ಬೆಂಗಳೂರು: ಸಾಫ್ಟ್ವೇರ್ ಎಂಜಿನಿಯರ್‌ನನ್ನು ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಮುಂಬೈ ಮೂಲದ ಮಾಡೆಲ್ ಒಬ್ಬರನ್ನು ಪುಟ್ಟೇನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂಬೈ ಮೂಲದ ಸ್ನೇಹ ಅಲಿಯಾಸ್ ಮೆಹರ್‌ನನ್ನು ವಶಕ್ಕೆ ಪಡೆಯವಾಗಿದೆ. ಇದೇ ಪ್ರಕರಣದಲ್ಲಿ ಆ.1ರಂದು ಪಾದರಾಯನಪುರ ನಿವಾಸಿ ಯಾಸೀನ್(35) ಮತ್ತು ಶರಣಪ್ರಕಾಶ್ ಬಳಿಗೇರ್(37) ಹಾಗೂ ಅಬ್ದುಲ್ ಖಾದರ್(40) ಎಂಬವರನ್ನು ಬಂಧಿಸಲಾಗಿತ್ತು. ಆರೋಪಿಗಳು ಪ್ರಮೋದ್ ಮಹಾಜನ್ ಪುರೋಹಿತ್ ಎಂಬುವರಿಗೆ ಹನಿಟ್ರ್ಯಾಪ್ ಮಾಡಿ 50 ಸಾವಿರ ರೂ. ಸುಲಿಗೆ ಮಾಡಿದ್ದರು.
ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಪ್ರಮೋದ್, ಟೆಲಿಗ್ರಾಂ ಆ್ಯಪ್‌ನಲ್ಲಿ ಸಕ್ರಿಯವಾಗಿದ್ದರು. ಮತ್ತೂಂದೆಡೆ ಆರೋಪಿ ಯಾಸೀನ್, ತನಗೆ ಪರಿಚಯವಿದ್ದ ಇತರೆ ಆರೋಪಿಗಳ ಜತೆ ಚರ್ಚಿಸಿ ಟಿಲಿಗ್ರಾಂ ಆ್ಯಪ್‌ನಲ್ಲಿ ಮುಂಬೈನ ಸ್ನೇಹಾಳ ಫೋಟೋ ಹಾಕಿ ಕೆಲ ಯುವಕರನ್ನು ಖೆಡ್ಡಾಕ್ಕೆ ಬೀಳಿಸುತ್ತಿದ್ದ. ಆಗ ಪ್ರಮೋದ್ ಪರಿಚಯವಾಗಿದ್ದು, ಅವರ ಜತೆ ಚಾಟ್ ಮಾಡಿ, ‘ನನ್ನ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ನಾನು ಸೆಕ್ಸ್ ಮಾಡಲು ಸಂಗಾತಿಯನ್ನು ಹುಡುಕುತ್ತಿದ್ದೇನೆ ಎಂದು ಹೇಳಿ ತನ್ನ ಫೋಟೋ ಮತ್ತು ಲೋಕೇಷನ್ ಕಳುಹಿಸಿದ್ದಳು. ಅದರಂತೆ ಜೆ.ಪಿ.ನಗರದ 5ನೇ ಹಂತದ ಮನೆಗೆ ಬಂದಾಗ ಸ್ವಲ್ಪ ಹೊತ್ತಿನ ನಂತರ ಮೂವರು ಅಪರಿಚಿತರು ಬಂದು ನೀನು ಯಾರು ಇಲ್ಲಿಗೆ ಏಕೆ ಬಂದಿದ್ದೀಯಾ ಎಂದು ಹಲ್ಲೆ ನಡೆಸಿ ನಿನ್ನನ್ನು ಬೆತ್ತಲೆ ಮಾಡಿ ರಸ್ತೆಯಲ್ಲಿ ಓಡಿಸುತ್ತೇವೆ.
ಮಸೀದಿಗೆ ಕರೆದುಕೊಂಡು ಹೋಗಿ ನಿನಗೆ ಮುಂಜಿ ಮಾಡಿಸಿ ಮೆಹರ್‌ನೊಂದಿಗೆ ಮದುವೆ ಮಾಡಿಸುತ್ತೇವೆ ಎಂದು ಹೆದರಿಸಿ 3 ಲಕ್ಷ ರೂ. ಕೊಟ್ಟರೆ ನಿನ್ನನ್ನು ಬಿಟ್ಟು ಕಳುಹಿಸುತ್ತೇವೆ’ ಎಂದು ಹಣಕ್ಕೆ ಬೇಡಿಕೆ ಇಟ್ಟು ಪೋನ್ ಪೇ ಮೂಲಕ 21,500 ವರ್ಗಾವಣೆ ಮಾಡಿಕೊಂಡು, ಬಳಿಕ ನಿನ್ನ ಕ್ರೆಡಿಟ್ ಕಾರ್ಡ್‌ನಲ್ಲಿ 2.5 ಲಕ್ಷ ರೂ. ಕೊಡು ಎಂದು ಹೇಳಿದ್ದಾಗ ದೂರುದಾರರು ನನ್ನ ಕ್ರೆಡಿಟ್ ಕಾರ್ಡ್ ಮನೆಯಲ್ಲಿದೆ ಎಂದಾಗ ನಿನ್ನೊಂದಿಗೆ ನಾವು ಬರುತ್ತೇವೆ ಎಂದು ಹೊರಗಡೆ ಕರೆದುಕೊಂಡು ಹೋಗುವಾಗ ಅವರಿಂದ ತಪ್ಪಿಸಿಕೊಂಡು ಬಂದು ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಿದ್ದು, ಇನ್ನು ಆರೋಪಿಗಳು ಈ ಹಿಂದೆಯೂ 3-4 ಮಂದಿಗೆ ಇದೇ ರೀತಿ ಹನಿಟ್ರ್ಯಾಪ್ ಮಾಡಿದ್ದು, 30 ಲಕ್ಷ ರೂ.ವರೆಗೆ ಹಣ ವಸೂಲಿ ಮಾಡಿದ್ದಾರೆ. ಈ ಸಂಬಂಧ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು.