Advertisement

ಜೈನದರ್ಶನದಲ್ಲಿ ತಂತ್ರ

07:35 AM Jan 07, 2018 | Harsha Rao |

ತಂತ್ರಗಳಿಗೆ ದೇಶ-ಕಾಲಗಳ ಮಿತಿ ಇಲ್ಲ, ಅದರ ಬೇರುಗಳು ಭಾರತ ಮಾತ್ರವಲ್ಲ , ದೇಶ-ವಿದೇಶಗಳಲ್ಲೂ ಹರಡಿದೆ. ಅದು ಈಗ ಇರುವ ಪಂಥಗಳಲ್ಲಿ ಮಾತ್ರವಲ್ಲ, ಅಳಿದು ಹೋದ ನಾಗರಿಕತೆ-ಸಂಸ್ಕƒತಿಗಳಲ್ಲೂ ಬೆರೆತುಹೋಗಿದೆ. ಮಾತೃಭಕ್ತಿ, ಶಕ್ತಿಪೂಜೆ ಇವು ಜೋಡಿಯಾಗಿ ಸಾಗುತ್ತ ಬಂದಿವೆ. ನಮ್ಮ ದೇಶದ ಬುಡಕಟ್ಟು ಪಂಥಗಳು, ವೈದಿಕಧರ್ಮ, ಬೌದ್ಧಧರ್ಮದಲ್ಲಿ ಮಾತ್ರವಲ್ಲ , ಅಹಿಂಸೆಗೆ ಮಹತ್ವ ನೀಡಿರುವ ಜೈನಧರ್ಮದಲ್ಲೂ ತಂತ್ರದ ಒಳಧಾರೆಯಿದೆ.

Advertisement

ಐತಿಹಾಸಿಕವಾಗಿ ಬುದ್ಧನಿಗಿಂತಲೂ ಕನಿಷ್ಠ 300 ವರ್ಷಗಳಷ್ಟು ಹಳೆಯದಾದ ಜೈನಮತದಲ್ಲಿ ತಂತ್ರವು ಆರಂಭದ ಹಂತದಲ್ಲಿ ಪ್ರಭಾವಿಸಿರಲಿಲ್ಲ. ಪ್ರಾಚೀನ ಜೈನಗ್ರಂಥಗಳಲ್ಲಿ ಜೈನಮುನಿಗಳು ಧ್ಯಾನದ ಉಪ ಉತ್ಪತ್ತಿಯಾಗಿ (by-product)) ಅನೇಕ ಸಿದ್ಧಿಗಳನ್ನು ಗಳಿಸಿದ್ದರ ಉÇÉೇಖಗಳಿವೆ. ಉದಾಹರಣೆಗೆ ನೆಲಕ್ಕೆ ಕಾಲು ತಾಕಿಸದೆ ಆಕಾಶದಲ್ಲಿ ಸಂಚ‌ರಿಸುವ ಸಿದ್ಧಿ. ಆದರೆ ಈ ಸಿದ್ಧಿಗಳು ಆಧ್ಯಾತ್ಮಿಕ ಸಾಧನೆಗೆ ಅಡಚಣೆಯೆಂದು ಅದರ ಬಳಕೆಯನ್ನು ಮುನಿ-ಶ್ರಾವಕ (ಗೃಹಸ್ಥ)ರಿಬ್ಬರಿಗೂ ನಿಷೇಧಿಸಲಾಯಿತು. ಆದರೆ, ಮುಂದೆ ಮಧ್ಯಕಾಲದಲ್ಲಿ ಜೈನರು ಅನೇಕ ಯಂತ್ರಗಳನ್ನು (Mystical diagrams) ರಚಿಸಿ ಅವುಗಳಿಗೆ ವಿಧಾನ, ಆಚರಣೆಗಳನ್ನು ರೂಪಿಸಿದರು. ಯಂತ್ರ ಮತ್ತು ಆಚರಣೆಗಳನ್ನು ಬೆಸೆಯಲು ಮಂತ್ರ ಬೀಜಾಕ್ಷರಗಳು ಬಳಕೆಗೆ ಬಂದವು. ಸಾಮಾನ್ಯವಾಗಿ ಜೈನಯಂತ್ರಗಳಲ್ಲಿ ತೀರ್ಥಂಕರರ ಹೆಸರು ಕೆತ್ತಲ್ಪಟ್ಟಿರುತ್ತದೆ.

ಜೊತೆಯಲ್ಲಿ ಜೈನ ಯಕ್ಷ-ಯಕ್ಷಿಯರಿಗೆ ಸಂಬಂಧಿಸಿದ ಬೀಜಾಕ್ಷರಗಳಿರುತ್ತವೆ. ಜೈನ ಯಂತ್ರಾರಾಧನೆಯು ಸಮುದಾಯದ ಹಿರಿಯರೆನಿಸಿದ ಕ್ಷುಲ್ಲಕರು, ಭಟ್ಟಾರಕರು ಮತ್ತು ಯತಿಗಳ ಮಾರ್ಗದರ್ಶನದಲ್ಲಿ ನಡೆಯುತ್ತದೆ. ವಿದ್ವಾಂಸರಾದ ಪದ್ಮನಾಭ ಜೈನಿಯವರ ಅಭಿಪ್ರಾಯದಂತೆ ಋಷಿಮಂಡಲ, ಕಲಕುಂಡದಂಡ, ಗಂಧರವಲಯ ಮತ್ತು ಸಿದ್ಧ ಚಕ್ರಗಳು ಜೈನರ ಮುಖ್ಯ ಯಂತ್ರಗಳು (The Jain path of purification, Motilal Banarasides, Delhi, 2001).

ಜೈನಯಂತ್ರಾರಾಧನೆಯಲ್ಲಿ ಶ್ರಾವಕರಿಗಿಂತ ಮುನಿ, ಆಚಾರ್ಯರ ಪಾತ್ರವೇ ಹಿರಿದಾಗಿದ್ದು, ಶ್ರಾವಕರು ಮಂತ್ರಪಠಣಕ್ಕೆ ಯೋಗ್ಯರು. ಇಷ್ಟಾದರೂ Lacking the basic ingredient of the tantric cult-fusion of the mundane and the super mundane-such practices seem to have had little effect upon the development of Jainism ಎಂಬ ಅವರ ಮಾತನ್ನು ಮಧ್ಯಕಾಲದಲ್ಲಿ ಯಾಪನೀಯ ಪಂಥದ ಉಗಮಕ್ಕೂ ಹಿಂದಿನ ಜೈನಮತಕ್ಕೆ ಚೆನ್ನಾಗಿ ಅನ್ವಯಿಸಬಹುದು.
ಯಾಪನೀಯ ಸಂಘ ಜೈನಸಂಘದಲ್ಲಿ ಶ್ವೇತಾಂಬರ ಮತ್ತು ದಿಗಂಬರ ಸಂಘಗಳಂತೆಯೇ ಅತಿ ಪ್ರಾಚೀನವಾದ ಮತ್ತೂಂದು ಒಳಪಂಥವೇ ಯಾಪನೀಯ ಸಂಘ. ಇದಕ್ಕೆ ಗೋಪ್ಯ ಸಂಘ ಎಂಬ ಹೆಸರಿರುವುದನ್ನು ಸ್ವಲ್ಪ ಗಮನಿಸಬೇಕಾಗುತ್ತದೆ.

ದಿಗಂಬರ, ಶ್ವೇತಾಂಬರ ಎಂದು ಜೈನ ಸಂಘವು ಒಡೆದು ಇಬ್ಭಾಗವಾಗಿ ಎಪ್ಪತ್ತು ವರ್ಷಗಳ ನಂತರ ಶ್ರೀಕಲಶನೆಂಬ ಶ್ವೇತಾಂಬರ ಮುನಿಯಿಂದ ಆರಂಭವಾದ (ಕ್ರಿ.ಶ. 148) ಯಾಪನೀಯ ಸಂಘದ ಮೂಲಕ ತಂತ್ರವು ಜೈನಮತಕ್ಕೂ ಧಾಳಿಯಿಟ್ಟಿತು. ಬೆತ್ತಲೆಯಿರುತ್ತಿದ್ದ ಯಾಪನೀಯ ಮುನಿಗಳು ನವಿಲುಗರಿಯ ಪಿತ್ಛ ಮಾತ್ರ ಹೊಂದಿದ್ದು ಉಣ್ಣಲು ಪಾತ್ರೆಯನ್ನೂ ಹೊಂದಿರಲಿಲ್ಲ. ಪಾಣಿಪಾತ್ರೆಯನ್ನು ಬಳಸುತ್ತಿದ್ದ ಇವರು ನಗ್ನ ಮೂರ್ತಿಗಳ ಆರಾಧಕರು. ಉಳಿದಂತೆ ದಿಗಂಬರ ಪಂಥದ ಅನೇಕ ತಾತ್ವಿಕತೆಗಳನ್ನು ಒಪ್ಪುವ ಇವರು ತಾಂತ್ರಿಕ ಪ್ರೇರಣೆ ಪಡೆದ ಕಾರಣ ಮಾತೃಪಂಥದ ಆರಾಧಕರಾಗಿ ಸ್ತ್ರೀಯರಿಗೂ ಮುಕ್ತಿಯನ್ನು ಬೋಧಿಸಿದರು (ಕೆ. ಜಿ. ನಾಗರಾಜಪ್ಪ, 1998, ಪುಟ 142). ಕರ್ನಾಟಕದಲ್ಲಿ ಪ್ರಭಾವಶಾಲಿಯಾಗಿದ್ದ ಈ ಪಂಥಕ್ಕೆ ಕದಂಬ, ರಾಷ್ಟ್ರಕೂಟ ರಾಜ ಮನೆತನಗಳು ದಾನದತ್ತಿ ನೀಡಿವೆ. ಕರ್ನಾಟಕದಲ್ಲಿ ಪ್ರಭಾವಶಾಲಿಯಾಗಿರುವ ಜ್ವಾಲಾಮಾಲಿನಿ ಯಕ್ಷಿಯ ಆರಾಧನೆಗೆ ಯಾಪನೀಯರ ಪ್ರಭಾವವೇ ಕಾರಣ. ಜೈನರಲ್ಲಿ ತಾಂತ್ರಿಕತೆಯು ಶಾಕ್ತರೂಪದಲ್ಲಿ ಬಂದು ಶಾಕ್ತ ಜೈನವೆನಿಸಿತು. ಇಪ್ಪತ್ನಾಲ್ಕು ತೀರ್ಥಂಕರರಿಗೂ ಯಕ್ಷ, ಯಕ್ಷಿಯರಿದ್ದರೂ, ಇನ್ನೂ ಅನೇಕ ಶಾಸನ ದೇವತೆಗಳು ದೇವರನ್ನೇ ಒಪ್ಪದ ಜೈನಮತದಲ್ಲಿ ಪ್ರವೇಶಿಸಿದ್ದರೂ ಎÇÉಾ ಯಕ್ಷಿಯರೂ ಅಷ್ಟು ಪ್ರಸಿದ್ಧರಲ್ಲ. ಬಿಜಾಪುರ, ಕನಕಗಿರಿ ಮಲೆಯೂರು, ಮೈಸೂರು, ಕಾರ್ಕಳ, ಬೆಳಗಾಂ, ತುಮಕೂರು, ಹಾಸನ ಮುಂತಾದ ಪ್ರದೇಶಗಳಲ್ಲಿ ಜೈನಶಕ್ತಿ ಪೂಜೆಯ ಪ್ರಭಾವವಿದೆ. ತಂತ್ರ ಗ್ರಂಥಗಳಾದ ಭೈರವ ಪದ್ಮಾವತಿ ಕಲ್ಪ, ಜ್ವಾಲಿನೀ ಕಲ್ಪ, ಬಾಹುಬಲಿ ಕಲ್ಪಗಳಲ್ಲಿ ಮಂತ್ರ, ಮಂಡಲಾರಾಧನೆ, ಕಾಳಸರ್ಪದೋಷ ಪರಿಹಾರ ಮೊದಲಾದ ಕ್ರಮಗಳು ಉÇÉೇಖಗೊಂಡಿವೆ.

Advertisement

ದಿಗಂಬರ ಪಂಥದ ನೆಲೆವೀಡಾದ ಕರ್ನಾಟಕದಲ್ಲಿ ಇಂದಿಗೂ ತಂತ್ರ ಕಾಣುತ್ತಿರುವುದರ ಹಿಂದೆ ಕಣ್ಮರೆಯಾದ ಯಾಪನೀಯ ಪಂಥದ ಕೊಡುಗೆಯಿದೆ. ಬೌದ್ಧರಲ್ಲಿ ವಜ್ರಯಾನದ ಮೂಲಕ ತಂತ್ರ ಮತ್ತು ಅದರ ಆಚರಣೆಗಳು ಕಾಣಿಸಿಕೊಂಡಂತೆ ಜೈನರಲ್ಲಿ ಯಾಪನೀಯದ ಮೂಲಕ ಸಸ್ಯಾಹಾರ ಸಂಸ್ಕƒತಿಯಲ್ಲಿ ಅದಕ್ಕೆ ಹೊಂದಿಕೊಳ್ಳುವಂತೆ ತಂತ್ರ ಜೀವಂತವಾಗಿದೆ.
ಕೆಲವರು ಶಿವನ ಪರಮ ಆರಾಧಕರು. ಕೆಲವರು ವಿಷ್ಣುವಿನ ಪರಮ ಅಭಿಮಾನಿಗಳು. ಆದರೆ, ಕೆಲವೇ ಕೆಲವರು ಮಾತ್ರ ಲಲಿತೆಯ ನಾಮಗಳ ಪರಿಚಯ ಹೊಂದಿರುವರು ಎಂಬ ಮಾತು ಲಲಿತಾ ಸಹಸ್ರನಾಮದಲ್ಲಿದೆ. ಇದಕ್ಕಿಂತಲೂ ತೀವ್ರವಾಗಿ ದೇವಿಪೂಜೆಯ ಮಹತ್ವವನ್ನು ಹೇಳುವ ಮಾತು ತಂತ್ರಗಳಲ್ಲಿದೆ. “ಶಕ್ತಿಯಿಲ್ಲದೆ ಶಿವ ಶವ’ ಎಂಬ ಮಾತು ಗಮನಾರ್ಹ.

ಆದರೆ, ಶಾಕ್ತ ಪಂಥದ ದೃಷ್ಟಿಯಿಂದ ಈ ಮಾತನ್ನು ನೋಡದೆ ವ್ಯಾಪಕವಾದ ಸಾಂಸ್ಕƒತಿಕ ರಾಜಕಾರಣದ ಹಿನ್ನೆಲೆಯಲ್ಲಿ ತಂತ್ರವನ್ನು ಅಭ್ಯಾಸ ಮಾಡಬಹುದೆನಿಸುತ್ತದೆ. ಮಧ್ಯಯುಗದಲ್ಲಿ ಯುದ್ಧ, ಲೈಂಗಿಕತೆ, ಶತ್ರು ನಾಶ ಮುಂತಾದ ಕಾರಣಗಳಿಂದ ವೈದಿಕ (ಶೈವ, ವೈಷ್ಣವ), ಜೈನ-ಬೌದ್ಧಗಳಿಗೆ ಸೀಮಿತವಾಗಿದ್ದ ರಾಜತ್ವದ ಮಾನ್ಯತೆ ತಾಂತ್ರಿಕರಿಗೂ ದೊರೆಯಿತು. ತಾಂತ್ರಿಕರು ರಾಜಗುರುಗಳಾದಂತೆ, ತಂತ್ರದ ಆಚರಣೆಗಳು ಅರಮನೆ ಸಮೀಪದ ಅಕ್ಷರ ಲೋಕಕ್ಕೆ ತೆರೆದುಕೊಂಡವು. ಎಲ್ಲ ಪಂಥಗಳಲ್ಲೂ ಇರುವ ಅರಮನೆ-ಗುರುಮನೆಗೆ ಹತ್ತಿರವಾದ ಲೌಕಿಕ ಜಾಣ ಕಾರಣದಿಂದ ಜಾನಪದೀಯವಾದ ತಾಂತ್ರಿಕ ಆಚರಣೆಗೆ ಸೌಮ್ಯ ರೂಪ ಬಂದಿದ್ದಲ್ಲದೆ, ಗ್ರಂಥ ರಚನೆ ಸಂಸ್ಕƒತದÇÉಾಯಿತು.

ತಾಂತ್ರಿಕದ ತಿರುಳನ್ನು ತಮ್ಮದಾಗಿಸಿಕೊಳ್ಳುವ ಮೇಲಾಟದಲ್ಲಿ ತಂತ್ರಕ್ಕೆ ವಾಮಾಚಾರ, ಮಾಟ ಎಂಬ ಸೀಮಿತ ಅರ್ಥ ಬಂದಿದ್ದಲ್ಲದೆ, ತಂತ್ರಗಳು ರಾಕ್ಷಸ ಪ್ರವೃತ್ತಿಯ ಮೂಲಬೇರು ಎಂಬ ಭಾವನೆಯನ್ನು ಉಂಟುಮಾಡುವ ಪ್ರಯತ್ನ ಕಂಡುಬಂದಿತು. ಭಾರತದ ಎಷ್ಟೋ ಸಾಮಾಜಿಕ-ಧಾರ್ಮಿಕ ಸುಧಾರಣಾವಾದಿ ಪಂಥ/ಚಳುವಳಿಗಳ ಮೂಲಬೇರು ಕುಂಡಲಿನೀ ಉದ್ದೀಪನ, ಶಿವಶಕ್ತಿ ಕೃಷ್ಣ-ರಾಧೆ ಮಿಲನದ ತಾಂತ್ರಿಕ ರಹಸ್ಯ ಪಂಥಗಳಲ್ಲಿದೆಯೆನಿಸುತ್ತದೆ.

ಆಧುನಿಕ ಸಂದರ್ಭದಲ್ಲಿ ತಂತ್ರ
ಇಪ್ಪತ್ತನೆಯ ಶತಮಾನದಲ್ಲಿ ಬಂದ ಅರವಿಂದ ಪಂಥ, ಓಶೋ ಪಂಥಗಳೊಂದಿಗೆ ಅನೇಕ ಯೋಗ ಸಾಧನಾ ಮಾರ್ಗಗಳು ಅಂತರಂಗದಲ್ಲಿ ತಾಂತ್ರಿಕ ಕುಂಡಲಿನೀ ಜಾಗರಣೆಯ ಕ್ರಮವನ್ನು ಬೋಧಿಸಿದರೂ ಪ್ರಚಾರ, ಮನ್ನಣೆ ಅಧಿಕಾರ ಮುಂತಾದ ಅಂಶಗಳಿಂದಾಗಿ ಬಹಿರಂಗದಲ್ಲಿ ಭಿನ್ನಭಿನ್ನ ರೂಪಗಳಲ್ಲಿ ರೂಪಾಂತರ ಹೊಂದಿವೆ. ಮಧ್ಯಕಾಲದಂತೆ ಈಗ ತಂತ್ರವು ಅಧಿಕಾರ ಕೇಂದ್ರದಲ್ಲಿ ಬಹಿರಂಗವಾಗಿ ತೋರದಿದ್ದರೂ ಭಾರತದ ಅನೇಕ ರಾಜಕಾರಣಿಗಳ, ಅಧಿಕಾರಸ್ಥರ ಜೀವನದಲ್ಲಿ ತಂತ್ರ ಮತ್ತು ತಾಂತ್ರಿಕರ ಆಗಮನ-ನಿರ್ಗಮನಗಳು ನಡೆದಿವೆ. ಆಧುನಿಕ ಇಂಗ್ಲಿಷ್‌ ಬಲ್ಲ ನಗರ ಪ್ರದೇಶದ ಶಿಕ್ಷಿತರ ಖಾಸಗಿ ಜೀವನದಲ್ಲಿ, ಲೈಂಗಿಕ ಆಧ್ಯಾತ್ಮಿಕ ಅನ್ವೇಷಣೆಯಲ್ಲಿ, ಕೆಲವೊಮ್ಮೆ ಯೋಗದ ಹೆಸರಿನಲ್ಲಿ ಹಲವೊಮ್ಮೆ ಧ್ಯಾನವಾಗಿ, ಮಗದೊಮ್ಮೆ ನಾಮಜಪವಾಗಿ ತಂತ್ರವು ನುಸುಳಿ ಉಳಿದಿವೆ. ಹಸ್ತ ಸ್ಪರ್ಶ, ಶಕ್ತಿಪಾತ, ದೃಷ್ಟಿದೀಕ್ಷೆ, ಮಂತ್ರದ ರಹಸ್ಯೋಪದೇಶ, ಅನುಷ್ಠಾನಗಳಂಥ ಅಂತರಂಗದ ಲೋಕದಂತೆಯೇ, ವೈದಿಕ, ಅದಕ್ಕೆ ಸಮ್ಮತವಾದ ಹೋಮ-ಹವನಗಳಲ್ಲಿ ನಡೆಯುವ ಚಂಡೀ ಪಾರಾಯಣ, ದೇವಿ ಭಾಗವತ ಪಠಣದಲ್ಲಿ ತಂತ್ರದ ಪರಿಸರ ನೆರಳಾಡುತ್ತಿದೆ. ಇಷ್ಟಾದರೂ ವರ್ಣಾಶ್ರಮ, ಮುಟ್ಟು-ತಟ್ಟಿನ ಭೇದವಿಲ್ಲದ, ಹೆಣ್ಣು ಗಂಡಿನ ತಾರತಮ್ಯವಿಲ್ಲದ, ಬಡವರ ಕೈಗೆಟಕುವ ತಂತ್ರ ತನ್ನಷ್ಟಕ್ಕೆ ಉಳಿದುಕೊಂಡಿದೆ. ಪಿಎಚ್‌ಡಿ ಪದವಿಗಳ ಪ್ರಪಂಚವಾಗಲಿ, ಸಂಸ್ಕƒತ-ಕನ್ನಡದ ಅತಿ ಬೌದ್ಧಿಕ ಪರಿಸರವಾಗಲಿ ಇದಕ್ಕೆ ದೂರ.

ಕನ್ನಡ ಸಾಹಿತ್ಯದಲ್ಲಿ ಜೈನ, ವೀರಶೈವ, ವೈದಿಕ ಧಾರೆಗಳಂತೆಯೇ ಸಮಾನಾಂತರವಾದ ಶಾಕ್ತ ಸಂಸ್ಕƒತಿಧಾರೆಯೊಂದಿದೆ. ಅದರ ತುಣುಕು-ಮಿಣುಕುಗಳು ಅಲ್ಲಮ ಮೊದಲಾದವರ ವಚನಗಳಲ್ಲಿ, ಶಾಕ್ತ ರಾಮಾಯಣ, ಭಾಗವತಗಳಲ್ಲಿ, ತಣ್ತೀಜ್ಞಾನಿಗಳ ತಾತ್ವಿಕ ಲಾವಣಿ, ಪದಗಳಲ್ಲಿ ಗುಪ್ತಗಾಮಿನಿಯಾಗಿದೆ. ಈ ವಿಷಯವನ್ನು ಬೆಳೆಸುವುದಕ್ಕೆ ಇಲ್ಲಿ ಆಸ್ಪದ ಇಲ್ಲದಿದ್ದರೂ ಪಂಪನು ಅರಿಕೇಸರಿಯನ್ನು ಉದಾತ್ತ ನಾರಾಯಣ, ಮಹೇಶ್ವರ ಮೊದಲಾಗಿ ವರ್ಣಿಸಿದ ನಂತರದ ಪದ್ಯ ತಂತ್ರದ ಮತ್ತು ಜೈನಪಂಥದ ಹಿನ್ನೆಲೆಯಲ್ಲಿ ಹೊಸ ಕುತೂಹಲವನ್ನು ಹುಟ್ಟಿಸುತ್ತದೆ:

ತಿಸುಳದೊಳುಚ್ಚಳಿಪ್ಪ ಪೊಸ ನೆತ್ತರೆ ಕೆಂದಳಿರಾಗೆ ಕಣ್ಣಗು|
ರ್ವಿಸುವಿನಮೊಕ್ಕು ನೇಲ್ವ ಕರುಳ್ಳೋಳಿಯೇ ಬಾಳ ಮೃಣಾಳಮಾಗೆ ಮಿ|
ಕ್ಕಸುರರ ಮೆಯ್ಯೊಳಾದ ವಿರಹಾಗ್ನಿಯನಾರುಸುತಿಂತೆ ತನ್ನ ಕೂ|
ರಸಿಯೊಳಡುರ್ತು ಕೊಂದಸಿಯಳಿ (ರ್ಕ)ಸಿಯೊಳ್‌ ಪಡೆ ಮೆಚ್ಚೆ ಗಂಡನಾ||
(ವಿಕ್ರಮಾರ್ಜುನವಿಜಯಂ 1.6)
ಹಿಡಿದ ತ್ರಿಶೂಲದ ಉಕ್ಕುವ ಹೊಸ ನೆತ್ತರೆ ಕೆಂದಳಿರಾಗಿ, ಕಣ್ಣಿಗೆ ಭಯಂಕರವಾಗುವಂತೆ (ಅಲ್ಲಿ) ಜೋತಾಡುವ ಕರುಳ ಮಾಲೆಯೆ ಎಳೆಯ ತಾವರೆಯದಂಟಾಗಿ – ಆ ಮೀರಿದ ರಾಕ್ಷಸರ ಮೈಯÇÉಾದ ಬಿರಹತಾಪವನ್ನು ಆರಿಸುತ್ತ-ಅಂತೆಯೇ ಮೇಲೆ ಬಿದ್ದು, ತನ್ನ ಹರಿತವಾದ ಖಡ್ಗದಿಂದ (ಅವರನ್ನೆಲ್ಲ) ಕೊಂದ ಲತಾಂಗಿ ಕಾಳಿಯು ಪಡೆಮೆಚ್ಚ ಗಂಡ (ನೆಂದು ಬಿರುದಾಂಕಿತನಾದ ಅರಿಕೇಸರಿ)ಯ ಖಡ್ಗದಲ್ಲಿ ನೆಲೆಸಿರಲಿ (ಡಾ. ಎಲ್‌. ಬಸವರಾಜ, ಪಂಪನ ಸಮಸ್ತ ಭಾರತ ಕಥಾಮೃತ, 2001 ಪುಟ 14).

ತ್ರಿಶೂಲ, ಕರುಳಮಾಲೆ, ಖಡ್ಗದ ವರ್ಣನೆಯಿರುವ ಕಾಳಿಯ ವರ್ಣನೆ ಕರ್ನಾಟಕದ ಯಾವುದೋ ತಾಂತ್ರಿಕ ಪಂಥದತ್ತ ಬೆರಳು ಮಾಡುವಂತಿದೆ. ಈ ಕುರಿತು ಹೆಚ್ಚಿನ ಸಾಂಸ್ಕƒತಿಕ ಓದಿಗೆ ಅವಕಾಶವಿದೆ.

ಪಂಪನನ್ನು ಒಂದು ರೀತಿ ತನ್ನ ಕಾವ್ಯಗುರುವಾಗಿ ಸ್ವೀಕರಿಸಿದ್ದ ರನ್ನ ಗದಾಯುದ್ಧದಲ್ಲಿ ಸಿಂಹವಾಹನೆಯಾದ ದುರ್ಗಾದೇವಿಯ ವರ್ಣನೆ ಆರಂಭದಲ್ಲಿ ಬಂದಿದೆ:

ಕೂರಸಿ ವೀರಶ್ರೀಯಂ|
ಕೂರದರಂ ಕೊಂದು ಸಮರಜಯಮಂ ಮಾಡಲ್‌|
ಕೂರಸಿಯೊಳ್‌ ನೆಲೆಸುಗೆ ಕಂ|
ಠೀರವವಾಹನೆ ಚಾಳುಕ್ಯಕಂಠೀರವನ||
 ಶೌರ್ಯಲಕ್ಷ್ಮೀಯನ್ನು ಒಲಿಸಿ, ವೈರಿಗಳನ್ನು ಕೊಂದು, ಯುದ್ಧಗಳಲ್ಲಿ ಗೆಲುವನ್ನು ತಂದುಕೊಡುವುದಕ್ಕಾಗಿ ಸಿಂಹವಾಹನೆಯಾದ ದುರ್ಗಾದೇವಿಯು ಚಾಳುಕ್ಯಸಿಂಹನ (ಸತ್ಯಾಶ್ರಯ) ತೀಕ್ಷ್ಣವಾದ ಖಡ್ಗದಲ್ಲಿ ನೆಲೆಸಲಿ.
ಜೈನಧರ್ಮವೂ ಕೂಡ ತನ್ನ ಅಧ್ಯಾತ್ಮಯಾತ್ರೆಯ ವಿವಿಧ ಹಂತಗಳಲ್ಲಿ ತಂತ್ರಗಳ ಅನುಸಂಧಾನ ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ.

– ಜಿ. ಬಿ. ಹರೀಶ

Advertisement

Udayavani is now on Telegram. Click here to join our channel and stay updated with the latest news.

Next