ಕಲಬುರಗಿ: ನಮ್ಮಲ್ಲಿ ಅಧ್ಯಾಪಕರ ಕೊರತೆ, ಮೂಲಭೂತ ಸೌಕರ್ಯ ಹಾಗೂ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ವ್ಯಾಪಕವಾಗಿ ಬಳಕೆಯಾಗದೆ ಇರುವುದರಿಂದ ವಿದೇಶಿ ವಿಶ್ವವಿದ್ಯಾಲಯಗಳಿಗೆ ಸರಿಸಾಟಿಯಾಗಿ ನಮ್ಮ ವಿಶ್ವವಿದ್ಯಾಲಯಗಳು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಸ್.ಆರ್. ನಿರಂಜನ್ ಹೇಳಿದರು.
ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದ ಹೊಸ ಸಭಾಂಗಣದಲ್ಲಿ ಭಾರತರತ್ನ ಡಾ| ಬಿ.ಆರ್. ಅಂಬೇಡ್ಕರ್ ಸ್ಮರಣಾರ್ಥ ಹಮ್ಮಿಕೊಂಡಿದ್ದ 2018-19ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸಬೇಕು. ಶಿಕ್ಷಕ ವೃತ್ತಿ ಪವಿತ್ರವಾದದ್ದು. ಅದನ್ನು ಸರಿಯಾಗಿ ನಿಭಾಯಿಸಬೇಕು. ಕಲಿಕೆಯು ಕೇವಲ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ, ನಿರಂತರ
ಪ್ರಕ್ರಿಯೆ. ಶಿಕ್ಷಕರು ಆಧುನಿಕತೆಗೆ ತಕ್ಕಂತೆ ಬದಲಾವಣೆ ಆಗಬೇಕು ಎಂದರು.
ಮುಖ್ಯ ಭಾಷಣಕಾರರಾಗಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ಪಿ. ಕಣ್ಣನ್ ಮಾತನಾಡಿ, ಡಾ| ಬಿ.ಆರ್.ಅಂಬೇಡ್ಕರ್ ಅವರ ಹೆಸರಿನ ಮೇಲೆ ನಡೆಯುತ್ತಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಅಂಬೇಡ್ಕರ್ ತಮ್ಮ
ಜೀವಿತಾವಧಿ ಯಲ್ಲಿ ಅನೇಕ ಕಷ್ಟ, ನೋವುಗಳನ್ನು ನುಂಗಿ ನಮಗೆ ಬೆಳಕು ನೀಡಿದ್ದಾರೆ. ಅಂತಹ ಕ್ಲಿಷ್ಟ ಸಂದರ್ಭದಲ್ಲಿ ವಿದೇಶದಲ್ಲಿ ಶಿಕ್ಷಣ ಪಡೆದ ಕೀರ್ತಿ ಡಾ| ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಅವರು ಪಟ್ಟಿರುವ ಪರಿಶ್ರಮ, ಅವರ ಸ್ವಂತ ಜೀವನಕ್ಕಾಗಿ ಅಲ್ಲ. ದೇಶದ ಅಭಿವೃದ್ಧಿಗೆ ಮಾಡಿರುವ ಶ್ರಮವಾಗಿದೆ.
ಅವರ ಜೀವನದ ತತ್ವ, ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅರ್ಥ ಬರುತ್ತದೆ ಎಂದರು. ಡಾ| ಅನುಸೂಯಾ ಗಾಯಕವಾಡ, ಡಾ| ಶ್ರೀಮಂತ ಹೋಳಕರ್, ಚನ್ನಕ್ಕಿ ನಾಗಪ್ಪ, ಮೂರ್ತಿ ಶರಣಪ್ಪ, ಡಾ| ಸವಿತಾ ತಿವಾರಿ,
ಡಾ| ಶಾಂತಲಾ ಎ.ಸಿ. ಮುಂತಾದವರು ಇದ್ದರು.