ಮಂಗಳೂರು: ಕುವೈಟ್‌ನಲ್ಲಿ ಉದ್ಯೋಗ ವಂಚನೆಗೊಳಗಾಗಿ ಅತಂತ್ರರಾಗಿರುವ 77 ಮಂದಿಯಲ್ಲಿ ಜು. 15ರಂದು ಭಾರತಕ್ಕೆ ಮರಳಬೇಕಾಗಿದ್ದ ಆಂಧ್ರಪ್ರದೇಶದ 15 ಮಂದಿಯ ಪ್ರಯಾಣಕ್ಕೆ ತಾಂತ್ರಿಕ ಕಾರಣ ಗಳಿಂದ ತಡೆಯಾಗಿದೆ. ಇದರಿಂದಾಗಿ ಜು. 17ರಂದು ನಿಗದಿಯಾಗಿದ್ದ ಮಂಗಳೂರಿನ 19 ಮಂದಿಯ ಪ್ರಯಾಣವೂ ಅತಂತ್ರವಾಗಿದೆ.
ಆಂಧ್ರದ 15 ಮಂದಿಯ ಟಿಕೆಟ್‌ನ್ನು ಅನಿವಾಸಿ ಉದ್ಯಮಿ, ಆಂಧ್ರದ ಆಕಾಶ್ ಪನ್ವಾರ್ ಪ್ರಾಯೋಜಿಸಿದ್ದರು. ಅವರು ಜು. 15ರಂದು ಭಾರತಕ್ಕೆ ಹೊರಡಬೇಕಾಗಿತ್ತು. ಇವರು ಶಾಶ್ವತ ವೀಸಾ ರದ್ದುಗೊಂಡು ತಾತ್ಕಾಲಿಕ ವೀಸಾದಲ್ಲಿ ಭಾರತಕ್ಕೆ ಬರಬೇಕಾಗಿತ್ತು. ಆದರೆ ತಾತ್ಕಾಲಿಕ ವೀಸಾ ಲಭ್ಯವಾಗದ ಕಾರಣ ತಡೆ ಉಂಟಾಗಿದೆ.
ಇದೀಗ ಆಗಿರುವ ಬೆಳವಣಿಗೆಗಳಿಂದ ಜು. 17ಕ್ಕೆ ಭಾರತಕ್ಕೆ ಹೊರಡಬೇಕಾಗಿದ್ದ 17 ಮಂದಿ ಮಂಗಳೂರಿನ ಉದ್ಯೋಗಿಗಳ ಸ್ಥಿತಿ ಅತಂತ್ರಕ್ಕೆ ಸಿಲುಕಿದೆ. ಈ ಬಗ್ಗೆ ಈಗಾಗಲೇ ಕುವೈಟ್‌ನ ಭಾರತೀಯ ದೂತಾವಾಸ ಅಧಿಕಾರಿಗಳ ಜತೆ ತಾನು ಮಾತುಕತೆ ನಡೆಸಿದ್ದು ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸಿದ್ದೇನೆ. ಎಂದು ಕುವೈಟ್‌ನಲ್ಲಿ ನೆಲೆಸಿರುವ ಮೋಹನ್‌ದಾಸ್ ಕಾಮತ್ ಉದಯವಾಣಿಗೆ ತಿಳಿಸಿದ್ದಾರೆ.
ಭಾರತೀಯ ಸಂತ್ರಸ್ತರ ಪೈಕಿ ಮಂಜೇಶ್ವರ ಅಭಿಷೇಕ್ ಹಾಗೂ ಉತ್ತರ ಪ್ರದೇಶದ ಪಂಕಜ್ ಕುಮಾರ್ ಅವರು ಭಾರತಕ್ಕೆ ರವಿವಾರ ಮುಂಬಯಿ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಅಭಿಷೇಕ್ ಅವರು ಮುಂಬಯಿಯಿಂದ ಬಸ್‌ಮೂಲಕ ಮಂಗಳವಾರ ಆಗಮಿಸಿದ್ದು ಮಂಜೇಶ್ವರಕ್ಕೆ ತಲುಪಿದ್ದಾರೆ.
ಕುವೈಟ್‌ನಲ್ಲಿ ಅತಂತ್ರರಾದವರಿಗೆ ಕಂಪೆನಿ ನೀಡಿದ ಬಾಡಿಗೆ ಮನೆಯನ್ನೇ ಮುಂದುವರಿಸಲಾಗಿದ್ದು ಜು. 17ರ ವರೆಗೆ ಇದರಲ್ಲಿ ತಂಗಲು ಮನೆಯ ಮಾಲಕರು ಒಪ್ಪಿಗೆ ನೀಡಿದ್ದಾರೆ. ಆದರೆ ಇದೀಗ ಜು. 17ರಂದು ಭಾರತಕ್ಕೆ ಮರಳಲು ಸಾಧ್ಯವಾಗದಿದ್ದರೆ ಮತ್ತೆ ಅವರಿಗೆ ವಸತಿ ಸಮಸ್ಯೆ ಎದುರಾಗುವ ಆತಂಕ ನಿರ್ಮಾಣವಾಗಿದೆ.