Advertisement

ಅಂದು Chandrayaan-3 ಯಶಸ್ಸಿಗೆ ಶ್ರಮಿಸಿದಾತ ಇಂದು ರಸ್ತೆಬದಿಯಲ್ಲಿ ಇಡ್ಲಿ ಮಾರುವ ಸ್ಥಿತಿಗೆ

03:37 PM Sep 19, 2023 | Team Udayavani |

ಜಾರ್ಖಂಡ್:  ಇಸ್ರೋದ ಮಹತ್ತರ ಚಂದ್ರಯಾನ-3 ಯಶಸ್ಸು ಭಾರತಕ್ಕೆ ಐತಿಹಾಸಿಕ ಮನ್ನಣೆಯನ್ನು ತಂದುಕೊಟ್ಟಿದೆ. ಭಾರತದ ಈ ಸಾಧನೆಯನ್ನು ಬಾಹ್ಯಾಕಾಶ ಲೋಕ ಕೊಂಡಾಡಿದೆ. ಆದರೆ ಚಂದ್ರಯಾನ -3 ಯಶಸ್ಸಿನಲ್ಲಿ ತನ್ನ ಸೇವೆಯನ್ನು ನೀಡಿದ ವ್ಯಕ್ತಿಯೊಬ್ಬನ ಬದುಕು ಇಂದು ರಸ್ತೆಬದಿಯಲ್ಲಿ ಇಡ್ಲಿ ಮಾರುವಂಥ ಪರಿಸ್ಥಿತಿಗೆ ಬಂದು ನಿಂತಿದೆ.

Advertisement

ಇಸ್ರೋ ಚಂದ್ರಯಾನ-3 ಯಶಸ್ಸಿನಲ್ಲಿ  ತಂತ್ರಜ್ಞನಾಗಿ ಕೆಲಸ ಮಾಡಿದ್ದ ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ದೀಪಕ್ ಕುಮಾರ್ ಉಪ್ರಾರಿಯಾ ಅವರಿಂದು ಜೀವನ ಸಾಗಿಸಲು ರಸ್ತೆಬದಿಯಲ್ಲಿ ಇಡ್ಲಿ ಮಾರುವ ಸ್ಥಿತಿಗೆ ತಲುಪಿದ್ದಾರೆ.

ಯಾರು ಈ ದೀಪಕ್ ಕುಮಾರ್?:  ಉಪ್ರಾರಿಯಾ ಅವರು ಮಧ್ಯಪ್ರದೇಶದ ಹರ್ದಾ ಜಿಲ್ಲೆಯವರು. 2012ರಲ್ಲಿ ಖಾಸಗಿ ಕಂಪನಿಯೊಂದರ ಕೆಲಸ ಬಿಟ್ಟು ₹ 8,000 ಸಂಬಳಕ್ಕೆ ಎಚ್‌ಇಸಿ(ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್) ಸೇರಿದ್ದರು. ಸರ್ಕಾರಿ ಕಂಪನಿಯಾದ ಕಾರಣ ಇಲ್ಲಿ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಎನ್ನುವ ಕಾರಣಕ್ಕೆ ಈ ಕಂಪೆನಿಗೆ ಅವರು ಸೇರಿದ್ದರು.

ಸರ್ಕಾರಿ ಕಂಪೆನಿಯಾದ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ಇಸ್ರೋದ ಚಂದ್ರಯಾನ-3 ಯ  ಉಡಾವಣಾ ಪ್ಯಾಡ್ ನಿರ್ಮಿಸಿದೆ. ಈ ಲಾಂಚ್‌ ಪ್ಯಾಡ್‌ ನಿರ್ಮಿಸಲು ಸುಮಾರು 2,800 ಟೆಕ್ನೀಶಿಯನ್‌ ಗಳು ಹಗಲು ಇರುಳು ಶ್ರಮವಹಿಸಿದ್ದಾರೆ. ಇದರಲ್ಲಿ ದೀಪಕ್ ಕುಮಾರ್ ಅವರು ಕೂಡ ಒಬ್ಬರಾಗಿದ್ದರು.

ಭಾರತದ ಚಂದ್ರಯಾನ-3 ಆಗಸ್ಟ್‌ನಲ್ಲಿ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಲ್ಯಾಂಡ್‌ ಆಗುವ ಮೂಲಕ ಯಶಸ್ಸಾಗಿತ್ತು. ಈ ಸಾಧನೆಯನ್ನು ಮಾಡಿದ ವಿಶ್ವದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ. ಇದರ ಬಗ್ಗೆ ಪ್ರಧಾನಿ ಮೋದಿ ಅವರು ಹರ್ಷ ವ್ಯಕ್ತಪಡಿಸಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದರು. ಆದರೆ ಇತರ ಕಡೆ ಎಚ್‌ಇಸಿಯ ನೌಕರರು ತಮ್ಮ 18 ತಿಂಗಳ ಬಾಕಿ ವೇತನಕ್ಕಾಗಿ ಪ್ರತಿಭಟಿಸುತ್ತಿದ್ದರು.

Advertisement

ಉಪ್ರಾರಿಯಾ ಅವರು ರಾಂಚಿಯ ಧುರ್ವಾ ಪ್ರದೇಶದಲ್ಲಿರುವ ಹಳೆಯ ವಿಧಾನ ಸಭೆ ಎದುರು ಇಡ್ಲಿ ಅಂಗಡಿಯನ್ನು ತೆರೆದಿದ್ದಾರೆ.

ಈ ಬಗ್ಗೆ ಮಾತನಾಡುವ ಉಪ್ರಾರಿಯಾ “ಕಳೆದ ಕೆಲವು ದಿನಗಳಿಂದ ಇಡ್ಲಿಗಳನ್ನು ಮಾರುತ್ತಿದ್ದೇನೆ. ನಾನು ಆಫೀಸ್‌ ಕೆಲಸದೊಂದಿಗೆ ಈ ಕೆಲಸವನ್ನೂ ಮಾಡುತ್ತಿದ್ದೇನೆ. ಬೆಳಗ್ಗೆ ಇಡ್ಲಿ ಮಾರುತ್ತೇನೆ. ಮಧ್ಯಾಹ್ನ ಆಫೀಸ್‌ ಕೆಲಸಕ್ಕೆ ಹೋಗುತ್ತೇನೆ. ಸಂಜೆ ಮನೆಗೆ ಹೋಗುವ ಮುನ್ನ ಮತ್ತೆ ಇಡ್ಲಿ ಮಾರುತ್ತೇನೆ”ಎಂದು ಹೇಳುತ್ತಾರೆ.

“ಮೊದಲಿಗೆ ನಾನು ಕ್ರೆಡಿಟ್ ಕಾರ್ಡ್‌ನೊಂದಿಗೆ ನನ್ನ ಮನೆಯನ್ನು ನಿರ್ವಹಿಸಿದೆ. ಆ ಬಳಿಕ ಸಂಬಂಧಿಕರಿಂದ ಹಣ ಪಡೆದು ಮನೆ ನಡೆಸಲಾರಂಭಿಸಿದೆ. ‘ಇಲ್ಲಿಯವರೆಗೆ ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ. ಯಾರಿಗೂ ಹಣ ಹಿಂತಿರುಗಿಸದ ಕಾರಣ ಈಗ ಜನ ಸಾಲ ಕೊಡುವುದನ್ನು ನಿಲ್ಲಿಸಿದ್ದಾರೆ. ನಂತರ ಪತ್ನಿಯ ಒಡವೆಗಳನ್ನು ಅಡವಿಟ್ಟು ಕೆಲ ದಿನ ಮನೆ ನಡೆಸಿದೆ” ಎಂದರು.

“ನನ್ನ ಹೆಂಡತಿ ಒಳ್ಳೆಯ ಇಡ್ಲಿಗಳನ್ನು ಮಾಡುತ್ತಾಳೆ. ಅವುಗಳನ್ನು ಮಾರಾಟ ಮಾಡುವುದರಿಂದ ನನಗೆ ಪ್ರತಿದಿನ 300 ರಿಂದ 400 ರೂಪಾಯಿಗಳು ಸಿಗುತ್ತವೆ. ನಾನು 50-100 ರೂಪಾಯಿ ಲಾಭ ಗಳಿಸುತ್ತೇನೆ. ಈ ಹಣದಲ್ಲಿ ನಾನು ನನ್ನ ಮನೆಯನ್ನು ನಡೆಸುತ್ತಿದ್ದೇನೆ” ಎಂದು ಅವರು ಹೇಳಿದರು.

“ನನಗೆ ಇಬ್ಬರು ಹೆಣ್ಣುಮಕ್ಕಳು. ಇಬ್ಬರೂ ಶಾಲೆಗೆ ಹೋಗುತ್ತಾರೆ. ಈ ವರ್ಷ ನಾನು ಅವರ ಶಾಲಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಶಾಲೆಯಿಂದ ಪ್ರತಿದಿನ ನೋಟಿಸ್ ಕಳುಹಿಸಲಾಗುತ್ತಿದೆ. ತರಗತಿಯಲ್ಲಿಯೂ ಸಹ ಶಿಕ್ಷಕರು ಎಚ್‌ಇಸಿಯಯಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳು ಯಾರು ಎಂದು ಕೇಳಿ, ಎದ್ದು ನಿಲ್ಲಲು” ಹೇಳುತ್ತಾರೆ ಎಂದರು.

ಇದರಿಂದ ನನ್ನ ಮಕ್ಕಳು ಅವಮಾನಕ್ಕೆ ಒಳಗಾಗಿದ್ದಾರೆ. ನನ್ನ ಹೆಣ್ಣುಮಕ್ಕಳು ಅಳುತ್ತಾ ಮನೆಗೆ ಬರುತ್ತಾರೆ. ಅವರು ಅಳುವುದನ್ನು ನೋಡಿ ನನ್ನ ಹೃದಯ ಒಡೆಯುತ್ತದೆ. ಆದರೆ ನಾನು ಅವರ ಮುಂದೆ ಅಳುವುದಿಲ್ಲ” ಉಪ್ರಾರಿಯಾ ಹೇಳುತ್ತಾರೆ.

ಈ ಪರಿಸ್ಥಿತಿ ದೀಪಕ್ ಉಪರಾರಿಯಾಗೆ ಮಾತ್ರವಲ್ಲ. ಅವರಂತೆಯೇ, ಎಚ್‌ ಇಸಿಯಲ್ಲಿ ಕೆಲಸ ಮಾಡಿದ ಅನೇಕರು ಆಗಿದೆ ಎಂದು ಬಿಬಿಸಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next