Advertisement

ಪಿಟ್ರಾನ್‍  ಫೋರ್ಸ್ ಎಕ್ಸ್ 10E: ಅಗ್ಗದ ದರದ ಉತ್ತಮ ಸ್ಮಾರ್ಟ್ ವಾಚ್‍

06:27 PM Aug 04, 2022 | Team Udayavani |

ಕೈಯಲ್ಲಿ ಸ್ಮಾರ್ಟ್‍ ವಾಚ್‍ ಧರಿಸುವುದು ಈಗಿನ ಟ್ರೆಂಡ್‍. ಅನೇಕರು ಆಪಲ್‍, ಸ್ಯಾಮ್‍ ಸಂಗ್‍ ಇತ್ಯಾದಿ ದುಬಾರಿ ಬ್ರಾಂಡ್‍ಗಳ ದುಬಾರಿ ಬೆಲೆಯ ವಾಚ್‍ಗಳನ್ನು ಧರಿಸುತ್ತಾರೆ.  ಇವು ಜನ ಸಾಮಾನ್ಯರ ಕೈಗೆ ನಿಲುಕುವಂಥದ್ದಲ್ಲ. ಒಂದರಿಂದ ಎರಡು ಸಾವಿರ ರೂ. ದರದಲ್ಲಿ ಮಾಮೂಲಿ ಅನಲಾಗ್ ವಾಚ್‍ ಕೊಳ್ಳುವ ಬದಲು ಒಂದು ಸ್ಮಾರ್ಟ್ ವಾಚ್‍ ಕೊಳ್ಳೋಣ ಅಂದುಕೊಳ್ಳುತ್ತಾರೆ. ಹೀಗೆ ಆರಂಭಿಕ ದರ್ಜೆಯಲ್ಲಿ ಪರಿಗಣಿಸಬಹುದಾದ ವಾಚ್‍ ಪಿಟ್ರಾನ್‍ ಫೋರ್ಸ್ ಎಕ್ಸ್ 10ಇ.  ಇದರ ದರ 1899 ರೂ. ಇದೆ. ಈಗ  ಅಮೆಜಾನ್‍. ಇನ್‍ ನಲ್ಲಿ ಆಫರ್‍ ನಲ್ಲಿ 1,299 ರೂ.ಗಳಿಗೆ ದೊರಕುತ್ತಿದೆ. ಈ ವಾಚು ಕಪ್ಪು, ನೀಲಿ ಹಾಗೂ ಪಿಂಕ್‍ ಬಣ್ಣದಲ್ಲಿ ಲಭ್ಯವಿದೆ. ಈ ವಾಚ್‍ನ ವೈಶಿಷ್ಟ್ಯಗಳನ್ನಿಲ್ಲಿ ನೀಡಲಾಗಿದೆ.

Advertisement

ವಿನ್ಯಾಸ: ಇದು ಚೌಕಾಕಾರದ ವಿನ್ಯಾಸ ಹೊಂದಿದೆ. 10.5 ಮಿ.ಮೀ. ನಷ್ಟು ತೆಳುವಾಗಿದೆ. ಲೋಹದ ಫ್ರೇಂ ಹೊಂದಿದೆ. ‍ಸ್ಟೀಲ್‍ ತಿರುಗಣೆ ನೀಡಲಾಗಿದೆ. ವಾಚ್‍ನ  ದೇಹ ಐಪಿ 68 ಧೂಳು, ಕೊಳೆ, ನೀರು ನಿರೋಧಕವಾಗಿದೆ. ವಾಚ್‍ನ ತೂಕ ಕೇವಲ 46 ಗ್ರಾಂ ಇದ್ದು, ಬಹಳ ಹಗುರವಾಗಿದೆ. ವಾಚ್‍ನ ದೇಹ ಲೋಹದ್ದಾಗಿರುವುದರಿಂದ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಇದರ ಬೆಲ್ಟ್‍ ಸಿಲಿಕಾನ್‍ ನದಾಗಿದ್ದು, ಅದರ ಗುಣಮಟ್ಟವೂ ಚೆನ್ನಾಗಿದೆ.  ವಾಚಿನ ಹಿಂಬದಿ (ಅಡಿಯಲ್ಲಿ) ನಾಡಿ ಮಿಡಿತ ಸೆನ್ಸರ್‍ ಇದೆ. ಒಂದು ಬದಿಯಲ್ಲಿ ಬ್ಯಾಟರಿ ಚಾರ್ಜರ್‍ ಅನ್ನು ಸಂಪರ್ಕಿಸುವ ಆಯಸ್ಕಾಂತೀಯ ಲೋಹವಿದೆ. ಈ ಬಜೆಟ್‍ ದರಕ್ಕೆ ವಾಚ್ ನ ವಿನ್ಯಾಸ ಚೆನ್ನಾಗಿಯೇ ಇದೆ.

ವಾಚಿನ ಕಾರ್ಯಾಚರಣೆಯನ್ನು ಫೋನಿನ ಮೂಲಕ ನಿಯಂತ್ರಿಸಲು ಮೊದಲಿಗೆ, ಪ್ಲೇಸ್ಟೋರ್‍ ನಲ್ಲಿ ಡಾ ಫಿಟ್‍ ಎಂಬ ಮೊಬೈಲ್‍ ಆಪ್‍ ಅನ್ನು ಇನ್‍ ಸ್ಟಾಲ್ ‍ಮಾಡಿಕೊಂಡು ಬ್ಲೂಟೂತ್‍ ಮೂಲಕ ಸಂಪರ್ಕಿಸಿಕೊಳ್ಳಬೇಕು. ಫೋನಿನ ಬ್ಲೂಟೂತ್ ಆನ್‍ ಮಾಡಿದಾಗ ಪಿಟ್ರಾನ್‍ ವಾಚ್‍ ಎಂಬುದು ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಒತ್ತಿದರೆ ಬಹಳ ಸುಲಭವಾಗಿ ಪೇರ್‍ ಆಗುತ್ತದೆ. ನಂತರ ನಮಗೆ ಬೇಕಾದ  ಆಯ್ಕೆಗಳನ್ನು ಫೋನಿನ ಮೂಲಕ ಒಮ್ಮೆ ಮಾಡಿಕೊಂಡರೆ ಸಾಕು. ಅದರ ಮೂಲಕ ವಾಚಿನ ಪರದೆಯ ಮೇಲೆ ನಿಮಗೆ ಬೇಕಾದ ಫೇಸ್‍ಗಳನ್ನು ಡೌನ್‍ಲೋಡ್‍ ಮಾಡಿಕೊಂಡು ಬಳಸಬಹುದು.  ಸುಮಾರು 300 ಕ್ಕೂ ಹೆಚ್ಚು ವಾಚನ್‍ ಫೇಸ್‍ ಗಳಿವೆ.  ಇದು ಬ್ಲೂಟೂತ್‍ 5.0 ಆವೃತ್ತಿ ಹೊಂದಿದೆ. ಈ ವಾಚನ್ನು ಆಂಡ್ರಾಯ್ಡ್ ಹಾಗೂ ಐಫೋನ್‍ ಎರಡಕ್ಕೂ ಸಂಪರ್ಕಿಸಬಹುದು.

ಪರದೆ: ಇದರ ಪರದೆ 1.7 ಇಂಚಿನ ಎಚ್‍ ಡಿ ಕಲರ್‍ ಡಿಸ್ ‍ಪ್ಲೇ ಹೊಂದಿದೆ. 240*280 ಪಿಕ್ಸಲ್‍ ರೆಸ್ಯೂಲೇಷನ್‍ ಇದೆ. ಪರದೆ ಸಂಪೂರ್ಣ ಟಚ್‍ ಸ್ಕ್ರೀನ್‍ ಆಗಿದೆ. ವಾಚಿನ ತಿರುಗಣೆ ಗುಂಡಿ ಒತ್ತಿದರೆ ವಾಚ್‍ ಪರದೆ ಆನ್‍ ಆಗುತ್ತದೆ. ಪರದೆಯ ಮೇಲೆ ಎಡಕ್ಕೆ ಸ್ವೈಪ್‍ ಮಾಡಿದರೆ ಮೆನು ಆಯ್ಕೆಗಳು ಕಾಣುತ್ತವೆ. ಬಲಕ್ಕೆ ಸ್ವೈಪ್‍ ಮಾಡಿದರೆ ಸ್ಪೋರ್ಟ್‍,  ಅಲಾರಾಂ,  ಹೃದಯ ಬಡಿತ ಮಾಪನ ಇತ್ಯಾದಿ ಆಯ್ಕೆಗಳು ಬರುತ್ತವೆ. ಮೇಲಿನಿಂದ ಕೆಳಕ್ಕೆ ಸ್ವೈಪ್‍ ಮಾಡಿದರೆ ಸೆಟಿಂಗ್‍, ಪರದೆಯ ಬ್ರೈಟ್‍ನೆಸ್‍,  ಟಾರ್ಚ್‍, ಸೆಟಿಂಗ್‍ ಆಯ್ಕೆ ಇತ್ಯಾದಿಗಳು ಬರುತ್ತವೆ.  ಕೆಳಗಿನಿಂದ ಮೇಲಕ್ಕೆ ಸ್ವೈಪ್‍ ಮಾಡಿದಾಗ ಫೋನಿಗೆ ಬಂದ ಮೆಸೇಜುಗಳನ್ನು ಓದಬಹುದು.

ಪರದೆಯ ಮೇಲೆ ಹವಾಮಾನ ನೊಟಿಫಿಕೇಷನ್‍, ಇನ್‍ಕಮಿಂಗ್‍ ಕಾಲ್‍ ಅಲರ್ಟ್‍, ಎಸ್‍ಎಂಎಸ್‍, ಸೋಷಿಯಲ್‍ ಮೀಡಿಯಾ ಅಲರ್ಟ್‍ ಮತ್ತಿತರ ನೊಟಿಫಿಕೇಷನ್‍ಗಳು ತೋರಿ ಬರುತ್ತವೆ. ಕೈಯನ್ನು ಮೇಲೆತ್ತಿದಾಗ ಡಿಸ್‍ಪ್ಲೇ ಆನ್‍ ಆಗುವ ಆಯ್ಕೆ ಮಾಡಿಕೊಳ್ಳಬಹುದು.

Advertisement

ಕಾರ್ಯಾಚರಣೆ: ಫೋನ್‍ ಕರೆ, ಮೆಸೇಜ್‍, ಫೇಸ್‍ಬುಕ್‍, ಟ್ವಿಟರ್‍, ವಾಟ್ಸಪ್‍, ಇನ್ ಸ್ಟಾ ಗ್ರಾಂ, ಸ್ಕೈಪ್‍, ಲೈನ್‍, ವಿಚಾಟ್‍ ಮತ್ತಿತರ ಸಾಮಾಜಿಕ ಜಾಲತಾಣಗಳ ನೊಟಿಫಿಕೇಷನ್‍ಗಳನ್ನು ವಾಚ್‍ನಲ್ಲೇ ನೋಡಬಹುದು.

ಎಷ್ಟು ದೂರ/ ನಿಮಿಷ ನಡೆದೆವು, ಓಡಿದೆವು, ಅದರಿಂದ ಎಷ್ಟು ಕ್ಯಾಲೋರಿ ನಷ್ಟವಾಯಿತು ಎಂಬುದರ ಮಾಹಿತಿ, ಎಷ್ಟು ಗಂಟೆ ನಿದ್ರಿಸಿದೆವು, ನಮ್ಮ ಹೃದಯ ಬಡಿತದ ವೇಗ ಎಷ್ಟಿದೆ? ಎಂಬುದನ್ನು ನಿಖರವಾಗಿ ತೋರಿಸುತ್ತದೆ. ಇದರಲ್ಲಿ ರಕ್ತದಲ್ಲಿನ ಆಮ್ಲಜನಕ ಮಟ್ಟ ಹಾಗೂ ರಕ್ತದ ಒತ್ತಡ ಮಾಪಕ ಸಹ ಇದೆ. ಆದರೆ ಕಂಪೆನಿಯೇ ಇದು ವೈದ್ಯಕೀಯ ಡಿವೈಸ್‍ ಅಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾಗಿ ಬ್ಲಡ್‍ ಆಕ್ಸಿಜನ್‍ ಹಾಗೂ ಬಿಪಿ ಮಾನಿಟರ್‍ ಬಗ್ಗೆ ನಾವು ಇದರ ಮಾಪನವನ್ನು ಸಂಪೂರ್ಣ ಅವಲಂಬಿಸಲಾಗದು.

ಅಲಾರಾಂ, ನೀರು ಕುಡಿಯುವ ಸೂಚನೆ, ಕುಳಿತಲ್ಲಿಂದ ಎದ್ದು ಚಟುವಟಿಕೆ ನಡೆಸುವ ಸೂಚನೆ  ತೋರಿಸುತ್ತದೆ.  ಹೆಣ್ಣು ಮಕ್ಕಳ ಪೀರಿಯಡ್ಸ್ ಮ್ಯಾನೇಜ್‍ಮೆಂಟ್‍ ಇತ್ಯಾದಿ ರಿಮೈಂಡರ್‍ ಗಳಿವೆ.

ಉಸಿರಾಟ ತರಬೇತಿ: ಇದರಲ್ಲಿರುವ ಇನ್ನೊಂದು ವಿಶೇಷವೆಂದರೆ ಬ್ರೆತ್ ಟ್ರೇನಿಂಗ್‍. ಈ ಆಯ್ಕೆಯನ್ನು ಒತ್ತಿದಾಗ ಎಷ್ಟು ಉಸಿರನ್ನು ಒಳಗೆ ಎಳೆದುಕೊಳ್ಳುತ್ತೇವೆ, ಎಷ್ಟನ್ನು ಹೊರಗೆ ಬಿಡುತ್ತೇವೆ ಎಂದು ಉಸಿರಾಟ ನಡೆಸುವ ಮೂಲಕ ನೋಡಬಹುದು. ಉಸಿರನ್ನು ಒಳಗೆ ಎಳೆದುಕೊಂಡಾಗ 8ರಲ್ಲಿ ಇಷ್ಟು ಉಸಿರನ್ನು ಎಳೆದುಕೊಂಡಿರಿ ಎಂದು 4, 5, 6, 7, 8 ಎಂದು ತೋರಿಸುತ್ತದೆ. ಹೊರ ಬಿಡುವ ಪ್ರಮಾಣವನ್ನು 8ಕ್ಕೆ ಇಷ್ಟು ಎಂದು ತೋರಿಸುತ್ತದೆ. ಇದರಿಂದ ನೀವು ಪ್ರಾಣಾಯಾಮ ಮಾಡುವಾಗ ನಿಗದಿತ ಪ್ರಮಾಣದ ಉಸಿರನ್ನು ಒಳಗೆ, ಹೊರಗೆ ಬಿಡುವುದನ್ನು ನಿಖರವಾಗಿ ಮಾಡಲು ಸಾಧ್ಯವಾಗುತ್ತದೆ.

ನಮಗೆ ಯಾವುದರ ನೊಟಿಫಿಕೇಷನ್‍ ಗಳು ಬೇಕೋ ಅವನ್ನು ಆನ್‍ ಮಾಡಿಕೊಂಡು ಬಳಸಬಹುದು. ಬೇಡವಾದುದನ್ನು ಆಫ್‍ ಮಾಡಬಹುದು.

ಬ್ಯಾಟರಿ: ಇದರ ಬ್ಯಾಟರಿ ಶಕ್ತಿಶಾಲಿಯಾಗಿದೆ. 250 ಎಂಎಎಚ್‍ ಬ್ಯಾಟರಿ ಇದ್ದು, ಒಮ್ಮೆ ಚಾರ್ಜ್‍ ಮಾಡಿದರೆ  10 ರಿಂದ 12 ದಿವಸ ಬಳಸಬಹುದು. ನೊಟಿಫಿಕೇಷನ್‍ ಗಳು ಬೇಡ ಬರಿ ವಾಚು ಕೈಯಲ್ಲಿದ್ದರೆ ಸಾಕು ಎಂದು ಫೋನಿನ ಬ್ಲೂಟೂತ್‍ ಗೆ ಕನೆಕ್ಟ್ ಮಾಡದೇ ಬಳಸಿದರೆ 20 ದಿನಗಳ ಕಾಲ ಬ್ಯಾಟರಿ ಬರುತ್ತದೆ.

ಒಟ್ಟಾರೆ ಇದೊಂದು ನೀವು ನೀಡುವ ಹಣಕ್ಕೆ ತಕ್ಕ ಮೌಲ್ಯ ನೀಡುವ ವಾಚ್‍. ಈ ದರಕ್ಕೆ ಇದರಲ್ಲಿ ಇಷ್ಟೊಂದು ಫೀಚರ್‍ ಗಳಿವೆಯಾ ಎಂದು ಅಚ್ಚರಿಯಾಗುತ್ತದೆ. 1000 ದಿಂದ 2000 ರೂ.ಗಳಲ್ಲಿ ಮಾಮೂಲಿ ಅನ್‍ಲಾಗ್‍ ವಾಚ್‍ ಕೊಳ್ಳುವವರು  ಅದರ ಬದಲು ಇದನ್ನು ಪರಿಗಣಿಸಬಹುದು.

-ಕೆ.ಎಸ್‍. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next