ಆಧುನಿಕತೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ತಾಂತ್ರಿಕತೆಯೂ ಬೆಳೆಯುತ್ತಿದೆ. ದೇಶದ ಪ್ರಧಾನಿಯೂ ನಾವು ಸ್ಮಾರ್ಟ್ ಆಗಿರಬೇಕು ಎನ್ನುವ ಕಾರಣಕ್ಕೆ ಕ್ಯಾಸ್‌ಲೆಸ್ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾದರು.
ಆದರೆ ನಗರದ ಬಹುತೇಕ ಇಲಾಖೆಗಳಲ್ಲಿ ಆನ್‌ಲೈನ್ ವ್ಯವಸ್ಥೆಗಳು ಇನ್ನೂ ಜಾರಿಗೆ ಬಂದಿಲ್ಲ. ಇತರ ದೇಶಗಳಿಗೆ ಹೋಲಿಸಿದರೆ ನಾವು ಇನ್ನೂ ತಾಂತ್ರಿಕವಾಗಿ ಹಿಂದುಳಿದಿದ್ದೇವೆ.ನೀರಿನ ಬಿಲ್, ತೆರಿಗೆ ಸೇರಿದಂತೆ ದಂಡ ತೆರಬೇಕಿದ್ದರೂ ಕಚೇರಿಗಳಿಗೆ ಅಲೆಯ ಬೇಕಾದ ಸ್ಥಿತಿ ಇನ್ನೂ ಇದೆ. ಅಂಗೈಯಲ್ಲೇ ಜಗತ್ತು ಇದೆ ಎಂದು ಹೇಳಿದರೂ ಕಚೇರಿಗಳಿಗೆ ತೆರಳಿ ಗಂಟೆಗಟ್ಟಲೆ ನಿಲ್ಲಬೇಕಾದ ಸ್ಥಿತಿ ಮಾತ್ರ ಇನ್ನೂ ಹೋಗಿಲ್ಲ.
ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ತೆರಬೇಕಾದ ದಂಡವನ್ನೂ ಪೊಲೀಸ್ ಠಾಣೆಗೆ ಹೋಗಿ ಕಟ್ಟಬೇಕಾಗಿದೆ. ತಾಂತ್ರಿಕವಾಗಿ ಅಭಿವೃದ್ಧಿಯತ್ತ ಸಾಗುತ್ತಿರುವ ದೇಶಕ್ಕೆ ಇದು ಒಂದು ಋಣಾತ್ಮಕ ಅಂಶವಾಗಿ ತೋರಲಿದೆ. ನೀರಿನ ಬಿಲ್ ಸೇರಿದಂತೆ ಎಲ್ಲ ಬಿಲ್‌ಗಳನ್ನು ಮನೆಯಲ್ಲಿಯೇ ಕುಳಿತು ಕಟ್ಟುವಂತಹ ವ್ಯವಸ್ಥೆ ಸೃಷ್ಟಿಯಾಗಬೇಕು. ಕ್ಯಾಶ್‌ಲೆಸ್ ವ್ಯವಹಾರಗಳು ಹೆಚ್ಚಾಗಬೇಕು. ಇದಕ್ಕಾಗಿ ಇತರ ದೇಶಗಳಂತೆ ಕಟ್ಟುನಿಟ್ಟಿನ ಆದೇಶಗಳು ಬರಬೇಕು. ಆನ್‌ಲೈನ್ ವ್ಯವಹಾರಗಳನ್ನು ಕಡ್ಡಾಯ ಮಾಡಿದಾಗ ಮೊದಮೊದಲು ಜನಸಾಮಾನ್ಯರಿಗೆ ಕೊಂಚ ಕಷ್ಟ ಎಂದು ತೋರಿದರೂ ದಿನಕಳೆದಂತೆ ಅವರೂ ತಾಂತ್ರಿಕವಾಗಿ ಬೆಳೆಯುವ ಸಾಧ್ಯತೆ ಇದೆ.
ನಗರಕ್ಕೆ ಪ್ರಥಮ ಬಾರಿಗೆ ಆಗಮಿಸುವ ಜನರಿಗೆ ದಾರಿ ತೋರಿಸುವ ಟ್ಯಾಬ್‌ಗಳನ್ನು ಮುಖ್ಯ ಭಾಗಗಳಲ್ಲಿ ಅಳವಡಿಸುವಂತಾಗಬೇಕು. ಎಲ್ಲ ಅಂಗಡಿ ಮುಂಗಟ್ಟುಗಳಲ್ಲೂ ಕ್ಯಾಶ್‌ಲೆಸ್ ವ್ಯವಸ್ಥೆಗಳನ್ನು ಕಲ್ಪಿಸುವಂತಿರಬೇಕು. ಇತರ ದೇಶಗಳಿಗೆ ಹೋಲಿಸಿದಾಗ ನಾವು ಇನ್ನಷ್ಟು ತಾಂತ್ರಿಕವಾಗಿ ಪರಿಣತಿ ಹೊಂದಬೇಕಾದ ಅನಿವಾರ್ಯತೆ ಇದೆ. ಕರಾವಳಿಯೂ ಪ್ರವಾಸೋದ್ಯಮಗಳಿಗೆ ತೆರೆದುಕೊಂಡಿದ್ದು, ಇತರ ಭಾಗಗಳ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ನಾವು ಇನ್ನಷ್ಟು ತಾಂತ್ರಿಕ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾಗಿದೆ.
– ಪ್ರಜ್ಞಾ ಶೆಟ್ಟಿ