Advertisement

ತಂತ್ರಜ್ಞಾನ ಬಳಕೆ, ಪರಿಸರ ಸಂರಕ್ಷಣೆ ಸಮತೋಲನ ಸವಾಲು: ಸಚಿವ ಆನಂದ ಸಿಂಗ್‌

11:11 PM Jun 05, 2022 | Team Udayavani |

ಬೆಂಗಳೂರು: ಆಧುನಿಕ ಜಗತ್ತಿನಲ್ಲಿ ವಿದೇಶಗಳೊಡನೆ ಸ್ಪರ್ಧಿಸಬೇಕಾದರೆ ಆಧುನಿಕ ತಂತ್ರಜ್ಞಾನ ಬಳಕೆ ಅತ್ಯಗತ್ಯವಾಗಿದೆ. ಇದೇ ವೇಳೆ ಅತಿ ಯಾದ ತಂತ್ರಜ್ಞಾನ ಬಳಕೆ ಪರಿಸರಕ್ಕೆ ಮಾರಕವಾಗಿದೆ. ಈ ಸಮಯದಲ್ಲಿ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸವಾಲಿನ ವಿಷಯವಾಗಿದೆ ಎಂದು ಪರಿಸರ ಮತ್ತು ಜೀವ ವೈವಿಧ್ಯ ಇಲಾಖೆ ಸಚಿವ ಆನಂದ ಸಿಂಗ್‌ ತಿಳಿಸಿದರು.

Advertisement

ಸೆಂಟ್ರಲ್‌ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ರವಿವಾರ ಪರಿಸರ ಇಲಾಖೆ ವತಿಯಿಂದ ಆಯೋಜಿಸಿದ್ದ “ವಿಶ್ವ ಪರಿಸರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ವಿವಿಧ ಪ್ರಶಸ್ತಿಗಳನ್ನು ವಿತರಿಸಿ ಅವರು ಮಾತನಾಡಿದರು.

ಅರಣ್ಯ ಒತ್ತುವರಿ, ವಾಯು ಮತ್ತು ಜಲ ಮಾಲಿನ್ಯ, ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರ ನಾಶವಾಗುತ್ತಿದೆ. ಪರಿ ಣಾಮವಾಗಿ ಒಂದು ತಲೆಮಾರಿನಿಂದ ಮತ್ತೂಂದು ತಲೆಮಾರಿಗೆ ಮನುಷ್ಯನ ಜೀವಿತ ಅವಧಿ ಕಡಿಮೆ ಯಾಗುತ್ತಿದೆ. ಇದನ್ನು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕಿದೆ. ಹೀಗಾಗಿ ಪರಿಸರ ಸ್ನೇಹಿ ವಾಹನ, ಪರಿಸರ ಸ್ನೇಹಿ ವಸ್ತುಗಳನ್ನು ಬಳಸೋಣ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ| ಶಾಂತ್‌ ಎ. ತಿಮ್ಮಯ್ಯ ಮಾತನಾಡಿ, ಈ ಹಿಂದೆ ಘನತ್ಯಾಜ್ಯದ ಬಗ್ಗೆ ಎಲ್ಲರೂ ಆತಂಕ ವ್ಯಕ್ತಪಡಿಸಿದ್ದೆವು. ಆದರೆ ಈಗಿನ ದಿನಗಳಲ್ಲಿ ಇ-ತ್ಯಾಜ್ಯ ವಿಲೇವಾರಿ ಸಾಕಷ್ಟು ಸಮಸ್ಯೆ ಉಂಟು ಮಾಡುತ್ತಿದೆ. ಇ-ತ್ಯಾಜ್ಯವನ್ನು ಹೇಗೆ ಮರುಬಳಕೆ ಮಾಡಬೇಕು ಎಂಬು ದನ್ನು ಆಲೋಚಿಸಬೇಕಿದೆ ಎಂದರು.

ನಾಲ್ವರಿಗೆ ರಾಜ್ಯ ಪರಿಸರ ಪ್ರಶಸ್ತಿ
ರಾಜ್ಯದ ವಿವಿಧೆಡೆ ಉತ್ತಮ ಪರಿಸರ ನಿರ್ಮಾಣಕ್ಕಾಗಿ ದುಡಿಯು ತ್ತಿರುವವರಿಗೆ 2021-22ನೇ ಸಾಲಿನ ರಾಜ್ಯ ಪರಿಸರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಕ್ಷಿಣ ಕನ್ನಡದ ಮಾಧವ ಉಳ್ಳಾಲ, ಕೋಲಾರದ ಆರ್‌. ರಾಜಶೇಖರನ್‌, ಗ್ರೀನ್‌ ರಾಯಚೂರು ಸಂಸ್ಥೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿಗೆ ಪರಿಸರ ಪ್ರಶಸ್ತಿ ನೀಡಲಾಯಿತು. ತಲಾ ಒಂದು ಲಕ್ಷ ರೂ. ಮತ್ತು ಫ‌ಲಕ ನೀಡಿ ಗೌರವಿಸಲಾಯಿತು. ಇದರ ಜತೆಗೆ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲೆ ವಿಜೇತರಿಗೆ ಪ್ರಶಸ್ತಿ ವಿತರಣೆ, ವಿಶೇಷ ಅಂಚೆ ಲಕೋಟೆಯನ್ನು ಸಹ ಬಿಡುಗಡೆ ಮಾಡಲಾಯಿತು.ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಸಹಿತ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಪರಿಸರ ಸಂರಕ್ಷಣೆ ಸಂಕಲ್ಪ ಮಾಡೋಣ: ಸಿಎಂ
ಕಳೆದ 20 ವರ್ಷಗಳಲ್ಲಿ ಅರಣ್ಯವು ಅತಿ ದೊಡ್ಡ ಪ್ರಮಾಣದಲ್ಲಿ ನಾಶವಾಗಿದೆ. ಇದನ್ನು ಸರಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ನಾವೆಲ್ಲರೂ ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಉತ್ತಮ ಪರಿಸರ ನಿರ್ಮಾಣದ ಸಂಕಲ್ಪ ಮಾಡೋಣವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾರ್ಯಕ್ರಮಕ್ಕೆ ಆನ್‌ಲೈನ್‌ ಮೂಲಕ ಪರಿಸರ ದಿನದ ಶುಭಾಶಯ ಕೋರಿದ ಅವರು, ಮನುಷ್ಯನ ದುರಾಸೆಯಿಂದ ಪರಿಸರ ದಿನದಿಂದ ದಿನಕ್ಕೆ ಹೆಚ್ಚು ನಾಶವಾಗುತ್ತಿದೆ. ಮಣ್ಣಿನ ಫ‌ಲವತ್ತತೆ ಕಡಿಮೆಯಾಗುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ಸಲಹೆ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next