Advertisement

ವಿದ್ಯುತ್‌ ಗ್ರಿಡ್‌ನ‌ಲ್ಲಿ ತಾಂತ್ರಿಕ ಸಮಸ್ಯೆ : ಐದು ಜಿಲ್ಲೆಗಳಲ್ಲಿ ವಿದ್ಯುತ್‌ ವ್ಯತ್ಯಯ

09:53 AM Mar 03, 2020 | sudhir |

ಉಡುಪಿ: ವಿದ್ಯುತ್‌ ಗ್ರಿಡ್‌ನ‌ಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ರವಿವಾರ ಅವಿಭಜಿತ ದ.ಕ.ಜಿಲ್ಲೆ ಸಹಿತ 5 ಜಿಲ್ಲೆಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಯಿತು.

Advertisement

ಹಾಸನದಲ್ಲಿರುವ 400 ಕೆ.ವಿ.ವಿದ್ಯುತ್‌ನಲ್ಲಿ ಮಧ್ಯಾಹ್ನದ ವೇಳೆಗೆ ಸಮಸ್ಯೆ ಕಾಣಿಸಿಕೊಂಡಿತು. ಪರಿಣಾಮ ಅಪರಾಹ್ನ 2ಗಂಟೆಯಿಂದ ಉಡುಪಿ, ದ.ಕ., ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿದ್ಯುತ್‌ ಇರಲಿಲ್ಲ.

ಸಮಸ್ಯೆಯ ಬಗ್ಗೆ ಬೆಂಗಳೂರಿನ ಡಿಸ್ಪ್ಯಾಚ್‌ ಸೆಂಟರ್‌ನಿಂದ ಮಾಹಿತಿ ಲಭಿಸಿತ್ತು. ಕೂಡಲೇ ಕೆಪಿಟಿಸಿಎಲ್‌ನವರು ದುರಸ್ತಿ ಆರಂಭಿಸಿದರು. ವಿದ್ಯುತ್‌ ವ್ಯತ್ಯಯದ ಬಿಸಿ ನಂದಿಕೂರಿನ ಯುಪಿಸಿಎಲ್‌ಗ‌ೂ ತಟ್ಟಿತು. 3 ಗಂಟೆಯ ಅನಂತರ ಹಂತ-ಹಂತವಾಗಿ ಚಾರ್ಜ್‌ ಪ್ರಕ್ರಿಯೆಗಳು ನಡೆದಂತೆ ವಿದ್ಯುತ್‌ ಸರಬರಾಜು ನಡೆಯಿತು. ಕಾರ್ಕಳಕ್ಕೆ 3 ಗಂಟೆಗೆ, ಕುಂದಾಪುರ 4, ದ.ಕ.ಕ್ಕೆ 4.30, ಉಡುಪಿ ಜಿಲ್ಲೆಗೆ 5.30ರ ವೇಳೆಗೆ ವಿದ್ಯುತ್‌ ಪೂರೈಕೆಯಾಯಿತು.

ಗ್ರಾಹಕರಿಂದ ಹಿಡಿಶಾಪ
ರವಿವಾರ ರಜಾದಿನವಾದ್ದರಿಂದ ಹೆಚ್ಚಿನವರು ವಿದ್ಯುತ್‌ ವ್ಯತ್ಯಯ ದಿಂದಾಗಿ ತೊಂದರೆ ಗೊಳಗಾದರು. ಸ್ಥಳೀಯ ವಿದ್ಯುತ್‌ ಸರಬರಾಜು ಕೇಂದ್ರಗಳಿಗೆ ಕರೆ ಮಾಡಿದರೂ ಫೋನ್‌ ನಾಟ್‌ ರೀಚೆಬಲ್‌ ಎಂದು ಬರುತ್ತಿತ್ತು. ಪ್ರತೀ ಬಾರಿ ವಿದ್ಯುತ್‌ ವ್ಯತ್ಯಯವಾ ದಾಗಲೂ ಮೆಸ್ಕಾಂ ಸಿಬಂದಿ ಕರೆ ಸ್ವೀಕರಿಸುವುದಿಲ್ಲ ಎಂಬ ದೂರುಗಳು ಈ ಹಿಂದೆಯೂ ಇತ್ತು. ಇದು ರವಿವಾರ ಹೆಚ್ಚಿನವರ ಅನುಭವಕ್ಕೂ ಬಂತು.

ಕೆಲವೆಡೆ ಮತ್ತಷ್ಟು ವಿಳಂಬ
ದ.ಕ.ಜಿಲ್ಲೆಗೆ 4.30 ಹಾಗೂ ಉಡುಪಿ ಜಿಲ್ಲೆಗೆ 5.30ಕ್ಕೆ ವಿದ್ಯುತ್‌ ಸರಬರಾಜು ಮಾಡಲಾಯಿತಾದರೂ ಸ್ಥಳೀಯ ಮೆಸ್ಕಾಂ ಕೇಂದ್ರಗಳ ದುರಸ್ತಿ ಕಾರ್ಯಗಳಿದ್ದ ಕಾರಣ ಕೆಲವೆಡೆ ವಿಳಂಬವಾಗಿತ್ತು. ಐದು ಜಿಲ್ಲೆಗಳ ಬಹುತೇಕ ಕಡೆ ಸಂಜೆ 6.30ರ ಒಳಗೆ ವಿದ್ಯುತ್‌ ಸರಬರಾಜು ಎಂದಿನಂತೆ ನಡೆಯಿತು.

Advertisement

ತಾಂತ್ರಿಕ ತೊಂದರೆ
ಹಾಸನದ ಬಳಿ 400 ಕೆ.ವಿ.ಗ್ರಿಡ್‌ನ‌ಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಪರಿಣಾಮ 5 ಜಿಲ್ಲೆಗಳಲ್ಲಿ ರವಿವಾರ ವಿದ್ಯುತ್‌ ವ್ಯತ್ಯಯುಂಟಾಗಿದೆ. ಕೂಡಲೇ ಇದರ ನಿರ್ವಹಣೆ ನೋಡಿಕೊಳ್ಳುವವರು ಬಂದು ದುರಸ್ತಿಕಾರ್ಯ ನಡೆಸಿಕೊಟ್ಟಿದ್ದಾರೆ.
– ನರಸಿಂಹ ಪಂಡಿತ್‌, ಮೆಸ್ಕಾಂ ಸೂಪರಿಟೆಂಡೆಂಟ್‌ ಎಂಜಿನಿಯರ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next