ಕೆ.ಆರ್.ಪುರ: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಬಗ್ಗೆ ಪ್ರಕರಣ ದಾಖಲಾಗುತ್ತಲೇ ಅಮೆರಿಕಗೆ ಪರಾರಿಯಾಗಲು ಯತ್ನಿಸಿದ ಆಂಧ್ರಪ್ರದೇಶ ಮೂಲದ ಸಾಫ್ಟ್ವೇರ್ ಇಂಜಿನಿಯರ್‌ನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರದೀಪ್ ಮೂಪರ್ತಿ ಬಂಧಿತ ಆರೋಪಿ. ಪ್ರದೀಪ್ ಹಾಗೂ ಆತನ ಪೊಷಕರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರದೀಪ್ ಪತ್ನಿ ನೀಡಿದ ದೂರಿನ ಅನ್ವಯ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ದಾಖಲಿಸಿದ ವಿಷಯ ತಿಳಿದ ಕೂಡಲೇ ತಲೆಮರೆಸಿಕೊಂಡಿದ್ದ ಆರೋಪಿ ಪ್ರದೀಪ್, ಅಮೆರಿಕಗೆ ತೆರಳಲು ನಿರ್ಧರಿಸಿದ್ದ. ಈ ಮಧ್ಯೆ ಪ್ರಕರಣ ಸಂಬಮಧ ರಚಿಸಿದ್ದ ವಿಶೇಷ ತಂಡ ಆತನನ್ನು ಬಂಧಿಸಿದೆ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಪ್ರಶಾಂತಿ ಹಾಗೂ ಸಂಜೀವ್‌ಕುಮಾರ್ ಜಾಮೀನು ಪಡೆದುಕೊಂಡಿದ್ದಾರೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪ್ರದೀಪ್, 3 ವರ್ಷಗಳ ಹಿಂದೆ ಅನೂಪಾ ಎಂಬುವವರನ್ನು ವಿವಾಹವಾಗಿದ್ದ. ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ಪ್ರದೀಪ್, ಆರಂಭದಲ್ಲಿ ಪತ್ನಿ ಜತೆ ಅನೂನ್ಯವಾಗಿದ್ದ. ಬಳಿಕ ಹಣಕ್ಕಾಗಿ ಕಿರುಕುಳ ನೀಡಲು ಆರಂಭಿಸಿದ್ದ.
ಇದಕ್ಕೆ ಆತನ ಅಕ್ಕ ಹಾಗೂ ಭಾವ ಉತ್ತೇಜನ ನೀಡುತ್ತಿದ್ದರು. ಜತೆಗೆ ಮೊದಲ ಪತ್ನಿಗೆ ವಿಚ್ಛೇದನ ನೀಡಿದ ವಿಷಯ ಮುಚ್ಚಿಟ್ಟು ತನ್ನನ್ನು ವಿವಾಹವಾಗಿದ್ದ ಎಂದು ಅನೂಪಾ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.