದ್ದರು. ಆಗಿನದು 32 ಬಿಟ್ ವಿಂಡೋಸ್ ಕಾಲ. 32 ಬಿಟ್ ವಿಂಡೋಸ್‌ಗಳನ್ನು ಜನರು ನಿಧಾನಕ್ಕೆ ಕೈಬಿಟ್ಟು 64 ಬಿಟ್‌ಗೆ ಬದಲಾದಾಗ ನುಡಿ ಅಭಿವೃದ್ಧಿಯಾಗಲಿಲ್ಲ. ಇಂದಿಗೂ 32 ಬಿಟ್ ಸಾಫ್ಟ್ವೇರ್‌ಗಳಲ್ಲಿ ನುಡಿ ಸರಿಯಾಗಿ ಕೆಲಸ ಮಾಡದು.
ಇನ್ನು ಆ್ಯಪಲ್‌ನ ಮ್ಯಾಕ್ ಒಎಸ್ ಕಥೆಯನ್ನಂತೂ ಕೇಳುವುದೇ ಬೇಡ. ಅಲ್ಲಿ ನುಡಿ ಇನ್‌ಸ್ಟಾಲ್ ಆಗದು. ಅದರ ಯೂನಿಕೋಡ್ ಹೊರತಾದ ಫಾಂಟ್‌ಗಳನ್ನು ಬಳಸಿ ಓದಲೂ ಆಗದು. ಕನ್ನಡ ಯೂನಿಕೋಡ್ ಶಿಷ್ಟಾಚಾರಕ್ಕೆ ಬದಲಾದರೂ ಇಂದಿಗೂ ಪಬ್ಲಿಶಿಂಗ್ ಉದ್ಯಮ ನುಡಿ ಹಾಗೂ ಇತರ ಯೂನಿಕೋಡ್ ಹೊರತಾದ ಫಾಂಟ್ ಶೈಲಿಗೇ ಬದ್ಧವಾಗಿವೆ. ಇದಕ್ಕೆ ಡಿಸೈನಿಂಗ್ ಸಾಫ್ಟ್ವೇರ್‌ಗಳು ಯೂನಿಕೋಡ್ ಅನ್ನು ಬೆಂಬಲಿಸದೇ ಇರುವುದು ಒಂದು ಕಾರಣವಾದರೆ, ಯೂನಿಕೋಡ್‌ನಲ್ಲಿ ಆಕರ್ಷಕ ವಿನ್ಯಾಸದ ಫಾಂಟ್‌ಗಳು ಇಲ್ಲ ಎಂಬುದೂ ಇನ್ನೊಂದು ಕಾರಣ. ಅಚ್ಚರಿಯ ಸಂಗತಿಯೆಂದರೆ ಇಂದಿಗೂ ನುಡಿ ವಿಂಡೋಸ್ 64 ಬಿಟ್ ಆವೃತ್ತಿಯಲ್ಲಿ ಹಾಗೂ ಮ್ಯಾಕ್ ಆಪರೇಟಿಂಗ್ ಸಿಸ್ಟಂನಲ್ಲಿ ಲಭ್ಯವಿಲ್ಲ. ಇವು ಪ್ರಾಥಮಿಕ ಅಗತ್ಯಗಳಾಗಿದ್ದವು. ಇವೆಲ್ಲ ಲಭ್ಯವಿಲ್ಲದೆಯೂ ಕನ್ನಡ ಬಳಕೆಯ ಬಗ್ಗೆ ಹಾಗೂ ಕನ್ನಡದ ಪ್ರೀತಿಯಿರುವ ಜನರೇ ಕೀಬೋರ್ಡ್ ಗಳಿಗೆ ಕೈ ಹೊಂದಿಸಿಕೊಂಡು ಬಳಸುತ್ತಿದ್ದಾರೆ. 2016ರಲ್ಲಿ ಗೂಗಲ್ ನಡೆಸಿದ ಸಮೀಕ್ಷೆಯೊಂದರಲ್ಲಿ 23.7 ಕೋಟಿ ಭಾರತೀಯರು ಇಂಗ್ಲಿಷ್ ಬಿಟ್ಟು ತಮ್ಮ ಪ್ರಾಂತೀಯ ಭಾಷೆಗಳಲ್ಲೇ ಇಂಟರ್‌ನೆಟ್ ಬಳಸುತ್ತಿದ್ದಾರೆ ಎಂದು ಕಂಡುಕೊಂಡಿತ್ತು. ಆಗ ಇಂಗ್ಲಿಷ್ ಬಳಸುತ್ತಿರುವವರ ಸಂಖ್ಯೆ 17.1 ಕೋಟಿ ಇತ್ತು. ಅಂದರೆ ಇಂಗ್ಲಿಷ್‌ಗಿಂತ ಪ್ರಾಂತೀಯ ಭಾಷೆ ಬಳಸುವವರ ಸಂಖ್ಯೆಯೇ ಹೆಚ್ಚಿತ್ತು. ಇದೇಕಾರಣಕ್ಕೆ ತಂತ್ರಜ್ಞಾನ ಕಂಪನಿಗಳು ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯಲು ಇಂಗ್ಲಿಷ್ ಅಗತ್ಯವಿಲ್ಲ ಎಂದು ನಿರ್ಧರಿಸಿದ್ದು. ಅಂದಿನಿಂದಲೂ ಕನ್ನಡ ಸೇರಿದಂತೆ ಪ್ರಾಂತೀಯ ಭಾಷೆಯೇ ತಂತ್ರಜ್ಞಾನದಲ್ಲಿ ಮೆರೆಯುತ್ತಿದೆ.
*ಕೃಷ್ಣ ಭಟ್