ತಾಂತ್ರಿಕ ನೆಲೆಯಲ್ಲಿ ಪಾರಂಪರಿಕ ಕಲೆಯ ಅಲೆಯಿರುವುದು, ಆ ಕಲೆಯ ಸೆಲೆಯನ್ನು ಬತ್ತದಂತೆ ಉಳಿಸಿಕೊಳ್ಳುವ ತುಡಿತವಿರುವ ಯುವಕರಿರುವುದು ಕಲೆಯ ಉಳಿವಿನ ಬಗ್ಗೆ ಆಶಾಭಾವವನ್ನು ಹೆಚ್ಚಿಸುತ್ತದೆ. ಇಂಥ ಭಾವ ಮತ್ತಷ್ಟು ಬಲವಾಗುವಂತೆ ಮಾಡಿದ್ದು ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವದ ಸಂದರ್ಭದಲ್ಲಿ. ಅಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿ ಪ್ರಸ್ತುತ ಪಡಿಸಿದ “ಶ್ವೇತಕುಮಾರ ಚರಿತ್ರೆ’ ಎಂಬ ತೆಂಕು-ಬಡಗುತಿಟ್ಟುಗಳ ಕೂಡಾಟ. ಸ್ವಯಂ ಕಲಾ ಪೋಷಕರಾದ, ಕಲಾಸಕ್ತರಾದ ಮತ್ತು ಕಲೆಯ ಉಳಿವಿನ ಬಗ್ಗೆ ಪ್ರಾಮಾಣಿಕ ಕಾಳಜಿಯುಳ್ಳ ಉಡುಪಿಯ ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಸ್ಥಾಪಿತವಾದ ಈ ಸಂಸ್ಥೆಯಲ್ಲಿ ಅವರ ಉಪಸ್ಥಿತಿಯಲ್ಲಿ ಪರಂಪರೆಗೆ ಧಕ್ಕೆಯಾಗದಂತೆ, ಯಾವ ಅತಿರೇಕಗಳಿಲ್ಲದೆ, ಕಲೆಯ ಶುದ್ಧ ಅಭಿವ್ಯಕ್ತಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರಯತ್ನಿಸಿದ್ದು ಪ್ರಶಂಸನೀಯ.
ಶ್ವೇತಕುಮಾರನ (ಪೃಥ್ವಿ) ಪುಂಡುವೇಷದ ಬೀಸುನಡೆ, ರುದ್ರಪುರದ ರಾಜಗಾಂಭೀರ್ಯಗಳನ್ನು ಸಮತೋಲನದಲ್ಲಿ ಅಭಿವ್ಯಕ್ತಪಡಿಸಿದ ಪೀಠಿಕೆ ಪ್ರಸಂಗಕ್ಕೊಂದು ಒಳ್ಳೆಯ ಆರಂಭ ನೀಡಿತು. ಸತಿ ಶಿವೆಯ (ಶ್ರೇಯಾ) ಅಭಿನಯ ಪೂರಕವಾಗಿ, ಆದರೆ ಸಮರ್ಥವಾಗಿ ಮೂಡಿ ಬಂತು. ಕರಾಳನೇತ್ರೆಯ ಬಣ್ಣಗಾರಿಕೆ, ಸಾಂಪ್ರದಾಯಿಕ ರಂಗಪ್ರವೇಶ, ಅಬ್ಬರದ ನಡೆ ಪ್ರದರ್ಶನಕ್ಕೆ ಕಳೆ ಹೆಚ್ಚಿಸಿತು. ಶ್ವೇತಕುಮಾರ (ಕಿಶೋರ್ ಕುಮಾರ್ ಆರೂರ್) ಮತ್ತು ತ್ರಿಲೋಕ ಸುಂದರಿಯರ (ಕಾರ್ತಿಕ್ ಕುಮಾರ್) ಪ್ರಕರಣ ಪ್ರದರ್ಶನದ ಮುಖ್ಯ ಭಾಗವಾಗಿ ವೈವಿಧ್ಯಮಯ ನಾಟ್ಯ, ಲಾಸ್ಯಪೂರ್ಣ ಅಭಿನಯ, ಹೃದ್ಯ ಸಂಭಾಷಣೆಗಳಿಂದ ಅಚ್ಚುಕಟ್ಟಾಗಿ ಮೂಡಿಬಂತು.
ವಿಲಂಬಿತ ಗತಿಯ ಶೃಂಗಾರ ಲೋಕದಲ್ಲಿದ್ದ ಪ್ರೇಕ್ಷಕರನ್ನು ಮತ್ತೆ ದ್ರುತಗತಿಯ ಅದ್ಭುತ ಲೋಕಕ್ಕೆ ಸೆಳೆದದ್ದು ದುರ್ಜಯನ (ವೇಣುಗೋಪಾಲ ರಾವ್) ಮತ್ತು ಲೋಹಿತನೇತ್ರರ ಪ್ರವೇಶ. ರಾಕ್ಷಸಸಹಜ ಕ್ರೌರ್ಯ, ಗಂಭೀರ ನಡೆ, ತೂಕದ ಮಾತುಗಳಿಂದ ಪಾತ್ರಕ್ಕೆ ತಕ್ಕ ನಿರ್ವಹಣೆ ಇವರದಾಯಿತು. ಲೋಹಿತನೇತ್ರ (ವಾಸುದೇವ) ಮತ್ತು ಸಿತಕೇತರ (ಪ್ರದೀಪ್ ಆಚಾರ್) ನಡುವಿನ ಯುದ್ಧದ ಸಂದರ್ಭವು ಎರಡೂ ತಿಟ್ಟುಗಳಲ್ಲಿ ವೀರರಸದ ಅಭಿವ್ಯಕ್ತಿಗಿರುವ ಎಲ್ಲ ಅವಕಾಶಗಳ ಅನಾವರಣಕ್ಕೆ ಸಾಕ್ಷಿಯಾಯಿತು. ಸಾಂಪ್ರದಾಯಿಕವಾದ ತೆರೆಯ ಒಡ್ಡೋಲಗದೊಂದಿಗೆ ಕೇಶವಾರಿ ತಟ್ಟಿಕಿರೀಟದಲ್ಲಿ ವಿಜೃಂಭಿಸಿದ ಯಮನ (ಅನಂತರಾಜ್) ನಿರ್ವಹಣೆ ಪಾತ್ರ ಗಾಂಭೀರ್ಯ, ಧರ್ಮನಿಷ್ಠೆ, ಕರ್ತವ್ಯ ಪ್ರಜ್ಞೆಗಳ ಸಮಪಾಕವಾಗಿ ಮೂಡಿಬಂತು. ವರ್ತಮಾನದ ಘಟನೆಗಳನ್ನು, ಪುರಾಣದ ಔಚಿತ್ಯ ಕೆಡದಂತೆ ಪ್ರೇತಗಳ (ಶರಣ್ಯಾ) ವಿಚಾರಣೆಯ ಸಂದರ್ಭದಲ್ಲಿ ವಿವರಿಸಿ, ಎಲ್ಲೂ ಅತಿರೇಕವಾಗದಂತೆ ಪ್ರದರ್ಶನದಲ್ಲಿ ಹಾಸ್ಯರಸವನ್ನು ಚಿತ್ರಗುಪ್ತ (ಅಶ್ವಿತ್ ಸಾಮಾನಿ) ಅತ್ಯಂತ ಮನರಂಜನೀಯವಾಗಿ ಹರಿಸಿದರು. ರಾಜನಾದರೂ ವಿಷಯಲಾಲಸೆಗೊಳಗಾಗಿ ದಾರಿತಪ್ಪಿದ ಶ್ವೇತಕುಮಾರನ ಪ್ರೇತವಾಗಿ (ರಂಜನ್) ಲೋಲುಪನಿಂದ, ಶಿವಭಕ್ತನಾಗಿ ಮಾರ್ಪಾಡುಗೊಳ್ಳುವವರೆಗಿನ ಅಭಿನಯ ಸನ್ನಿವೇಶಕ್ಕೆ ತಕ್ಕಂತೆ ಮನೋಜ್ಞವಾಗಿತ್ತು. ಶ್ವೇತಕುಮಾರನ ಮನಃಪರಿವರ್ತನೆಗೊಳಿಸುಸುವ ರಂಭೆಯ (ಕಾವ್ಯಶ್ರೀ) ಪಾತ್ರಚಿತ್ರಣವೂ ಸಂತುಲಿತವಾಗಿ ಮೂಡಿಬಂತು. ನಿಯಮಿತ ಹೆಜ್ಜೆಗಾರಿಕೆ, ಪಾತ್ರೋಚಿತ ಮಾತುಗಳು ಈಶ್ವರನ (ಶಿಶಿರ್ ಭಟ್) ನಿರ್ವಹಣೆಗೆ ಪೂರಕವಾದರೆ, ವೀರಭದ್ರ (ಅಂಬರೀಷ್), ನಂದಿ (ಶ್ರೀನಿವಾಸ ಭಟ್), ಕಾಲಭೈರವ (ಸನತ್), ಭೃಂಗಿ (ನಿರಂಜನ್) ಮತ್ತು ಭುಕುಟಿ (ಜಸ್ಮಿತಾ) ಇವರ ಅಬ್ಬರದ ನಡೆಗಳು ಪ್ರದರ್ಶನದ ದ್ರುತಗತಿಯ ಮುಕ್ತಾಯಕ್ಕೆ ಸಹಕರಿಸಿದವು.
ಸಂಸ್ಥೆಯ ಪ್ರಾಕ್ತನ ವಿದ್ಯಾರ್ಥಿಯಾಗಿರುವ ಪ್ರಜ್ವಲ್ ಕುಮಾರ್ ಅವರ ಸಮರ್ಥ ನಿರ್ದೇಶನದೊಂದಿಗೆ ಮುಮ್ಮೇಳದ ಯಶಸ್ವಿ ನಿರ್ವಹಣೆಗೆ, ಕಲಾವಿದರ ಮಿತಿ- ಮನೋಧರ್ಮಗಳಿಗೆ ಪೂರಕವಾಗಿ ಸಹಕರಿಸಿದವರು ಹಿಮ್ಮೇಳದವರು. ಚಂದ್ರಕಾಂತ್ ರಾವ್ ಮೂಡುಬೆಳ್ಳೆ (ಬಡಗು) ಮತ್ತು ಮಧೂರು ವಾಸುದೇವ ಕಲ್ಲೂರಾಯ (ತೆಂಕು) ಭಾಗವತರಾಗಿ ವಿವಿಧ ರಸಗಳ ಅಭಿವ್ಯಕ್ತಿಗೆ ಕಾರಣರಾದರು. ಚೆಂಡೆ ಮದ್ದಳೆಗಳಲ್ಲಿ ಗಣೇಶ್ ಶೆಣೈ, ರತ್ನಾಕರ ಆಚಾರ್ (ಬಡಗು), ರಾಜೇಶ್ ಕಟೀಲ್, ರಮೇಶ ರಾವ್ ಮತ್ತು ವಿಕಾಸ್ ರಾವ್ (ತೆಂಕು) ಪದ್ಯ ನಾಟ್ಯಗಳಿಗೆ ಒಳ್ಳೆಯ ಸಾಥ್ ನೀಡಿದರು. ಚಕ್ರತಾಳದಲ್ಲಿ ಶ್ರೀಕರ ಆಚಾರ್ಯ ಸಹರಿಸಿದರು. ಪೂಜ್ಯ ಶ್ರೀಪಾದರ ದಿವ್ಯ ಉಪಸ್ಥಿತಿ, ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್, ಪ್ರಾಂಶುಪಾಲ ಪ್ರೊ| ತಿರುಮಲೇಶ್ವರ ಭಟ್ ಇವರ ಪ್ರೋತ್ಸಾಹ ಕಲಾವಿದರ ಮನೋಸ್ಥೈರ್ಯ ಮತ್ತು ಆತ್ಮವಿಶ್ವಾಸದ ವೃದ್ಧಿ ಉಂಟುಮಾಡಿ ಪ್ರದರ್ಶನದ ಯಶಸ್ಸಿಗೆ ಕಾರಣವಾಯಿತು. ಸಹೃದಯಿ, ಪ್ರತಿಕ್ರಿಯಶೀಲ, ಸುಸಂಸ್ಕೃತ ಪ್ರೇಕ್ಷಕರು ಬಹುಸಂಖ್ಯೆಯಲ್ಲಿ ಹಾಜರಿದ್ದುದು ಈ ಪ್ರದರ್ಶನದ ವಿಶೇಷವಾಗಿತ್ತು.
ಸಂಹಿತಾ