ಬೆಂಗಳೂರು: ಟೆಲಿಗ್ರಾಂ ಆ್ಯಪ್ ಮೂಲಕ ಟೆಕಿಯನ್ನು ಪರಿಚಯಿಸಿಕೊಂಡು ಮುಂಬೈ ಮೂಲದ ಯುವತಿ ಮೂಲಕ ಹನಿಟ್ರ್ಯಾಪ್ ಮಾಡುತ್ತಿದ್ದ ಮೂವರು ಪುಟ್ಟೇನಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪಾದರಾಯನಪುರ ನಿವಾಸಿ ಯಾಸೀನ್(35) ಮತ್ತು ಶರಣಪ್ರಕಾಶ್ ಬಳಿಗೇರ್(37) ಹಾಗೂ ಅಬ್ದುಲ್ ಖಾದರ್(40) ಬಂಧಿತರು. ಆರೋಪಿಗಳು ಪ್ರಮೋದ್ ಮಹಾಜನ್ ಪುರೋಹಿತ್ ಎಂಬುವರಿಗೆ ಹನಿಟ್ರ್ಯಾಪ್ ಮಾಡಿ 50 ಸಾವಿರ ರೂ. ಸುಲಿಗೆ ಮಾಡಿದ್ದರು. ಮುಂಬೈ ಮೂಲದ ಸ್ನೇಹ ಮತ್ತು ಬೆಂಗಳೂರಿನ ವಾಸೀಂ ಎಂಬುವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಪ್ರಮೋದ್, ಟೆಲಿಗ್ರಾಂ ಆ್ಯಪ್‌ನಲ್ಲಿ ಸಕ್ರಿಯವಾಗಿದ್ದರು. ಮತ್ತೂಂದೆಡೆ ಆರೋಪಿ ಯಾಸೀನ್, ತನಗೆ ಪರಿಚಯವಿದ್ದ ಇತರೆ ಆರೋಪಿಗಳ ಜತೆ ಚರ್ಚಿಸಿ ಟಿಲಿಗ್ರಾಂ ಆ್ಯಪ್‌ನಲ್ಲಿ ಮುಂಬೈನ ಸ್ನೇಹಳ ಫೋಟೋ ಹಾಕಿ ಕೆಲ ಯುವಕರನ್ನು ಖೆಡ್ಡಾಕ್ಕೆ ಬೀಳಿಸುತ್ತಿದ್ದ. ಆಗ ಪ್ರಮೋದ್ ಪರಿಚಯವಾಗಿದ್ದು, ಆತನೊಂದಿಗೆ ಸುಮಾರು ಒಂದು ತಿಂಗಳ ಕಾಲ ಚಾಟಿಂಗ್ ಮಾಡಿದ್ದಾಳೆ. ಬಳಿಕ ಪುಟ್ಟೇನಹಳ್ಳಿಯ ವಿನಾಯಕನಗರದ ಮನೆಗೆ ಬರುವಂತೆ ಹೇಳಿ, ಕೆಲ ದಿನಗಳ ಹಿಂದೆ ಕರೆಸಿಕೊಂಡಿದ್ದು, ಮನೆಗೆ ಬಂದ ಪ್ರಮೋದ್, ಬಟ್ಟೆ ತೆರೆದು ಕುಳಿತುಕೊಂಡಿದ್ದಾಗ ಏಕಾಏಕಿ ಇತರೆ ಆರೋಪಿಗಳು ನುಗ್ಗಿ, ಯುವತಿ ಜತೆ ಇರುವ ಫೋಟೋಗಳು ಮತ್ತು ವಿಡಿಯೋಗಳನ್ನು ಸೆರೆಹಿಡಿದುಕೊಂಡಿದ್ದಾರೆ. ಬಳಿಕ ಈ ವಿಡಿಯೋಗಳನ್ನು ಸಂಬಂಧಿಕರು ಮತ್ತು ಸ್ನೇಹಿತರಿಗೆ ಕಳುಹಿಸುತ್ತೇನೆ ಎಂದು ಬ್ಲ್ಯಾಕ್‌ಮೇಲ್ ಮಾಡಿ, ಸ್ಥಳದಲ್ಲೇ 50 ಸಾವಿರ ರೂ. ಅನ್ನು ಪೇಟಿಎಂ ಮೂಲಕ ಪಡೆದುಕೊಂಡಿದ್ದಾರೆ.
ಈ ಸಂಬಂಧ ಪ್ರಮೋದ್ ದೂರು ನೀಡಿದ್ದರು. ಇನ್ನು ಆರೋಪಿಗಳು ಈ ಹಿಂದೆಯೂ 3-4 ಮಂದಿಗೆ ಇದೇ ರೀತಿ ಹನಿಟ್ರ್ಯಾಪ್ ಮಾಡಿದ್ದು, 30 ಲಕ್ಷ ರೂ.ವರೆಗೆ ಹಣ ವಸೂಲಿ ಮಾಡಿದ್ದಾರೆ. ಈ ಸಂಬಂಧ ಸಂತ್ರಸ್ತರನ್ನು ಸಂಪರ್ಕಿಸಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು.