Advertisement
ಹೈದರಾಬಾದ್ ಮೂಲದ ಎಂಜಿನಿಯರ್ ಶ್ರೀನಿವಾಸ್ ಕುಚಿಭೋಟ್ಲಾ (32) ರನ್ನು ಅಮೆರಿಕ ನೌಕಾಪಡೆಯ ನಿವೃತ್ತ ಯೋಧ ರೊಬ್ಬರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. “ಭಯೋತ್ಪಾದಕ’, “ನನ್ನ ದೇಶದಿಂದ ಹೊರ ಹೋಗು’ ಎಂದು ಕೂಗುತ್ತಾ 51 ವರ್ಷದ ಆ್ಯಡಮ್ ಪುರಿಂಟನ್ ಗುಂಡು ಹಾರಿಸಿದ ಪರಿಣಾಮ, ಶ್ರೀನಿವಾಸ್ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಅವರೊಂದಿಗಿದ್ದ ಗೆಳೆಯ ಅಲೋಕ್ ಮದಸಾನಿಗೂ ಗುಂಡೇಟು ತಗಲಿದ್ದು, ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇಲ್ನೋ ಟಕ್ಕೆ ಇದು ಜನಾಂಗೀಯ ದ್ವೇಷದ ಹಿನ್ನೆಲೆ ಯಲ್ಲಿ ನಡೆದ ಕೊಲೆ ಎಂದು ಹೇಳಲಾಗಿದೆ. ಆದರೆ, ಭಾರತೀಯ ಯುವಕರನ್ನು ಮಧ್ಯ ಪ್ರಾಚ್ಯ ದೇಶದಿಂದ ಬಂದ ವಲಸಿಗರು ಎಂದು ಭಾವಿಸಿ ಕೊಲೆ ಮಾಡಲಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ.
ಯನ್ನು ಖಂಡಿಸಿರುವ ಅಮೆರಿಕ ರಾಯ ಭಾರ ಸಂಸ್ಥೆ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ ಎಂದಿದೆ. ಹತ್ಯೆಗೆ ಟ್ರಂಪ್ ಕಾರಣ: ಎಚ್1ಬಿ1 ವೀಸಾ ನೀತಿಯನ್ನು ಮತ್ತಷ್ಟು ಕಠಿನಗೊಳಿಸಿ ಭಾರತೀಯ ಉದ್ಯೋಗಿಗಳ ಅಮೆರಿಕ ಕನಸನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಗ್ನ ಗೊಳಿಸಿದ ಬೆನ್ನಲ್ಲೇ ಇಂಥ ಘಟನೆ ಮತ್ತಷ್ಟು ಆತಂಕ ಮೂಡಿಸಿದೆ.
Related Articles
Advertisement
ಬೊಬ್ಬಿಡುತ್ತಾ ಗುಂಡಿಕ್ಕಿದ: ಕನ್ಸಾಸ್‌ನ ಒಲಾಥೆಯಲ್ಲಿರುವ ಜಿಪಿಎಸ್ ತಯಾರಕ ಗಾರ್ಮಿನ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿರುವ ಶ್ರೀನಿವಾಸ್ ಬುಧವಾರ ರಾತ್ರಿ ತನ್ನ ಗೆಳೆಯ ಮದಸಾನಿ ಜತೆ ಬಾರ್‌ಗೆ ತೆರಳಿದ್ದರು. ಅಲ್ಲಿಗೆ ಬಂದ 51 ವರ್ಷದ ನೌಕಾಪಡೆ ನಿವೃತ್ತ ಸಿಬಂದಿ, ಇವರೊಂದಿಗೆ ಮಾತಿನ ಚಕಮಕಿ ನಡೆಸಿದ್ದು, “ಭಯೋತ್ಪಾದಕ, ನನ್ನ ದೇಶದಿಂದ ತೊಲಗು’ ಎಂದು ಬೊಬ್ಬಿಡುತ್ತಾ ಏಕಾಏಕಿ ಗುಂಡು ಹಾರಿಸಿದ್ದಾನೆ. ಗುಂಡು ತಗುಲಿದ ಶ್ರೀನಿವಾಸ್ ಅಲ್ಲೇ ಮೃತಪಟ್ಟರೆ, ಮದಸಾನಿ ಗಾಯಗೊಂಡಿದ್ದಾರೆ. ಅಷ್ಟರಲ್ಲೇ, ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಘಟನೆ ನಡೆದ 5 ಗಂಟೆಯ ಬಳಿಕ ಅವರನ್ನು ಬಂಧಿಸಲಾಗಿದೆ.
ಸ್ವದೇಶಕ್ಕೆ ತರಲು ಹಣಸಂಗ್ರಹ: ಕುಚಿಭೋಟ್ಲಾ 2005ರಲ್ಲಿ ಹೈದರಾಬಾದ್‌ನ ಜವಾಹರ್‌ಲಾಲ್ ನೆಹರೂ ತಾಂತ್ರಿಕ ವಿವಿಯಲ್ಲಿ ಪದವಿ ಪಡೆದು, ಅನಂತರ ಟೆಕ್ಸಾಸ್ ವಿವಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರು. ಬಳಿಕ ಒಲಾಥೆಯ ಜಿಪಿಎಸ್ ಸಿಸ್ಟಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಪತ್ನಿ ಸುನಯನಾ ದುಮಾಲಾ ಕೂಡ ಇಲ್ಲೇ ಟೆಕ್ನಾಲಜಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ವೇಳೆ, ಶ್ರೀನಿವಾಸ್ ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಅಗತ್ಯವಾದ ಹಣ ಸಂಗ್ರಹಿಸಲು ಗೋಫಂಡ್‌ಮೀ ಎಂಬ ಪುಟವನ್ನು ತೆರೆಯಲಾಗಿದ್ದು, 8 ಗಂಟೆಗಳಲ್ಲಿ 2 ಲಕ್ಷ ಡಾಲರ್ ಮೊತ್ತ ಸಂಗ್ರಹವಾಗಿದೆ.
ಧೈರ್ಯ ತೋರಿದ ಯುವಕನಿಗೆ ಮೆಚ್ಚುಗೆ: ಶೂಟರ್ ಅನ್ನು ಹಿಡಿಯಲು ಅಮೆರಿಕದ 24ರ ಯುವಕನೊಬ್ಬ ಮಾಡಿದ ಯತ್ನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪುರಿಂಟನ್ ಗುಂಡು ಹಾರಿಸುತ್ತಲೇ ಮೇಜೊಂದರ ಕೆಳಗೆ ಇಯಾನ್ ಗ್ರಿಲ್ಲಟ್ ಅಡಗಿ ಕುಳಿತಿದ್ದ. ಅಲ್ಲಿ ಕೂತೇ ಆರೋಪಿಯ ಪಿಸ್ತೂಲ್‌ನಿಂದ ಹೊರಬಂದ ಗುಂಡುಗಳನ್ನು ಲೆಕ್ಕ ಹಾಕುತ್ತಿದ್ದ. ಗುಂಡುಗಳು ಮುಗಿದವು ಎಂದು ಗೊತ್ತಾಗುತ್ತಿದ್ದಂತೆಯೇ ಎದ್ದು, ಆರೋಪಿಯನ್ನು ಹಿಡಿಯಲು ಯತ್ನಿಸಿದ. ಆದರೆ, ಗುಂಡಿನ ಲೆಕ್ಕ ತಪ್ಪಿದ್ದು ಗ್ರಿಲ್ಲಟ್‌ಗೆ ಗೊತ್ತಾಗಿರಲಿಲ್ಲ. ಆರೋಪಿಯ ಪಿಸ್ತೂಲಲ್ಲಿ ಇನ್ನೂ ಒಂದು ಗುಂಡು ಬಾಕಿಯಿತ್ತು. ಅದು ಗ್ರಿಲ್ಲಟ್‌ನ ಕೈ ಮತ್ತು ಎದೆಯಲ್ಲಿ ನುಸುಳಿತು. ಈಗ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರೆ, ಅವನ ಧೈರ್ಯವನ್ನು ಮೆಚ್ಚಿ ಅನೇಕರು ಸಂದೇಶ ಕಳುಹಿಸಿದ್ದಾರೆ.