Advertisement

ಟೆಕ್‌, ಟೆಕ್‌, ಬರುತಿದೆ ಕಾಲ

10:12 AM Mar 04, 2020 | mahesh |

ತಂತ್ರಜ್ಞಾನ ಎಂದರೆ ಅದು ಟಿ.ವಿ, ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಇಷ್ಟೇ ಅಲ್ಲ. ನಾವು ತಿನ್ನುವ ಆಹಾರ, ಅದನ್ನು ಬೆಳೆಯುವ ವಿಧಾನ, ಬಳಸುವ ಪರಿಕರಗಳ ಸಂಶೋಧನೆ ಮಾಡುವುದು ಬಯೋಟೆಕ್ನಾಲಜಿ. ನಿಮ್ಮ ನಿರೀಕ್ಷೆಗಳು, ಅನಿವಾರ್ಯಗಳು ಹೆಚ್ಚಾದಂತೆ, ಈ ಕ್ಷೇತ್ರದ ಮೇಲಿನ ಅವಲಂಬನೆ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ, ಬಯೋಟೆಕ್‌ ಪದವೀಧರರಿಗೆ ಶುಭಕಾಲ ಶುರುವಾಗುತ್ತಿದೆ.

Advertisement

ಇವತ್ತು ಸಂಶೋಧನಾ ಕ್ಷೇತ್ರ ಎಷ್ಟು ವಿಸ್ತರಿಸಿದೆ ಎಂದರೆ, ನಮ್ಮ ಬದುಕಿನ ಎಲ್ಲ ಮಗ್ಗಲುಗಳನ್ನೂ ಸಂಶೋಧನೆಗೆ ಒಳಪಡಿಸುವಷ್ಟು. ಆಹಾರ, ಔಷಧ, ಇಂಧನ, ಕೃಷಿ, ಕೃಷಿ ಸಂಶೋಧನೆ ಹೀಗೆ ನಾನಾ ಕ್ಷೇತ್ರಗಳಲ್ಲಿ ಸಂಶೋಧನೆಯ ಕಬಂದ ಬಾಹುಗಳು ಬೆಳೆಯುತ್ತಿದೆ. ಹೀಗಾಗಿಯೇ, ಬಯೋ ಟೆಕ್ನಾಲಜಿ ಪದವೀಧರರನ್ನು ಅವಲಂಬಿಸುವ ಅನಿವಾರ್ಯ ದಿನೇ ದಿನ‌ ಹೆಚ್ಚಾಗುತ್ತಿರುವುದು. ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಬಯೋ ಟೆಕ್ನಾಲಜಿ ಪದವಿಗೆ ಹೇಳಿಕೊಳ್ಳುವಂಥ ಬೇಡಿಕೆ ಇರಲಿಲ್ಲ. ಇದ್ದ ಬೇಡಿಕೆಯೂ ಕುಸಿದಿದ್ದು ನಿಜ. ಆದರೆ, ಮತ್ತೆ ಈಗ ಗರಿಗೆದರುತ್ತಿದೆ. ಕಾರಣ ಇಷ್ಟೇ. ಬಯೋ ಟೆಕ್ನಾಲಜಿಗೆ ಬೇಕಾದ ವಾತಾವರಣ ಈಗ ಪೂರಕವಾಗಿದೆ. ಜಾಗತೀಕರಣದ ಪ್ರಭಾವದಿಂದಾಗಿ ಕ್ಷೇತ್ರಗಳ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ವಿಸ್ತರಣೆಯಾಗುತ್ತಿವೆ. ಅದಕ್ಕೆ ಬೇಕಾದದ್ದನ್ನು ಸಂಶೋಧಿಸಲು ಎಲ್ಲ ಕಂಪೆನಿಗಳಲ್ಲೂ ಒಂದೊಂದು ಆರ್‌ಎನ್‌ಡಿ ವಿಭಾಗ ತೆರೆಯುತ್ತಿದೆ. ಬಯೋ ಟೆಕ್ನಾಲಜಿಯಲ್ಲಿ ಇರುವುದೇ ಸಂಶೋಧನೆ ಅಂದರೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಬೇಕಾದ ತರಬೇತಿಗಳು ಇಲ್ಲಿ ದೊರೆಯಲಿದೆ.

ಇವತ್ತು ಸಂಶೋಧನೆ ಅಂದರೆ ಕೇವಲ ಮೊಬೈಲ್‌, ಕಂಪ್ಯೂಟರ್‌ ಹೀಗೆ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದು ಮಾತ್ರ ಅಂದು ಕೊಳ್ಳುವವರು ಇದ್ದಾರೆ. ಇದು ಹಾಗಲ್ಲ, ನಾವು ತಿನ್ನುವ ಆಹಾರ, ಬೆಳೆಯುವ ಉತ್ಪನ್ನಗಳು, ಅವುಗಳನ್ನು ಬೆಳೆಯಲು ಬೇಕಾದ ತಂತ್ರಜ್ಞಾನ ಕ್ಷೇತ್ರದಲ್ಲೂ ನವನವೀನ ಸಂಶೋಧನೆಗಳು ಆಗುತ್ತಿದೆ. ಉದಾಹರಣೆಗೆ, ಡ್ರಗ್‌, ವ್ಯಾಸಿನೇಷನ್‌, ಬಯೋಫ್ಯೂಯಲ್ಸ್‌ ಮತ್ತು ಮೆಡಿಕಲ್‌ ಎಕ್ವಿಪ್‌ಮೆಂಟ್‌, ಡಯೋಗ್ನಾಸ್ಟಿಕ್‌ ಮಿಷನರಿ ಮುಂತಾದ ಕ್ಷೇತ್ರಗಳು ಬೆಳೆಯುವತ್ತಿರುವ ವೇಗ ನೋಡಿದರೆ- ಇದರಲ್ಲಿ ಬಯೋ ಟೆಕ್ನಾಲಜಿಯ ಪಾಲೇ ದೊಡ್ಡದು ಅನಿಸದಿರದು. 20ನೇ ಶತಮಾನದ ಯಾವುದೇ ಸಮಸ್ಯೆಗೆ ಉತ್ತರ ಇರುವುದು ಈ ಕ್ಷೇತ್ರದಲ್ಲಿ. ಹೀಗಾಗಿ, ನಮ್ಮಲ್ಲಿ ಬಯೋಟೆಕ್ನಾಲಜಿ ಪದವಿ ಪಡೆದಿರುವವರಿಗೆ ಮತ್ತೆ ಮಾರ್ಕೆಟ್‌ ಸೃಷ್ಟಿಯಾಗುತ್ತಿದೆ. ಕೋರ್ಸ್‌ಗಳಿಗೆ ಜೀವ ಬರುತ್ತಿದೆ.

ಅರ್ಹತೆ
ಬಯೋಟೆಕ್ನಾಲಜಿ ಪದವಿ ಪಡೆಯುವ ಗುರಿ ಇದ್ದರೆ ಪದವಿ ಪೂರ್ವದಿಂದಲೇ ಯೋಜನೆ ಮಾಡಬಹುದು. ಇದರಲ್ಲಿ ಪದವಿ ಪೂರ್ವ, ಪದವಿ ಆನಂತರದ ಸ್ನಾತಕೋತ್ತರ ಪದವಿಗಳು ಉಂಟು. ಬಿಎಸ್‌ಸಿ ಪದವಿಯಲ್ಲಿ ಬಿ.ಟೆಕ್‌ ಅಥವಾ ಬಿಎಸ್‌ಎಸ್‌ ಇನ್‌ ಬಯೋ ಟೆಕ್ನಾಲಜಿ ಕೋರ್ಸ್‌ ಇದೆ. 12ನೇ ತರಗತಿ ಉತ್ತೀರ್ಣರಾಗಿರುವವರು ಈ ಪದವಿ ಅಧ್ಯಯನ ಮಾಡಬಹುದು. ಅದೇ ರೀತಿ, ಪಿಯುಸಿ ಆದ ನಂತರ 5 ವರ್ಷಗಳ ಕಾಲ ಅಧ್ಯಯನ ಮಾಡಿದರೆ ಎಂ.ಎಸ್‌.ಸಿ ಪದವಿ (ಇಂಟಗ್ರೇಟೆಡ್‌) ಕೂಡ ಪಡೆಯುವ ಅವಕಾಶ ಇದರಲ್ಲಿದೆ. ಎಂ.ಎಸ್‌.ಸಿ ಇನ್‌ ಬಯೋ ಟೆಕ್ನಾಲಜಿ, ಎಂಟೆಕ್‌ ಇನ್‌ ಬಯೋಟೆಕ್ನಾಲಜಿ ಪದವಿಗೆ ಸೇರಬೇಕಾದರೆ ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ನವದೆಹಲಿಯ ವಿವಿ ಬಯೋ ಟೆಕ್ನಾಲಜಿ ವಿಚಾರದಲ್ಲೇ ಡಾಕ್ಟರೇಟ್‌ ಕೊಡುತ್ತಿದೆ. ಕೃಷಿ ಕ್ಷೇತ್ರದಲ್ಲಿನ ಎಷ್ಟೋ ಹೊಸ ಆವಿಷ್ಕಾರದ ಮಾತೃ ಕೂಡ ಈ ಬಯೋಟೆಕ್ನಾಲಜಿಯೇ ಆಗಿದೆ. ಉದಾಹರಣೆಗೆ, ಬಿಟಿ ಕಾಟನ್‌ ಹೆಸರು ನೀವೂ ಕೇಳಿರಬಹುದು. ಇದರ ಜನಕ ಬಯೋಟೆಕ್ನಾಲಜಿಯೇ. ಹಾಗೆಯೇ ಬಯೋ ಫ‌ರ್ಟಿಲೈಸರ್‌ಗಳಲ್ಲಿ ಹೊಸ ಆವಿಷ್ಕಾರಗಳು ಆಗುವುದು ಕೂಡ ಬಯೋ ನೆರವಿನಿಂದಲೇ. ಹೀಗಾಗಿ, ಮೈಕ್ರೋ ಬಯಾಲಜಿ, ಸೆಲ್‌ ಬಯಾಲಜಿ, ಜೆನಿಟಿಕ್‌ ಬಯಾಲಜಿ ಮುಂತಾದ ಕ್ಷೇತ್ರಗಳ ಸಂಶೋಧನೆಯ ಮೂಲವೇ ಬಯೋಟೆಕ್ನಾಲಜಿ ಆಗಿದೆ.

ಎಲ್ಲೆಲ್ಲಿ ಕೆಲಸ
ಬಯೋಟೆಕ್ನಾಲಜಿ ಪದವೀಧರರಿಗೆ ಕೆಲಸದ ಚಿಂತೆ ಇಲ್ಲ. ಕೃಷಿ ಕ್ಷೇತ್ರ, ಆಹಾರ ಪೂರೈಕೆ, ಔಷಧ ವಲಯಗಳಲ್ಲಿ ಇವರಿಗೆ ಬೇಡಿಕೆ ಇದ್ದೇ ಇದೆ. ಇವತ್ತಿನ ನವನವೀನ ವಿಜ್ಞಾನ ಕ್ಷೇತ್ರ ವಿಸ್ತಾರಗೊಳ್ಳುತ್ತಿರುವುದರಿಂದ ಅವಕಾಶಗಳು ಹೆಚ್ಚಿವೆ. ಸಧ್ಯ ಸರ್ಕಾರಕ್ಕೂ ಕೂಡ ಒಳ್ಳೆ ತರಬೇತಿ ಪಡೆದ ಹಾಗೂ ಅನುಭವಿ ಬಯೋ ಟೆಕ್ನಾಲಜಿಸ್ಟ್‌ಗಳು ಬೇಕಾಗಿದ್ದಾರೆ. ಖಾಸಗಿ ಔಷಧ ಉತ್ಪಾದನಾ ಹಾಗೂ ಸಂಶೋಧನ ಲ್ಯಾಬೋರೇಟರಿಗಳು ಸಂಖ್ಯೆ ಕೂಡ ಹೆಚ್ಚಿದ್ದು ಅಲ್ಲೂ ಕೂಡ ಇವರಿಗೆ ಬೇಡಿಕೆ ಇದೆ. ಕೈಗಾರಿಕಾ ಕ್ಷೇತ್ರದಲ್ಲಿ- ಇಂಧನಕ್ಕೆ ಪರ್ಯಾಯವಾಗಿ ಸಾವಯವ ಇಂಧನವನ್ನು ಸಂಶೋಧಿಸಲು, ಹೊಸ ಹೊಸ ರೋಗಗಳಿಗೆ ಔಷಧ ಕಂಡು ಹಿಡಿಯಲು, ಪ್ರಾಕೃತಿಕ ಸಂಪನ್ಮೂಲಗಳನ್ನು ರಕ್ಷಿಸುವುದಕ್ಕೆ ಹೊಸ ತಂತ್ರಜ್ಞಾನ ಕಂಡು ಹಿಡಿಯಲು, ಇವತ್ತು ನಾವು ಸೇವಿಸುವ ಆಹಾರ ಅದರಿಂದ ಆಗುವ ಪರಿಣಾಮಗಳನ್ನು ಊಹಿಸಿ, ಅದಕ್ಕೆ ಸೂಕ್ತವಾದ ಪರಿಹಾರಗಳನ್ನು ಕಂಡು ಹಿಡಿಯಲು, ಲ್ಯಾಬರೋಟರಿಗಳಿಗೆ ಇವರ ಅವಶ್ಯಕತೆ ಇದೆ. ಹೀಗಾಗಿ, ಬಯೋ ಕೆಮಿಸ್ಟ್ರಿ, ಬಯೋ ಟೆಕ್ನಾಲಜಿ ಪದವೀಧರರನ್ನು ಗುತ್ತಿಗೆ ಆಧಾರದ ಮೇಲೂ ಹೆಚ್ಚಿನ ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಳ್ಳುವ ಕಂಪೆನಿಗಳ ಸಂಖ್ಯೆ ಹೆಚ್ಚುತ್ತಿವೆ.

Advertisement

ಎಲ್ಲೆಲ್ಲಿ ಕೋರ್ಸ್‌ಗಳು
ಮೈಸೂರಿನ ಯುವರಾಜ ಕಾಲೇಜ್‌, ಬೆಂಗಳೂರಿನ ಜೆಎಸ್‌ಎಸ್‌ ಅಕಾಡೆಮಿಕ್‌ ಆಫ್ ಹೈಯಲ್‌ ಎಜುಕೇಷನ್‌, ಸರ್ಕಾರಿ ವಿಜ್ಞಾನ ಕಾಲೇಜ್‌, ಜ್ಯೋತಿನಿವಾಸ ಕಾಲೇಜ್‌, ಸುರತ್ಕಲ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಹೀಗೆ, ಬಹುತೇಕ ಕಾಲೇಜುಗಳಲ್ಲಿ ಬಯೋಟೆಕ್ನಾಲಜಿ ಕೋರ್ಸ್‌ಗಳು ಇವೆ.

ಜಿಕೆ

Advertisement

Udayavani is now on Telegram. Click here to join our channel and stay updated with the latest news.

Next