ಬೆಂಗಳೂರು: ನಗರದಲ್ಲಿರುವ ಮಾಹಿತಿ ತಂತ್ರಜ್ಞಾನ ಸಾಮರ್ಥ್ಯವನ್ನು ಬಳಸಿಕೊಳ್ಳುವ ಜೊತೆಗೆ ಇಂಡಸ್ಟ್ರಿ 4.0 ಹಾಗೂ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಪರಿಕಲ್ಪನೆಗಳನ್ನು ಅಡಕಗೊಳಿಸಿ ‘ಸ್ಮಾರ್ಟ್ ಫ್ಯಾಕ್ಟರಿ’ಗಳನ್ನು ಸ್ಥಾಪಿಸಲು ಮಷಿನ್ ಟೂಲ್ ತಯಾರಿಕಾ ವಲಯದಲ್ಲಿರುವವರು ಗಮನ ಕೇಂದ್ರೀಕರಿಸಬೇಕು ಎಂದು ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಭಾರತೀಯ ಮಷಿನ್ ಟೂಲ್ ತಯಾರಿಕರ ಸಂಸ್ಥೆ (ಐಎಂಟಿಎಂಎ)ಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಿರುವ ಯಂತ್ರೋಪಕರಣಗಳ ಪ್ರದರ್ಶನ- ಇಮ್ ಟೆಕ್ಸ್ 22, ಟೂಲ್ ಟೆಕ್ 22 ಮತ್ತು ಡಿಜಿಟಲ್ ಮ್ಯಾನಫ್ಯಾಕ್ಚರಿಂಗ್- ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈಗಿನ ಕಾಲಮಾನದಲ್ಲಿ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಎಂಬುದು ಪ್ರವರ್ಧಮಾನಕ್ಕೆ ಬರುತ್ತಿದೆ. ಈ ಅವಕಾಶವನ್ನು ನಾವು ಕಳೆದುಕೊಂಡರೆ ಗುಣಮಟ್ಟ, ಬೆಲೆ ಮತ್ತು ಸೇವಾ ಪೂರೈಕೆಯಲ್ಲಿ ನಮ್ಮ ಕಂಪನಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧೆ ಒಡ್ಡಲಾರದೆ ಸೊರಗುತ್ತವೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ, ಐಟಿ ಕಂಪನಿಗಳಿಗೆ ತಯಾರಿಕಾ ಉದ್ದಿಮೆಗಳ ಜೊತೆ ಸಕ್ರಿಯವಾಗಿ ಸಂಪರ್ಕದಲ್ಲಿರಲು ಅವರು ಸಲಹೆ ಕೊಟ್ಟರು. ಈಗ ಹೆಚ್ಚು ಕಡಿಮೆ ಪ್ರತಿಯೊಂದು ಐಟಿ ಕಂಪನಿ ಕೂಡ ತಯಾರಿಕಾ ವಲಯಕ್ಕೆ ಸಂಬಂಧಿಸಿದ ವಿಭಾಗವನ್ನು ಹೊಂದಿರುವಷ್ಟು ತಯಾರಿಕಾ ವಲಯಕ್ಕೆ ಪ್ರಾಮಖ್ಯತೆ ಬಂದಿದೆ. ಬೆಂಗಳೂರು ನಗರವು ದೇಶದ ಸಿಲಿಕಾನ್ ಕಣಿವೆ ಹಾಗೂ ತಂತ್ರಜ್ಞಾನ ರಾಜಧಾನಿ ಆಗಿರುವಂತೆಯೇ ಮಷಿನ್ ಟೂಲ್ ರಾಜಧಾನಿ ಕೂಡಾ ಆಗಿದೆ. ಮಷಿನ್ ಟೂಲ್ ಬಿಲ್ಡರ್ ಗಳ ಮತ್ತು ಪೂರೈಕೆದಾರರ ಸರಪಳಿಯು ಜಾಲಹಳ್ಳಿ ಮತ್ತು ಪೀಣ್ಯಗಳಲ್ಲಿ ಕಾರ್ಯಾಚರಿಸುತ್ತಿದೆ. ಭಾರತದ ಒಟ್ಟಾರೆ ಮಷಿನ್ ಟೂಲ್ ಉತ್ಪಾದನೆಯಲ್ಲಿ ಶೇ 50ರಷ್ಟು ರಾಜ್ಯದಲ್ಲಿ ಆಗುತ್ತಿದ್ದು, ಈ ವಲಯದ ಪೋಷಣೆಯಲ್ಲಿ ಐಎಂಟಿಎಂಎ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಐಎಂಟಿಎಂಎ ತನ್ನ ಬೆಂಗಳೂರು, ಪುಣೆ ಮತ್ತು ಗುರುಗ್ರಾಮದಲ್ಲಿರುವ ತಾಂತ್ರಿಕ ಕೇಂದ್ರಗಳ ಮೂಲಕ ಹೊಸ ತಾಂತ್ರಿಕತೆಗಳಿಗೆ ಬೇಕಾದ ಮಾನವ ಸಂಪನ್ಮೂಲವನ್ನು ಒದಗಿಸುತ್ತಿದೆ. ಜೊತೆಗೆ ಕಾರ್ಪೊರೇಟ್ ಕಂಪನಿಗಳಿಗಾಗಿ ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದೆ. ಹೊಸದಾಗಿ ಎಂಜಿನಿಯರಿಂಗ್ ಮುಗಿಸಿದವರಿಗೆ ಉದ್ಯೋಗಕ್ಕೆ ಸಜ್ಜುಗೊಳಿಸಲು ವಿಶೇಷ ಕೋರ್ಸ್ ಗಳನ್ನು ನಡೆಸುತ್ತಿದೆ. ಬರುವ ದಿನಗಳಲ್ಲಿ ಇವುಗಳ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಪತಿಯ ವಿರುದ್ಧ ನಪುಂಸಕತ್ವದ ಆರೋಪ-ವಿಚ್ಛೇದನ ಮಂಜೂರು; ಹೈಕೋರ್ಟ್ ಆದೇಶದಲ್ಲಿ ಹೇಳಿದ್ದೇನು?
ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಪ್ರದರ್ಶನಕ್ಕೆ ಉಚಿತ ಪ್ರವೇಶಾವಕಾಶ ಒದಗಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಎಂಟಿಎಂಎ 75 ಸಾರ್ಥಕ ವಸಂತಗಳನ್ನು ಪೂರೈಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಐಎಟಿಎಂಎ ಅಧ್ಯಕ್ಷ ರವಿ ರಾಘವನ್, ಉಪಾಧ್ಯಕ್ಷ ರಾಜೇಂದ್ರ ರಾಜಮಾನೆ, ಸಂಘದ ಪಿ.ಜೆ.ಮೋಹನ್ ರಾಮ್ ಮತ್ತಿತರರು ಇದ್ದರು.