Advertisement

Bengaluru: ಆಶಾ ಸಾಫ್ಟ್ ನಲ್ಲಿ ತಾಂತ್ರಿಕ ಸಮಸ್ಯೆ: ಕಾರ್ಯಕರ್ತೆಯರ ಕೈಸೇರದ ಪ್ರೋತ್ಸಾಹಧನ

03:49 PM Oct 31, 2024 | Team Udayavani |

ಬೆಂಗಳೂರು: ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ನೀಡುವ ಪ್ರೋತ್ಸಾಹಧನವನ್ನು ಒಮ್ಮೆಲೇ ನೇರ ಖಾತೆಗೆ ವರ್ಗಾಯಿಸಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಾರಂಭಿಸಿರುವ “ಆಶಾ ಸಾಫ್ಟ್’ ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಕಾರ್ಯಕ್ಷಮತೆಯ ಆಧಾರದ ಮೇಲೆ ನೀಡುವ ಪ್ರೋತ್ಸಾಹಧನ ಸರಿಯಾದ ಸಮಯಕ್ಕೆ ಕೈಸೇರದಂತಾಗಿದೆ.

Advertisement

ಆಶಾ ಕಾರ್ಯಕರ್ತೆಯರಿಗೆ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಕೇಂದ್ರ ಸರ್ಕಾರದಿಂದ ನೀಡುವ ಪ್ರೋತ್ಸಾಹಧನವನ್ನು ನೇರ ಖಾತೆಗೆ ಜಮಾ ಮಾಡಬೇಕೆಂಬ ಉದ್ದೇಶದಿಂದ ಪ್ರಾರಂಭಿಸಿದ ಆನ್‌ಲೈನ್‌ ಪೇಮೆಂಟ್‌ ವ್ಯವಸ್ಥೆ “ಆಶಾ ಸಾಫ್ಟ್’ ಅಪ್ಲಿಕೇಶನ್‌ನಲ್ಲಿ ಕಾರ್ಯಕರ್ತೆಯರು ಮಾಡುವ ಕೆಲಸಗಳನ್ನು ಪಿಎಚ್‌ಸಿಒ (ಪ್ರಾಥಮಿಕ ಆರೋಗ್ಯ ಸಮುದಾಯ ಅಧಿಕಾರಿ) ಅಪ್‌ಡೇಟ್‌ ಮಾಡಬೇಕು. ಆದರೆ, ಆರೋಗ್ಯ ಇಲಾಖೆಯಲ್ಲಿ ಸುಮಾರು ಶೇ.45 ಪಿಎಚ್‌ಸಿ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ.

ಇದರಿಂದಾಗಿ ಕೆಲಕಡೆ “ಆಶಾ ಸಾಫ್ಟ್’ನಲ್ಲಿ ಅಪ್‌ಡೇಟ್‌ ಮಾಡುವವರೇ ಇಲ್ಲದಂತಾಗಿದೆ. ಇನ್ನೂ ಕೆಲ ಕಡೆ ನೆಟ್‌ವರ್ಕ್‌ ಸಮಸ್ಯೆ, ಕೆಲಸದ ಒತ್ತಡ ಹೀಗೆ ನಾನಾ ಕಾರಣಗಳಿಂದ ಪಿಎಚ್‌ಸಿ ಅಧಿಕಾರಿಗಳು ಕಾರ್ಯಕರ್ತೆಯರ ಕಾರ್ಯಕ್ಷಮತೆಯನ್ನು ಅಪ್‌ಡೇಟ್‌ ಮಾಡುವುದನ್ನು ತಡಮಾಡುತ್ತಿರುವುದು ಕಂಡುಬರುತ್ತಿದೆ. ಇದರಿಂದಾಗಿ ರಾಜ್ಯದಲ್ಲಿರುವ ಸರಿ ಸುಮಾರು 42,000 ಆಶಾ ಕಾರ್ಯಕರ್ತೆಯರಿಗೂ, ಅವರು ಕೆಲಸ ಮಾಡುವ ಕಾರ್ಯಕ್ಕೆ ಶೇ.100ರಷ್ಟು ಹಣ ಸಿಗುತ್ತಿಲ್ಲ. ಆದ್ದರಿಂದ “ಆಶಾ ಸಾಫ್ಟ್’ ಅಪ್ಲಿಕೇಷನ್‌ನಿಂದ ಡೀಲಿಂಕ್‌ ಮಾಡಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ”ಉದಯವಾಣಿ’ಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ, ಪೌಷ್ಟಿಕ ದಿನಾಚರಣೆಗಳು, ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡುವುದು, ಆರೋಗ್ಯ ದಾಖಲೆ ನಿರ್ವಹಣೆ, ಹೆರಿಗೆ ಸಿದ್ಧತೆ, ಗರ್ಭನಿರೋಧಕದ ಮಹತ್ವ, ಜನನ ಮತ್ತು ಮರಣದ ಮಾಹಿತಿ ಸಂಗ್ರಹ, ವಿವಿಧ ಖಾಯಿಲೆಗಳ ಜಾಗೃತಿ, ಮಕ್ಕಳಿಗೆ ಲಸಿಕೆ ಹಾಕುವುದು, ಸ್ತನ್ಯಪಾನದ ಪ್ರಾಮುಖ್ಯತೆ ತಿಳಿಸುವುದು, ಹೀಗೆ ಹತ್ತಾರು ಕಾರ್ಯಗಳನ್ನು ನಿರ್ವಹಿಸುತ್ತಾರೆ. ಹೀಗೆ ಶ್ರಮಿಸುವ ಆಶಾ ಸಿಬ್ಬಂದಿಗೆ ಗೌರವಧನ ಹೆಚ್ಚಳ, ಇಡುಗಂಟು, ಕಾಯಂಗೊಳಿಸುವುದು, ವಿಮೆ ಸೌಲಭ್ಯಗಳಿಲ್ಲದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರಿಗೆ ಇರುವ ಸವಾಲುಗಳ ಬಗ್ಗೆ ಹಾಗೂ ಅಗತ್ಯ ಸೌಲಭ್ಯಗಳ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮನವಿಗೆ ಸ್ಪಂದಿಸ ದಿ ದ್ದರೆ ನವೆಂಬರ್‌ 2ನೇವಾರದ ನಂತರ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

“ಆಶಾ ಸಾಫ್ಟ್’ ಪರಿಚಯಿಸಿ 8 ವರ್ಷಗಳು ಕಳೆದರೂ, ಇವತ್ತಿಗೂ ನಾನಾ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುತ್ತಲೇ ಇದ್ದೇವೆ. ನಾವು ದುಡಿದಿರುವ ಹಣ ನಮಗೆ ಸಿಗುತ್ತಿಲ್ಲ. ಮೋಸ ಆಗುತ್ತಿದೆ. ಆದ್ದರಿಂದ ನಮಗೆ ಕನಿಷ್ಠ 15 ಸಾವಿರ ರೂ.ನಷ್ಟು ನಿಗದಿಪಡಿಸಬೇಕು. ಆಶಾ ಕಾರ್ಯಕರ್ತೆ ಯರ ಬೇಡಿಕೆಗಳ ಕುರಿತು ಇದುವರೆಗೆ ಸುಮಾರು 12 ಸಭೆಗಳು ಆಗಿವೆ. ಆದರೂ ಪರಿಹಾರ ದೊರೆತಿಲ್ಲ. -ಡಿ.ನಾಗಲಕ್ಷ್ಮಿ, ರಾಜ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ  

Advertisement

-ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next