Advertisement

ಕತಾರ್‌ನಲ್ಲಿ ಕನ್ನಡಿಗರ ಕಣ್ಣೀರಿನ ಕಥೆಗಳು

09:08 AM May 19, 2020 | Sriram |

ಬೆಂಗಳೂರು: ತನ್ನನ್ನು ಮರಳಿ ಕರೆದೊಯ್ಯಲಾಗದೆ ನೊಂದು ಇಹಲೋಕ ತ್ಯಜಿಸಿದ ಪತಿಯ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತೆಗೆದುಕೊಂಡು ಹೋಗಲು ಪರದಾಡುತ್ತಿರುವ ಪತ್ನಿ, ಮೃತ ಮಗನ ಮುಖವನ್ನು ಕೊನೆಯ ಬಾರಿ ನೋಡುವುದಕ್ಕೂ ಅಡ್ಡಿ ಯಾದ ಕ್ವಾರಂಟೈನ್‌, ತಂದೆಯ ಅಂತ್ಯಸಂಸ್ಕಾರ ದಲ್ಲಿ ಭಾಗವಹಿಸಲು ಆಗದೆ ಮಗನ ತೊಳಲಾಟ…!

Advertisement

– ಕೋವಿಡ್-19 ಕಾಲದಲ್ಲಿ ಕೊಲ್ಲಿ ದೇಶ ಕತಾರ್‌ನಲ್ಲಿ ಸಿಲುಕಿರುವ ಕನ್ನಡಿಗರ ಕಣ್ಣೀರಿನ ಕಥೆಗಳಿವು.ಇಂತಹ ನೂರಾರು ಪ್ರಕರಣಗಳನ್ನು ಈ ಲಾಕ್‌ಡೌನ್‌ ಅವಧಿಯಲ್ಲಿ ಕಾಣಬಹುದು.

ಕೇವಲ ಎರಡು ತಿಂಗಳ ಹಿಂದಿನ ಮಾತು. ಪತಿ ಮೈಸೂರಿನಲ್ಲಿ ಎಂಜಿನಿಯರ್‌, ಪತ್ನಿ ಕತಾರ್‌ನಲ್ಲಿ ವೈದ್ಯೆ. ಪತಿಯು ಮಡದಿಯನ್ನು ಕಾಣಲು ಕತಾರ್‌ಗೆ ತೆರಳಿದ್ದರು. ಇಬ್ಬರೂ ಜತೆಗೂಡಿ ಭಾರತಕ್ಕೆ ವಾಪಸಾಗೋಣ ಎಂದು ಪ್ರಯತ್ನಿಸಿದಾಗ ಪತಿಗೆ ವೀಸಾ ಸಿಕ್ಕಿತು; ಪತ್ನಿಗೆ ಸಿಗಲಿಲ್ಲ. ಇಬ್ಬರೂ ಜತೆಯಾಗಿ ಹೋಗೋಣ ಎಂದು ಪತಿ ಪಟ್ಟುಹಿಡಿದರು. ಇಷ್ಟರ ನಡುವೆ ಕೋವಿಡ್-19 ಕಾಲಿರಿಸಿತು, ಲಾಕ್‌ಡೌನ್‌ ಆಯಿತು. ಈಚೆಗೆ ಪತಿ ಅಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದರು. ಈಗ ಅವರ ಪಾರ್ಥಿವ ಶರೀರವನ್ನು ಮೈಸೂರಿಗೆ ತರಲು ಮಡದಿ ಪರದಾಡುತ್ತಿದ್ದಾರೆ.

ಪತ್ನಿಯ ಹೋರಾಟ
ಈಗಿರುವ ಲಾಕ್‌ಡೌನ್‌ ನಿಯಮಗಳ ಪ್ರಕಾರ ಬೇರೆಡೆ ಸಾವಿಗೀಡಾದ ವ್ಯಕ್ತಿಯ ಮೃತದೇಹವನ್ನು ಇನ್ನೊಂದೆಡೆಗೆ ಒಯ್ಯಲು ಅವಕಾಶವಿಲ್ಲ. ಮೇ 22ರಂದು ಕತಾರ್‌ನಿಂದ ಬೆಂಗಳೂರಿಗೆ ವಂದೇ ಭಾರತ ಮಿಷನ್‌ ಅಡಿ ವಿಮಾನ ಆಗಮಿಸಲಿದೆ. ಆದರೆ ಮೃತ ಪತಿಯ ಶವ ಸಾಗಿಸಲು ಪತ್ನಿಗೆ ಏರ್‌ ಇಂಡಿಯಾ ಅನುಮತಿ ನೀಡುತ್ತಿಲ್ಲ.

ಕಾಯುತ್ತಿರುವ ಗರ್ಭಿಣಿ
ಅದೇ ರೀತಿ ಬಿಝಿನೆಸ್‌ ವೀಸಾ ಮೇಲೆ ಕತಾರಿಗೆ ತೆರಳಿದ್ದ ವ್ಯಕ್ತಿಯ ವೀಸಾ ಅವಧಿ ಮುಗಿದ ಕಾರಣ ಕತಾರ್‌ನಿಂದ ಅವರು ಚಿಕ್ಕಮಗಳೂರಿಗೆ ಬಂದಿದ್ದಾರೆ. ಈಗ ಕತಾರ್‌ನಲ್ಲೇ ಇರುವ 33 ವಾರ ತುಂಬಿರುವ ಗರ್ಭಿಣಿಯು ಪತಿಗಾಗಿ ಕಾಯುತ್ತಿದ್ದಾರೆ. ಆದರೆ ಚಿಕ್ಕಮಗಳೂರಿನಲ್ಲಿ ಬಾಕಿಯಾಗಿರುವ ಪತಿಗೆ ವಾಪಸ್‌ ಹೋಗಲು ವಿಮಾನ ವ್ಯವಸ್ಥೆ ಇಲ್ಲ. ಇನ್ನೊಂದು ವಾರ ಕಳೆದರೆ ಗರ್ಭಿಣಿ ಪತ್ನಿಗೆ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲ.

Advertisement

ಮಗನ ಸಾವು ಕೇಳಿ ಕಂಗಾಲಾದ ತಂದೆ
ಕೋಲಾರದ ಶ್ರೀನಿವಾಸ ಗೌಡ ಕತಾರ್‌ನಲ್ಲಿದ್ದಾರೆ. ಅವರ ಮಗ ಸ್ನೇಹಿತರ ಜತೆ ಈಜಲು ಹೋಗಿ ಬಾವಿಯಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾನೆ. ಮಗನ ಸಾವಿನ ಸುದ್ದಿ ಕೇಳಿ ತಂದೆಗೆ ದಿಕ್ಕು ತೋಚ ದಂತಾಗಿದೆ. ಮಗನ ಅಂತ್ಯಸಂಸ್ಕಾರ ನಡೆದಿದ್ದರೂ ಶ್ರೀನಿವಾಸ ಗೌಡರು ವಿದೇಶದಿಂದ ಹಿಂದಿರುಗಲು ಹಿಂದೆಮುಂದೆ ನೋಡುವಂತಾಗಿದೆ. ಯಾಕೆಂದರೆ ಬಂದರೆ ಇಲ್ಲಿ ಕನಿಷ್ಠ 14 ದಿನ ಕ್ವಾರಂಟೈನ್‌ಗೆ ಒಳಪಡಬೇಕು.

ತಂದೆ ಸತ್ತಾಗಲೂ ಬರಲಾಗದ ಸ್ಥಿತಿ
ಕತಾರ್‌ನಲ್ಲಿ ಉದ್ಯೋಗಿಯಾಗಿರುವ ಆನಂದ ಕೃಷ್ಣಮೂರ್ತಿ ಎನ್ನುವವರ ತಂದೆ ಶನಿವಾರ ಅಪಘಾತ ದಲ್ಲಿ ಸಾವಿಗೀಡಾಗಿದ್ದಾರೆ. ಆದರೆ ಒಬ್ಬನೇ ಮಗನಾಗಿಯೂ ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಾಗದ ಸ್ಥಿತಿ ಆನಂದ ಕೃಷ್ಣಮೂರ್ತಿ ಅವರದು.

ಮಲೇಶ್ಯಾ ಕನ್ನಡಿಗರ
ರಕ್ಷಣೆಗೆ ಒತ್ತಾಯ
ಮಲೇಶ್ಯಾದಲ್ಲಿ ಸುಮಾರು 200 ಕನ್ನಡಿಗರು ಸಿಲುಕಿದ್ದಾರೆ. ಅವರಿಗೆ ರಾಜ್ಯಕ್ಕೆ ವಾಪಸಾಗಲು ಯಾವುದೇ ವ್ಯವಸ್ಥೆ ಇಲ್ಲ. ವಂದೇ ಭಾರತ ಮಿಷನ್‌ 2ರಲ್ಲಿ ಮಲೇಶ್ಯಾದಿಂದ ಬೆಂಗಳೂರಿಗೆ ಒಂದು ವಿಮಾನ ವ್ಯವಸ್ಥೆ ಕಲ್ಪಿಸಲಾಗಿದ್ದು, ಅದರಲ್ಲಿ ಕೇವಲ 50 ಜನ ಕನ್ನಡಿಗರಿಗೆ ಮಾತ್ರ ಅವಕಾಶ ದೊರಕಿದೆ. ಉಳಿದವರು ಇನ್ನಿತರ ರಾಜ್ಯದವರು. ಈ ಬಗ್ಗೆ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಕರೆ ಮಾಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಸಿಎಂ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಸದಾನಂದ ಗೌಡ ಕೂಡಲೇ ಗಮನಹರಿಸಬೇಕು ಎಂದು ಮಲೇಶ್ಯಾದಲ್ಲಿ ಸಿಲುಕಿರುವ ಕನ್ನಡಿಗರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next