ಕಲಬುರಗಿ: ಉನ್ನತ ಶಿಕ್ಷಣದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಕೆ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ಚಂದ್ರಕಾಂತ ಯಾತನೂರ ಹೇಳಿದರು.
ಆಳಂದ ತಾಲೂಕು ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ಎರಡು ದಿನಗಳ ಮೂಕ್ (ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ) ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ನಾವು ಸಂಪ್ರಾದಾಯಿಕ ಶಿಕ್ಷಣ ಪದ್ಧತಿಯಿಂದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಆಧಾರಿತ ಆಧುನಿಕ ಶಿಕ್ಷಣ ಪದ್ದತಿ ಕಡೆಗೆ ಹೋಗುವ ಅನಿವಾರ್ಯತೆ ಬಂದಿದೆ ಎಂದು ಹೇಳಿದರು.
ಗುಣಮಟ್ಟದ ಶಿಕ್ಷಕರ ಕೊರತೆ ನಮ್ಮನ್ನು ಕಾಡುತ್ತಿರುವ ಇಂದಿನ ಯುಗದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಆಧಾರಿತ ಬೃಹತ್ ತೆರೆದ ಅಂತರ್ಜಾಲ ಪಠ್ಯದ ಬಳಕೆಯಿಂದ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಗೆ ಪೂರಕವಾದ ಶಿಕ್ಷಣ ನೀಡಬಹುದಾಗಿದೆ. ಈ ಹಿಂದೆ ನಾವು ಅಳವಡಿಸಿಕೊಂಡಂತಹ ದೂರ ಶಿಕ್ಷಣ ಪದ್ಧತಿಗಿಂತ ಇದು ಬಹಳ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಕ್ಷೇತ್ರದಲ್ಲಾದ ಅಭೂತಪೂರ್ವ ಅಭಿವೃದ್ಧಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಬಳಕೆ ಕ್ರಾಂತಿ ತಂದಿದೆ. ಸಂಶೋದನೆ ಪ್ರಕಾರ ಶಿಕ್ಷಣದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆಯಿಂದ ವಿದ್ಯಾರ್ಥಿಗಳ ಕಲಿಕೆ ಗುಣಮಟ್ಟದಲ್ಲಿ ಸಾಕಷ್ಟು ಉನ್ನತಿಯಾಗಿದೆ. ವಿಶ್ವದ ಅನೇಕ ವಿಶ್ವವಿದ್ಯಾಲಯಗಳು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಆಧಾರಿತ ಬೃಹತ್ ತೆರೆದ ಅಂತರಜಾಲ ಪಠ್ಯ ಆಧಾರಿತ ಬೋಧನಾ ಪದ್ಧತಿ ಅಳವಡಿಸಿಕೊಂಡಿವೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ನವದೆಹಲಿಯ ರಾಷ್ಟ್ರೀಯ ಶಿಕ್ಷಣ ಯೋಜನೆ ಮತ್ತು ಆಡಳಿತ ವಿಶ್ವವಿದ್ಯಾಲಯದ ಪ್ರೊ| ಕೆ. ಶ್ರೀನಿವಾಸ ಮಾತನಾಡಿ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಕೆಯು ಬೋಧನೆ ಮತ್ತು ಕಲಿಕಾ ಗುಣಮಟ್ಟ ಹೆಚ್ಚಿಸುತ್ತದೆ. ಆದಾಗ್ಯೂ ಗುಣಮಟ್ಟದ ಶಿಕ್ಷಣ ಒದಗಿಸಲು ಅಗತ್ಯವಾದ ತಂತ್ರಜ್ಞಾನ ಬಳಕೆ ಬಗ್ಗೆ ಶಿಕ್ಷಕರಿಗೆ ಸಾಕಷ್ಟು ಕೌಶಲ್ಯಗಳಿಲ್ಲ. ಎರಡು ದಿನದ ಕಾರ್ಯಗಾರ ಫಲಿತಾಂಶ ಆಧಾರಿತವಾಗಿದೆ. ವಿಶ್ವವಿದ್ಯಾಲಯದ ಶಿಕ್ಷಕರು ಸ್ವಯಂ ವೇದಿಕೆಯಲ್ಲಿ ಮೂಲ ಆಧಾರಿತ ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನ ಪದ್ಧತಿ ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ವಿವಿಧ ನಿಕಾಯಗಳ ಡೀನ್‌ರು, ವಿಭಾಗಗಳ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು ಇದ್ದರು. ಕಾರ್ಯಕ್ರಮದ ಸಂಯೋಜಕ
ಡಾ| ಜಯವೆಲು ಎಸ್. ಸ್ವಾಗತಿಸಿದರು. ಡಾ| ವಿಜೇಂದ್ರ ಪಾಂಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.