ನರಗುಂದ: ಇತಿಹಾಸದಲ್ಲೇ ಕಂಡರಿಯದ ಮಲಪ್ರಭಾ ನದಿ ಪ್ರವಾಹದಿಂದ ಹೊರ ಬಂದು ಸುಧಾರಿಸಿಕೊಳ್ಳುವ ಮುನ್ನವೇ ತಾಲೂಕಿನ ಕೊಣ್ಣೂರು ಜನರು ಮತ್ತೆ ತತ್ತರಿಸಿ ಹೋಗಿದ್ದಾರೆ.
ಮತ್ತೂಮ್ಮೆ ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿ ಕೊಣ್ಣೂರಿನ ಮುಕ್ಕಾಲು ಭಾಗ ಸುತ್ತುವರಿದಿದ್ದು, ಸಂತ್ರಸ್ತರ ನಿದ್ದೆಗೆಡಿಸಿದೆ.
ಶನಿವಾರ ಮಧ್ಯಾಹ್ನ ವೇಳೆಗೆ ಗ್ರಾಮದ ಹಳೆ ಬಸ್ ನಿಲ್ದಾಣ ಸನಿಹ ಆವರಿಸಿದ್ದ ಮಲಪ್ರಭಾ ನದಿ ನೀರು ರವಿವಾರ ಬೆಳಗಾಗುವ ಹೊತ್ತಿಗೆ ಗ್ರಾಮದ ಮುಕ್ಕಾಲು ಭಾಗ ಸುತ್ತುವರಿದು ಊರ ಅಂಚಿನಲ್ಲಿ ವಾಸವಾಗಿರುವ ಜನರ ನೆಮ್ಮದಿಗೆಡಿಸಿದೆ.
ಗೋಡೆಗಳು ಅದುರುತ್ತಿವೆ: ಪ್ರವಾಹ ನೀರು ಕೊಣ್ಣೂರು ಗ್ರಾಮದ ಅಂಚಿಗೆ ಬಂದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಎಡಭಾಗದ ಮನೆ, ಅಂಗಡಿಗಳ ಹಿಂಭಾಗ ಗೋಡೆಗಳಿಗೆ ಜಮಾಯಿಸಿದೆ. ಕಳೆದ ತಿಂಗಳು ಆವರಿಸಿದ ನೀರಿನಿಂದ ಗೋಡೆಗಳು ಅದುರುತ್ತಿದ್ದು, ಅಂಗಡಿ-ಮನೆಗಳು ಈಗ ಅಕ್ಷರಶಃ ಬೀಳುವ ಸ್ಥಿತಿಗೆ ಬಂದು ನಿಂತಿವೆ.
ರಾಘವೇಂದ್ರ ಸ್ವಾಮಿ ಮಠದತ್ತ ನೀರು: ಗ್ರಾಮದ ಬಲಗಡೆ ವಿರಕ್ತಮಠ, ಉರ್ದು ಶಾಲೆ ಬಳಿ ಜಮಾಯಿಸಿದ ನೀರು ಪಕ್ಕದ ಬೂದಿಹಾಳ ಗ್ರಾಮದವರೆಗೆ ಆವರಿಸಿದೆ. ಗ್ರಾಮದ ಬಲಗಡೆಗೆ ಸಾಕಷ್ಟು ಮನೆಗಳ ಅಂಚಿಗೆ ಪ್ರವಾಹ ಆವರಿಸಿದೆ. ಹೊಸ ಬಸ್ ನಿಲ್ದಾಣ ಬಳಿ ರಾಘವೇಂದ್ರ ಸ್ವಾಮಿ ಮಠದ ಗೋಡೆಗೆ ತಗುಲುವಷ್ಟು ನೀರು ಬಂದಿದೆ.
ಸುರಕ್ಷಿತ ಸ್ಥಳಗಳಲ್ಲಿ ಠಿಕಾಣಿ: ಪ್ರವಾಹ ಭೀತಿಯಿಂದ ಬಹಳಷ್ಟು ಗ್ರಾಮಸ್ಥರು ಸಾಮಾನು ಸರಂಜಾಮಿನೊಂದಿಗೆ ಊರಿನಿಂದ ಹೊರ ಬಂದು ಸುರಕ್ಷಿತ ಸ್ಥಳಗಳಲ್ಲಿ ಠಿಕಾಣಿ ಹೂಡಿದ್ದಾರೆ. ತೋಟಗಾರಿಕೆ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ. ಕೈಗೆ ಬಂದ ಬೆಳೆಗಳನ್ನು ಕಳೆದುಕೊಂಡ ಗ್ರಾಮಸ್ಥರು ಮಲಪ್ರಭಾ ನೆರೆಗೆ ಹಿಡಿಶಾಪ ಹಾಕುವಂತಾಗಿದೆ.
•ಸಿದ್ಧಲಿಂಗಯ್ಯ ಮಣ್ಣೂರಮಠ