Advertisement
ಕಾಲ ಮುಂದುವರಿಯುತ್ತಿದ್ದಂತೆ ಕೃತಕ ಬುದ್ಧಿಮತ್ತೆಯು ನಮ್ಮ ಜೀವನದಲ್ಲಿ ಇನ್ನಷ್ಟು ಆಳವಾದ ಪ್ರಭಾವ-ಪರಿಣಾಮಗಳನ್ನು ಉಂಟು ಮಾಡಲಿದೆ. ಚಿಕಿತ್ಸೆಯ ನಿಖರತೆ ಮತ್ತು ಗ್ರಾಹಕರ ಹಿತಾನುಭವವನ್ನು ಇನ್ನಷ್ಟು ಉತ್ತಮಪಡಿಸಲು ದಂತ ವೈದ್ಯಕೀಯ ಕ್ಷೇತ್ರದಲ್ಲಿಯೂ ಕೃತಕ ಬುದ್ಧಿಮತ್ತೆಯು ನಿರ್ಣಾಯಕ ಪಾತ್ರವನ್ನು ವಹಿಸಲಿದೆ.
Related Articles
Advertisement
ವಿವಿಧ ದಂತ ಅನಾರೋಗ್ಯಗಳನ್ನು ಗುರುತಿಸಲು ಮತ್ತು ಚಿಕಿತ್ಸೆಯ ಪ್ರಕ್ರಿಯೆಯಲ್ಲಿ ನೆರವಾಗಲು ಕೃತಕ ಬುದ್ದಿಮತ್ತೆಯನ್ನು ದಂತವೈದ್ಯರಿಗಿಂತಲೂ ಪರಿಣಾಮಕಾರಿಯಾಗಿ ಉಪಯೋಗವಾಗುವಂತೆ ರೂಪಿಸುವುದು ಸಾಧ್ಯವಿದೆ. ರೋಗಪತ್ತೆ ಮತ್ತು ಶಿಫಾರಸಾದ ಚಿಕಿತ್ಸೆಯ ವಿಚಾರದಲ್ಲಿ ಅಂತಿಮ ನಿರ್ಧಾರವು ದಂತವೈದ್ಯರದಾದರೂ ಕೃತಕ ಬುದ್ಧಿಮತ್ತೆಯು ಅರ್ಥ ಮಾಡಿಕೊಳ್ಳಲು ಸುಲಭಸಾಧ್ಯವಾದ ಮತ್ತು ದೃಶ್ಯ ಮಾಹಿತಿಗಳನ್ನು ವಾಸ್ತವ ಕಾಲದಲ್ಲಿ ಒದಗಿಸಬಲ್ಲುದಾಗಿದೆ.
ದಂತ ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು
ಕೃತಕ ಬುದ್ಧಿಮತ್ತೆಯು ವರ್ಚುವಲ್ ಸೆಟ್‌ಅಪ್‌ನಲ್ಲಿ ವಸ್ತು-ವಿಷಯಗಳ ದೃಶ್ಯ ವಿಚಾರ ಮತ್ತು ಸೌಂದರ್ಯಕ್ಕೆ ಸದ್ಯ ಸೀಮಿತವಾಗಿದೆ. ಆದರೆ ರೋಗಿ ಜನಸಂಖ್ಯೆ, ಚಿಕಿತ್ಸೆ ಮತ್ತು ಔದ್ಯಮಿಕ ಅಗತ್ಯಗಳಲ್ಲಿ ಇದನ್ನು ವಿವಿಧ ಆಯಾಮಗಳಲ್ಲಿ ಉಪಯೋಗಿಸಿಕೊಳ್ಳುವುದಕ್ಕೆ ಅಪಾರವಾದ ಅವಕಾಶ ಇದೆ. ದಂತವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಪ್ರಮುಖ ಪ್ರಯೋಜನಗಳು ಹೀಗಿವೆ:
ಉತ್ತಮ ಫಲಿತಾಂಶಗಳು
ಕೃತಕ ಬುದ್ಧಿಮತ್ತೆಯನ್ನು ದಂತವೈದ್ಯಕೀಯ ಚಿಕಿತ್ಸೆಯಲ್ಲಿ ಉಪಯೋಗಿಸುವುದರಿಂದ ಉತ್ತಮ ಫಲಿತಾಂಶಗಳು ಮತ್ತು ವೈಫಲ್ಯ ಕಡಿಮೆಯಾಗುವುದಕ್ಕೆ ಸಾಧ್ಯವಿದೆ. ಪರಿಣಾಮವಾಗಿ ದಂತವೈದ್ಯರು ಕೃತಕ ಬುದ್ಧಿಮತ್ತೆಯನ್ನು ನೆರವು ವ್ಯವಸ್ಥೆಯಾಗಿ ಇರಿಸಿಕೊಂಡು ತಾವು ರೋಗಿ ಆರೈಕೆ ಮತ್ತು ಚಿಕಿತ್ಸೆಯತ್ತ ಸಂಪೂರ್ಣವಾಗಿ ಗಮನ ಹರಿಸುವುದು ಸಾಧ್ಯವಾಗಲಿದೆ. ಪ್ರೊಸ್ಥೆಟಿಕ್ಸ್‌ನಲ್ಲಾಗಲೀ ಆರ್ಥೊಡಾಂಟಿಕ್ ಚಿಕಿತ್ಸೆಯಲ್ಲಾಗಲೀ; ಮನುಷ್ಯ ಮಧ್ಯಪ್ರವೇಶ ಕಡಿಮೆಯಾಗುವುದರಿಂದ ನಿಖರ ಫಲಿತಾಂಶಗಳು ಒದಗುತ್ತವೆ.
ಸ್ವೀಕಾರಾರ್ಹತೆ ವೃದ್ಧಿ
ರೋಗಿಗಳಲ್ಲಿ ತಿಳಿವಳಿಕೆ ಮತ್ತು ಸ್ವೀಕಾರಾರ್ಹತೆಯನ್ನು ಕೃತಕ ಬುದ್ಧಿಮತ್ತೆಯ ಬಳಕೆಯು ಹೆಚ್ಚಿಸುತ್ತದೆ. ರೋಗಿಗಳಲ್ಲಿ ಇರಬಹುದಾದ ಆರಂಭಿಕ ಆತಂಕ ಮತ್ತು ಚಿಂತೆಯನ್ನು ಅದು ಕಡಿಮೆ ಮಾಡುತ್ತದೆ. ವರ್ಚುವಲ್ ಸೆಟ್‌ಅಪ್ ಗಳು ಚಿಕಿತ್ಸೆಯ ಪ್ರಾರಂಭಕ್ಕೂ ಮುನ್ನವೇ ಫಲಿತಾಂಶಗಳನ್ನು ಚಿತ್ರಣವಾಗಿ ತೋರಿಸುವುದಕ್ಕೆ ನೆರವಾಗುತ್ತವೆ.
ಚಿಕಿತ್ಸೆ ಒದಗಿಸುವ ಸಮಯ ಇಳಿಕೆ
3 ಆಯಾಮದ ಡಿಜಿಟಲ್ ನೆರವು ಮತ್ತು ಪೋರ್ಟಲ್ ಗಳಿಂದಾಗಿ ದಂತವೈದ್ಯರಿಗೆ ಚಿಕಿತ್ಸೆಯ ಸಮಯವನ್ನು ಶೇ. 50ರಷ್ಟು ತಗ್ಗಿಸುವುದಕ್ಕೆ ಸಾಧ್ಯವಾಗಿದೆ. ದಂತವೈದ್ಯರು ಕ್ಷಿಪ್ರ ಮತ್ತು ಉತ್ತಮ ಫಲಿತಾಂಶವನ್ನು ಒದಗಿಸುವುದರಿಂದಾಗಿ ರೋಗಿಗಳ ಫಾಲೊಅಪ್ ಕೂಡ ಕಡಿಮೆಯಾಗಲು ಸಾಧ್ಯ.
ದಂತವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಗೆ ಸವಾಲುಗಳು
ದಂತ ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯು ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ದಂತವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಎದುರಿಸುತ್ತಿರುವ ಸವಾಲುಗಳು ಈ ಕೆಳಗಿನಂತಿವೆ.
ತಪ್ಪು ಗ್ರಹಿಕೆಗಳು
ಇತರ ವೈದ್ಯಕೀಯ ಕ್ಷೇತ್ರಗಳಂತೆ ಕೃತಕ ಬುದ್ಧಿಮತ್ತೆಯು ದಂತವೈದ್ಯರ ಉದ್ಯೋಗವನ್ನು ಕಸಿದುಕೊಳ್ಳುವುದಿಲ್ಲ. ಬದಲಾಗಿ, ಅದು ಸಕ್ರಿಯ ಸಹಾಯಕನಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ, ಎಕ್ಸ್-ರೇ ಓದುವುದು ಅಂದರೆ ಅನ್ವಯಿಸಿ ಅರ್ಥ ಮಾಡಿಕೊಳ್ಳುವುದು ದಂತ ವೈದ್ಯಕೀಯ ಕ್ಷೇತ್ರದ ಒಂದು ಪುಟ್ಟ ಭಾಗ. ಉತ್ತಮ ಫಲಿತಾಂಶಕ್ಕಾಗಿ ಕೃತಕ ಬುದ್ಧಿಮತ್ತೆಯ ಸಹಾಯವನ್ನು ಇದಕ್ಕಾಗಿ ಪಡೆಯುವುದು ಎಂದರೆ ಭೂತಗನ್ನಡಿಯನ್ನು ಉಪಯೋಗಿಸಿದಂತೆ.
ಸೀಮಿತ ಜ್ಞಾನ
ದಂತ ವೈದ್ಯರು ರೋಗಿ ಆರೈಕೆ ಮತ್ತು ಚಿಕಿತ್ಸೆಯ ಬಗ್ಗೆ ಮಾತ್ರ ಗಮನ ಹರಿಸುವುದರಿಂದ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯು ಉತ್ತಮ ಫಲಿತಾಂಶ ಒದಗಿಸುವುದಕ್ಕೆ ಕಾರಣವಾಗಬಲ್ಲುದು. ಆದರೆ ಇದಕ್ಕಾಗಿ ದಂತ ವೈದ್ಯರು ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯ ಬಳಕೆ, ಸಾಮರ್ಥ್ಯ ಮತ್ತು ಮಿತಿಗಳ ಬಗ್ಗೆ ಹೆಚ್ಚು ತಿಳಿವಳಿಕೆ ಉಳ್ಳವರಾಗಬೇಕು. ಪ್ರಸ್ತುತ ಸ್ಥಿತಿಗತಿಯಲ್ಲಿ ಕೃತಕ ಬುದ್ಧಿಮತ್ತೆ ಸಲಕರಣೆಗಳ ಬಗ್ಗೆ ಮತ್ತು ಅವುಗಳ ಉಪಯೋಗದ ಬಗ್ಗೆ ಜ್ಞಾನದ ಕೊರತೆಯಿದೆ.
ಸದ್ಯೋಭವಿಷ್ಯದಲ್ಲಿಯೇ ದಂತವೈದ್ಯಕೀಯ ಕುರ್ಚಿಯಲ್ಲಿ ಕುಳಿತ ರೋಗಿಗಳು ಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆಯ ಇರವಿನ ಹಿತಾನುಭವವನ್ನು ಪಡೆಯಲಿದ್ದಾರೆ. ದಂತವೈದ್ಯಕೀಯ ಕೃತಕ ಬುದ್ಧಿಮತ್ತೆ ಸಾಧನ-ವ್ಯವಸ್ಥೆಗಳು ಪ್ರಸ್ತುತ ಇರುವ ಕುಂದುಕೊರತೆಗಳನ್ನು ಪರಿಹರಿಸಿಕೊಂಡು ರೋಗಿಗಳ ಒಟ್ಟಾರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮಗಳನ್ನು ಉಂಟು ಮಾಡಲಿವೆ. ದಂತವೈದ್ಯಕೀಯ ಕ್ಷೇತ್ರ ಮತ್ತು ಒಟ್ಟಾರೆಯಾಗಿ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯ ಸ್ಥಾನವನ್ನು ಆಕ್ರಮಿಸಿ ಡಿಜಿಟಲ್ ಕ್ರಾಂತಿಗೆ ಕಾರಣವಾಗುವ ಎಲ್ಲ ಅವಕಾಶಗಳು ಕೃತಕ ಬುದ್ಧಿಮತ್ತೆಗೆ ಇವೆ.
–ಡಾ| ಆನಂದದೀಪ್ ಶುಕ್ಲಾ, ಅಸೋಸಿಯೇಟ್ ಪ್ರೊಫೆಸರ್,
ಓರಲ್ ಸರ್ಜರಿ ವಿಭಾಗ, ಎಂಸಿಒಡಿಎಸ್, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓರಲ್ ಸರ್ಜರಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)