ಬೆಂಗಳೂರು: ನಗರದಲ್ಲಿ ಉತ್ತಮ ಸಂಚಾರ ವ್ಯವಸ್ಥೆ ಕಲ್ಪಿಸಲು ಸಂಚಾರ ಪೊಲೀಸ್ ವಿಭಾಗ ಜತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಟ್ರಾಫಿಕ್ ಎಂಜಿಯರಿಂಗ್ ಸೆಲ್ (ಟಿಇಸಿ) ಕೈಜೋಡಿಸಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್ ತಿಳಿಸಿದರು.
“ಟ್ರಾಫಿಕ್ ಪೊಲೀಸರು ಕೇವಲ ಸಂಚಾರ ನಿಯಂತ್ರಕರು. ಅವರಿಗೆ ಸಂಚಾರ ವ್ಯವಸ್ಥೆಯ ಮೂಲಸೌಕರ್ಯ ಕಲ್ಪಿಸುವ ಅಧಿಕಾರ ಇಲ್ಲ. ರಸ್ತೆಗೆ ಸಂಬಂಧಿಸಿದಂತೆ ಪ್ರತಿಯೊಂದು ಕಾರ್ಯಕ್ಕೂ ಬೇರೆ ಇಲಾಖೆ ಮೊರೆಹೋಗಬೇಕು. ಇದರಿಂದ ಕೆಲಸ ಕೂಡ ವಿಳಂಬವಾಗುತ್ತದೆ. ಹೀಗಾಗಿ ಸಂಚಾರ ಪೊಲೀಸ್ ವಿಭಾಗಕ್ಕೆ ಸಂಬಂಧಿಸಿದ ಇತರೆ ಇಲಾಖೆಗಳನ್ನು ಒಂದೇ ಸೂರಿನಡಿ ಕಾರ್ಯನಿರ್ವಹಿಸುವಂತೆ ಮಾಡಿದರೆ ಸಾರ್ವಜನಿಕರಿಗೆ ಉತ್ತಮ ಸಂಚಾರ ವ್ಯವಸ್ಥೆ ಕಲ್ಪಿಸಬಹುದು’ ಎಂದರು.
ಸಂಚಾರ ಪೊಲೀಸರಿಂದಲೇ ನಗರದ ರಸ್ತೆಗಳ ಸರ್ವೇಗೆ ಸಿದ್ಧತೆ ನಡೆಸಲಾಗಿದ್ದು, ಯಾವ ರಸ್ತೆಗೆ ಏನು ಬೇಕು ಎಂಬುದರ ಅಧ್ಯಯನ ನಡೆಸಲು ಉದ್ದೇಶಿಸಿದ್ದು, ಪ್ರಮುಖವಾಗಿ ಹೆಚ್ಚು ಸಂಚಾರ ದಟ್ಟಣೆ ಹಾಗೂ ಅಪಘಾತಗಳು ಸಂಭವಿಸುತ್ತಿರುವ ಹೊಸೂರು, ಬನ್ನೇರುಘಟ್ಟ, ತುಮಕೂರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಮೈಸೂರು ರಸ್ತೆ, ಕೆ.ಆರ್.ಪುರ ರಸ್ತೆ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ, ಈ ಮಾರ್ಗಗಳಲ್ಲಿ ಬೇಕಾದ ಮೂಲಸೌಕರ್ಯಗಳ ಕುರಿತು ವರದಿಯೊಂದನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುತ್ತಿರುವ ರಸ್ತೆ ಅಪಘಾತ ಕುರಿತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಜತೆ ಚರ್ಚಿಸಲಾಗುವುದು ಎಂದರು.
ಅತಿಕ್ರಮಣ ತೆರವುಗೊಳಿಸಿ, ಪಾದಾಚಾರಿ ಮಾರ್ಗವನ್ನು ಮುಕ್ತಗೊಳಿಸುವುದೇ ದೊಡ್ಡ ಸವಾಲಾಗಿದೆ. ಈ ಕಾರ್ಯ ಸದ್ಯ ಆರಂಭವಾಗಿದ್ದು, ಇದರೊಂದಿಗೆ ನಗರದಲ್ಲಿ ಹತ್ತಾರು ಮಾರುಕಟ್ಟೆಗಳಿವೆ. ಅವುಗಳನ್ನು ತೆರವುಗೊಳಿಸುವುದರಿಂದ ಪೊಲೀಸರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ತಮ್ಮ ಅಧಿಕಾರದ ಇತಿಮಿತಿಯೊಳಗೆ ಕಾರ್ಯನಿರ್ವಹಿಸುತ್ತೇವೆ ಎಂದು ಹರಿಶೇಖರನ್ ಹೇಳಿದರು.
ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಿದೆ: ನಗರದಲ್ಲಿ ಪ್ರತಿನಿತ್ಯ 50-60 ಲಕ್ಷ ವಾಹನಗಳು ಸಂಚರಿಸುತ್ತವೆ. ಮುಂದಿನ ಕೆಲ ವರ್ಷಗಳಲ್ಲಿ ಅವುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಇನ್ನು ಐದು ವರ್ಷಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದಿದ್ದರೆ, ಭವಿಷ್ಯದಲ್ಲಿ “ಪಾರ್ಕಿಂಗ್ ವಾರ್’ ನಡೆಯುತ್ತದೆ. ಹೀಗಾಗಿ ಸಂಚಾರ ಪೊಲೀಸ್ ವಿಭಾಗದಿಂದ ನಗರದ ದೇವಸ್ಥಾನಗಳು, ಕಲ್ಯಾಣ ಮಂದಿರ, ಐನೂರಕ್ಕೂ ಹೆಚ್ಚು ಸಾರ್ವಜನಿಕರು ಸೇರುವ ಸ್ಥಳಗಳಲ್ಲಿರುವ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದರು.