Advertisement

ಕೊನೆಗೆ ಸಿಕ್ಕಿದ್ದು ಅಮ್ಮನ ಅಸ್ಥಿ!

07:55 AM Aug 08, 2017 | |

ಮುಂಬಯಿ: ವಯಸ್ಸಾದ ಪೋಷಕರನ್ನು ಏಕಾಂಗಿಯನ್ನಾಗಿಸಿ ಹಣ, ಉದ್ಯೋಗ, ಐಷಾರಾಮದ ಬೆನ್ನು ಹತ್ತಿ ವಿದೇಶ
ಗಳಿಗೆ ಹೋಗುವ ಮಕ್ಕಳ ಸಂಖ್ಯೆ ದೊಡ್ಡದಾಗುತ್ತಲೇ ಇದೆ. ಮನೆಯಲ್ಲಿ ಒಬ್ಬರೇ ಕೂತು ಮಕ್ಕಳ ದಾರಿ ಕಾಯುವ ಪೋಷಕರು ಅನುಭವಿಸುವ ಹಿಂಸೆ ಅವರ್ಣನೀಯ. ಮುಂಬಯಿನ ಏಕಾಂಗಿ ತಾಯಿಯೊಬ್ಬರ ಸಾವು ವೃದ್ಧ ಪೋಷಕರ ಸ್ಥಿತಿಗೆ ಸಾಕ್ಷಿ ಎಂಬಂತಿದೆ. 

Advertisement

ಉದ್ಯೋಗದ ನಿಮಿತ್ತ ಅಮೆರಿಕದಲ್ಲಿ ನೆಲೆಸಿದ್ದ ರಿತುರಾಜ್‌ ಸಹಾನಿ(43) ಭಾನು ವಾರ ಮುಂಬೈನ ಲೋಖಂಡ್‌ವಾಲದಲ್ಲಿ ತಮ್ಮ ತಾಯಿ ನೆಲೆಸಿದ್ದ ಅಪಾರ್ಟ್‌ಮೆಂಟ್‌ಗೆ ಹೋದಾಗ ಮನೆಯಲ್ಲಿ ತಾಯಿಯ ಬದಲು ಕಂಡಿದ್ದು ಆಕೆಯ ಅಸ್ಥಿಪಂಜರ. ಅಮೆರಿಕದಿಂದ ಆಗಮಿಸಿ ಮನೆ ಬಾಗಿಲು ಬಡಿದಾಗ ಒಳಗಿನಿಂದ ಚಿಲಕ ಹಾಕಿತ್ತು. ಎಷ್ಟೇ ಬಡಿದರೂ ಯಾರೂ ಬಾಗಿಲು ತೆರೆಯಲಿಲ್ಲ. ಕೊನೆಗೆ ಬಾಗಿಲು ಮುರಿದು ಒಳಹೋದಾಗ, ತಾಯಿ ಆಶಾ ಸಹಾನಿ (63)ಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಬಿದ್ದಿದ್ದು ಕಂಡು ಬಂದಿದೆ. ಆಶಾ ಬೆಲ್‌ಸ್ಕಾಟ್‌ ಟವರ್‌ ಅಪಾರ್ಟ್‌ಮೆಂಟ್‌ನಲ್ಲಿ 10ನೇ ಮಹಡಿಯಲ್ಲಿ ಒಬ್ಬರೇ ವಾಸವಿದ್ದರು. 2013ರಲ್ಲಿ ಅವರ ಪತಿ ನಿಧನರಾದ ಬಳಿಕ ಆಶಾ ಅಕ್ಷರಶಃ ಏಕಾಂಗಿಯಾಗಿದ್ದರು.

ರಿತುರಾಜ್‌ ತಮ್ಮ ಪತ್ನಿ ಸಮೇತ 1997ರಲ್ಲೇ ಅಮೆರಿಕಕ್ಕೆ ಹೋಗಿ ನೆಲೆಸಿದ್ದರು. ಆಶ್ಚರ್ಯವೇನೆಂದರೆ ರಿತುರಾಜ್‌ ಕಡೇ ಬಾರಿ ಅವರ ತಾಯಿಯೊಡನೆ ಮಾತನಾಡಿದ್ದು 2016ರ ಏಪ್ರಿಲ್‌ನಲ್ಲಿ. ಅವರೇ ಹೇಳಿರುವಂತೆ, ಕಡೇ ಬಾರಿ ಮಾತನಾಡುವಾಗ “ಮನೆಯಲ್ಲಿ ಒಬ್ಬಳೇ ಇರಲು ಕಷ್ಟವಾಗುತ್ತಿದೆ. ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸು’ ಎಂದು ಆಶಾ ಕೇಳಿಕೊಂಡಿದ್ದರಂತೆ. ಇದೀಗ ಮಗನಿಗೆ ಸಿಕ್ಕಿದ್ದು ಅಮ್ಮನ ಕಳೇಬರವನ್ನಷ್ಟೇ ನೋಡುವ ದೌರ್ಭಾಗ್ಯ!

Advertisement

Udayavani is now on Telegram. Click here to join our channel and stay updated with the latest news.

Next