Advertisement

“ನೂರಾರು ಕೋಟಿ ಸಂಪಾದಿಸಿದವರಿಂದ ಜೈಲಲ್ಲಿ ಕಣ್ಣೀರು’

11:26 PM Sep 13, 2019 | Team Udayavani |

ಬೆಂಗಳೂರು: “ಒಂದು ಕೋಟಿ ರೂ. ಕೂಡ ಇಲ್ಲದವರು ಇಂದು ನೂರಾರು ಕೋಟಿ ರೂ. ಆಸ್ತಿ ಘೋಷಿಸಿಕೊಂಡು ಜೈಲಿನಲ್ಲಿ ಕಣ್ಣೀರಿಡುತ್ತಿದ್ದಾರೆ. ಹಾಗಿದ್ದರೆ, ಜೀವನದಲ್ಲಿ ತೃಪ್ತಿ ಎಂದರೆ ಏನು? ಈ ಬಗ್ಗೆ ಅವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತೀಕ್ಷ್ಣವಾಗಿ ಹೇಳಿದರು. ನಗರದಲ್ಲಿ ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್‌) ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Advertisement

“ಅನೇಕ ಜನ ಸಾಕಷ್ಟು ಹಣ ಸಂಪಾದಿಸಿದ್ದಾರೆ. ಹಿಂದೆ ಒಂದು ಕೋಟಿಯೂ ಇಲ್ಲದವರು ಇಂದು 800 ಕೋಟಿ ರೂ. ಆಸ್ತಿ ಘೋಷಿಸಿಕೊಂಡು, ಈಗ ಜೈಲಿನಲ್ಲಿ ಕಣ್ಣೀರಿಡುತ್ತಿದ್ದಾರೆ. ಹಾಗಾಗಿ, ತೃಪ್ತಿ ಎಂದರೆ ಹಣ ಗಳಿಕೆ ಅಲ್ಲ. ನಿಮ್ಮಿಂದ (ಶಿಕ್ಷಕರಿಂದ) ಕಲಿತ ವಿದ್ಯಾರ್ಥಿಯು ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸುವುದು. ಇದೇ ಅಂತಿಮ ತೃಪ್ತಿ’ ಎಂದು ತಿಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್‌ ಜೋಶಿ, “ಡಿ.ಕೆ.ಶಿವಕುಮಾರ್‌ ಅವರು ರಾಜಕಾರಣಕ್ಕೆ ಬರುವ ಮೊದಲು ಹೊಂದಿದ್ದ ಆಸ್ತಿ ಎಷ್ಟಿತ್ತು? ಇಂದು ಎಷ್ಟಿದೆ ಎಂದು ಹೇಳಲಿ. ತಮ್ಮ ಆದಾಯದ ಮೂಲದ ಬಗ್ಗೆ ಮಾಹಿತಿ ನೀಡಿದರೆ, ಭಯಪಡುವ ಅವಶ್ಯಕತೆ ಇಲ್ಲ. ಅದು ಬಿಟ್ಟು, ಭಾವನಾತ್ಮಕವಾಗಿ ಜನರನ್ನು ಪ್ರಚೋದಿಸುವ ಕೆಲಸ ಸರಿ ಅಲ್ಲ’ ಎಂದರು.

“ಡಿ.ಕೆ.ಶಿವಕುಮಾರ್‌ ವಿರುದ್ಧ ನಡೆಯುತ್ತಿರುವ ವಿಚಾರಣೆಯನ್ನು ಕೆಲವರು ಜಾತೀಕರಣ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿಯೂ ಆ ಸಮುದಾಯದ ಶಾಸಕರು, ಜಿಲ್ಲಾ ಪಂಚಾಯ್ತಿ ಸದಸ್ಯರು ಮತ್ತಿತರ ಹುದ್ದೆಗಳಲ್ಲಿದ್ದಾರೆ. ಜಾತೀಕರಣ ಮಾಡುವುದು ಸರಿ ಅಲ್ಲ’ ಎಂದು ಹೇಳಿದರು.

ಕನ್ನಡದಲ್ಲಿ ಪರೀಕ್ಷೆ-ಚರ್ಚೆ: ಬ್ಯಾಂಕಿಂಗ್‌ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡುವ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಜತೆಗೆ ತಕ್ಷಣ ಚರ್ಚೆ ನಡೆಸುತ್ತೇನೆಂದು ಇದೇ ವೇಳೆ ಸಚಿವ ಜೋಶಿ ತಿಳಿಸಿದರು. ಈ ಹಿಂದೆ ಕನ್ನಡದಲ್ಲಿ ಬ್ಯಾಂಕಿಂಗ್‌ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ನಿರ್ಮಲಾ ಸೀತಾರಾಮನ್‌ ಹೇಳಿದ್ದರು. ಅದು ನನ್ನ ಗಮನಕ್ಕೂ ಬಂದಿದೆ. ಈಗ ಹಣಕಾಸು ಸಚಿವರೊಂದಿಗೆ ಈ ಕುರಿತು ಚರ್ಚಿಸಿ, ಮನವೊಲಿಸಲಾಗುವುದು ಎಂದರು.

Advertisement

ಎಚ್ಡಿಕೆ ಹೇಳಿಕೆಗೆ ತಿರುಗೇಟು: “ಚಂದ್ರಯಾನ 2 ಸಂಪರ್ಕ ಕಳೆದುಕೊಂಡಿದ್ದಕ್ಕೂ ಮತ್ತು ಇಸ್ರೋ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಗ ಮನಕ್ಕೂ ತಳಕು ಹಾಕಿರುವುದು ಮಾಜಿ ಮುಖ್ಯ ಮಂತ್ರಿಯ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ’ ಎಂದು ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ತಿರುಗೇಟು ನೀಡಿದರು. ಹೀಗೆ ತಳಕು ಹಾಕುವ ಮೂಲಕ ಪ್ರಧಾನಿ ಹಾಗೂ ಇಸ್ರೋ ವಿಜ್ಞಾನಿ ಗಳಿಗೆ ಕುಮಾರಸ್ವಾಮಿ ಅವಮಾನ ಮಾಡಿದ್ದಾರೆ ಎಂದರು.

ದೇಶದ ಹತ್ತು ರಾಜ್ಯಗಳಲ್ಲಿ ಈ ಬಾರಿ ನೆರೆ ಬಂದಿದೆ. ನೆರೆ ಹಾನಿ ಬಗ್ಗೆ ವರದಿ ಸಿದ್ಧಪಡಿಸಿದ ನಂತರ ಹಣ ಬಿಡುಗಡೆ ಆಗಲಿದೆ. ಕೇವಲ ಕರ್ನಾಟಕಕ್ಕೆ ಅಲ್ಲ; ನೆರೆಪೀಡಿತ ಉಳಿದ ರಾಜ್ಯಗಳಿಗೂ ಇನ್ನೂ ಪರಿಹಾರ ಬಿಡುಗಡೆ ಮಾಡಿಲ್ಲ.
-ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next