Advertisement

ಧರಂ ಸತ್ತಾಗ ಕಣ್ಣೀರು ತಡೆಯಲಾಗಲಿಲ್ಲ

11:43 AM Jul 28, 2018 | |

ಬೆಂಗಳೂರು: “ನನ್ನ ತಂದೆ ಸತ್ತ ದಿನವೂ ನನಗೆ ಕಣ್ಣೀರು ಬಂದಿರಲಿಲ್ಲ. ಧರ್ಮಸಿಂಗ್‌ ಜತೆಗಿನ ಐವತ್ತು ವರ್ಷದ ಒಡನಾಟದಿಂದ ಆತ ಸತ್ತ ದಿನ ಕಣ್ಣೀರು ಬಂತು. ಸಂಸತ್‌ ಮುಂದೆಯೂ ಕಣ್ಣೀರು ಹಾಕಿದೆ…’ ಲೋಕಸಭೆ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಹಾಗೂ  ಧರ್ಮಸಿಂಗ್‌ ನಡುವಿನ ಸ್ನೇಹದ ಗಟ್ಟಿತನವನ್ನು ಸ್ಮರಿಸಿಕೊಂಡಿದ್ದು ಹೀಗೆ.

Advertisement

ಮಾಜಿ ಮುಖ್ಯಮಂತ್ರಿ ಡಾ.ಧರಂ ಸಿಂಗ್‌ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯ ದಿನ ನಗರದ ಅಂಬೇಡ್ಕರ್‌ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಧರಂ ಸಿಂಗ್‌ ಹಾಗೂ ನನ್ನದು ಐವತ್ತು ವರ್ಷಗಳ ಸ್ನೇಹ, 1969ರಲ್ಲಿ ನಾವಿಬ್ಬರೂ ಒಟ್ಟಿಗೆ ಕಾಂಗ್ರೆಸ್‌ ಸೇರಿದೆವು.

ಪಕ್ಷ ಹಾಗೂ ಸರ್ಕಾರದಲ್ಲಿ ಯಾವಾಗಲೂ ನಮ್ಮಿಬ್ಬರಿಗೂ ಸೀಟು ಕಾಯಂ ಆಗಿರುತ್ತಿದ್ದವು. 224 ಕ್ಷೇತ್ರಗಳಲ್ಲಿ ನಮ್ಮಿಬ್ಬರಿಗೆ ಸದಾ ಟಿಕೆಟ್‌ ಖಾತ್ರಿಯಾಗಿರುತ್ತಿತ್ತು. ಸಚಿವ ಸ್ಥಾನವೂ ಇಬ್ಬರಿಗೂ ಸಿಗುತ್ತಿತ್ತು. ಪಕ್ಷದ ಉನ್ನತ ಸ್ಥಾನಗಳೂ ಅಷ್ಟೇ, ನಾನು ಶಾಸಕಾಂಗ ಪಕ್ಷದ ನಾಯಕನಾದರೆ, ಅವರು ಪಕ್ಷದ ಅಧ್ಯಕ್ಷರಾದರು ಎಂದರು.

ಆದರೆ, ಮುಖ್ಯಮಂತ್ರಿ ಸ್ಥಾನ ಒಂದೇ ಇರುವುದರಿಂದ ಅವರು ಒಬ್ಬರೇ ಮುಖ್ಯಮಂತ್ರಿಯಾದರು. ಇದರಿಂದ ನನಗೇನೂ ಬೇಸರ ಆಗಲಿಲ್ಲ. ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ದೇವೇಗೌಡರನ್ನು ಭೇಟಿಯಾದಾಗ ಅವರು ನನಗೆ ನೀನು ನೇರವಾಗಿ ಮಾತನಾಡುತ್ತೀಯ ಆದ್ದರಿಂದ ಸಮ್ಮಿಶ್ರ ಸರ್ಕಾರ ನಡೆಸುವುದು ಕಷ್ಟವಾಗುತ್ತದೆ. ನಿನ್ನ ಸ್ನೇಹಿತ ಧರಂ ಸಿಂಗ್‌ ನಮ್ಮ ಮಾತು ಕೇಳುತ್ತಾರೆ.

ಅವರಿಗೆ ಬೆಂಬಲ ಸೂಚಿಸಿ ಎಂದರು. ಅವರ ಮಾತಿಗೆ ಒಪ್ಪಿಗೆ ಸೂಚಿಸಿ ಮನೆಗೆ ಬಂದೆ ಎಂದು ಹೇಳಿದರು. ಆ ನಂತರ ಧರಂ ಸಿಂಗ್‌ ನನ್ನ ಮನೆಗೆ ಬಂದು ದೇವೇಗೌಡರು ನನ್ನನ್ನು ಮುಖ್ಯಮಂತ್ರಿ ಮಾಡುತ್ತೇನೆ ಎನ್ನುತ್ತಿದ್ದಾರೆ. ಏನು ಮಾಡಲಿ ಎಂದು ಕೇಳಿದರು. ಆಯ್ತು ನೀನು ಮುಖ್ಯಮಂತ್ರಿಯಾಗು ಎಂದು ಹೇಳಿದ್ದೆ.

Advertisement

ಹಣಕಾಸು ಮತ್ತು ಲೋಕೋಪಯೋಗಿ ಎರಡೂ ಖಾತೆಯನ್ನು ದೇವೇಗೌಡರು ಕೇಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ. ಆಯ್ತು ಸರ್ಕಾರ ರಚನೆಯಾಗಲಿ ಎಂದು ಹೇಳಿದ್ದೆ. ನಮ್ಮಿಬ್ಬರ ನಡುವೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾವುದೇ ಕಿತ್ತಾಟ ಆಗಿಲ್ಲ ಎಂದು ನೆನಪುಗಳನ್ನು ಮೆಲುಕುಹಾಕಿದರು.

ಎಸ್‌.ಎಂ. ಕೃಷ್ಣ ಹಾಗೂ ಮಲ್ಲಿಕಾರ್ಜುನ ಖರ್ಗೆ ಸೇರಿ ಧರಂ ಸಿಂಗ್‌ ಸರ್ಕಾರವನ್ನು ಬೀಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಸುದ್ದಿಯಾಯಿತು. ಈಗ ಸ್ವತಃ ಕುಮಾರಸ್ವಾಮಿಯವರೇ ಧರಂ ಸಿಂಗ್‌ ಸರ್ಕಾರ ಕೆಡವಿದ್ದು ತಾವೇ ಎಂದು ಒಪ್ಪಿಕೊಂಡಿರುವ ಕಾರಣ ಎಲ್ಲರಿಗೂ ಸತ್ಯ ಗೊತ್ತಾಗುವಂತಾಯಿತು. ಆ ಮಾತನ್ನು ನಾನು ಹೇಳಿದರೆ ಜನ ಒಪ್ಪುತ್ತಿರಲಿಲ್ಲ ಎಂದು ಖರ್ಗೆ ತಿಳಿಸಿದರು.

ಧರಂ ಸರ್ಕಾರ ಬೀಳಲು ನಾನೇ ಕಾರಣ: “ಧರಂ ಸಿಂಗ್‌ ಸರ್ಕಾರವನ್ನು ಅನಿವಾರ್ಯ ಕಾರಣದಿಂದ ಉರುಳಿಸಬೇಕಾಯಿತು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಧರ್ಮಸಿಂಗ್‌ ಅವರ ಮೊದಲ ಪುಣ್ಯ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಆಗಿನ ಸಂದರ್ಭದಲ್ಲಿ ಅನಿವಾರ್ಯ ಕಾರಣದಿಂದ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ತೀರ್ಮಾನ ಕೈಗೊಳ್ಳಬೇಕಾಯಿತು’ ಎಂದರು.

“ನಾನು ಮುಖ್ಯಮಂತ್ರಿಯಾದ ನಂತರ ಧರಂ ಸಿಂಗ್‌ ಅವರನ್ನು ಭೇಟಿ ಮಾಡಲು ಅವಕಾಶ ಕೇಳಿದೆ. ಮನೆಗೆ ಕರೆದರು. ಅವರ ಮುಖದಲ್ಲಿ ಇವನಿಂದ ಅಧಿಕಾರ ಹೋಯಿತು ಎನ್ನುವ ಭಾವನೆ ಇರಲಿಲ್ಲ. ಅವರ ಸರ್ಕಾರ ಉರುಳಿಸಿರುವ ಬಗ್ಗೆ ವಿವರಣೆ ಕೊಡಲು ಹೋಗಿದ್ದೆ. ಇದೆಲ್ಲ ರಾಜಕಾರಣದಲ್ಲಿ ಸಾಮಾನ್ಯ ಎಂದು ಒಳ್ಳೆಯ ಆಡಳಿತ ನೀಡುವಂತೆ ಸಲಹೆ ನೀಡಿ ಕಳಿಸಿದ್ದರು,’ ಎಂದು ಸ್ಮರಿಸಿದರು.

ನಂತರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸತ್ತಿಗೆ ಹೋದಾಗ ಇಬ್ಬರಿಗೂ ಅಕ್ಕ ಪಕ್ಕದ ಕುರ್ಚಿಗಳನ್ನು ನೀಡಿದ್ದರು. ಆಗ ಅವರು ನನ್ನೊಂದಿಗೆ ತಮ್ಮ ಹಲವು ಅನುಭವಗಳನ್ನು ಹಂಚಿಕೊಂಡಿದ್ದು ಈಗಲೂ ನೆನಪಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಧರಂ ಸಿಂಗ್‌ ಅಜಾತ ಶತ್ರು. ಕಾಂಗ್ರೆಸ್‌ ಮಾತ್ರವಲ್ಲದೆ ಇತರ ಎಲ್ಲ ಪಕ್ಷಗಳ ನಾಯಕರ ಜತೆಗೂ ಅವರಿಗೆ ಉತ್ತಮ ಬಾಂಧವ್ಯವಿತ್ತು. ಧರಂ-ಖರ್ಗೆ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ, ಹೊರ ಪ್ರಪಂಚದಲ್ಲಿ ಒಂದಾಗೇ ಇರುತ್ತಿದ್ದರು.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

1998ರಲ್ಲಿ ಅಧ್ಯಕ್ಷರಾಗಿದ್ದ ಧರಂ ಸಿಂಗ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದರೆ ಅವರೇ ಸಿಎಂ ಆಗುತ್ತಿದ್ದರು. ಆದರೆ ಆಗ ಎಸ್‌.ಎಂ.ಕೃಷ್ಣ ಅಧ್ಯಕ್ಷರಾಗಿ ಚುನಾವಣೆ ಎದುರಿಸಿ, ಸಿಎಂ ಆದರು. ಈ ಬಗ್ಗೆ ಧರಂ ಸಿಂಗ್‌ ಬೇಸರ ಮಾಡಿಕೊಳ್ಳಲಿಲ್ಲ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ 

ನಮ್ಮಲ್ಲಿ ಆತ್ಮವಂಚನೆ ಹೆಚ್ಚಾಗಿದೆ. ಇದ್ದಾಗ ಒಂದು ಹೋದಾಗ ಮತ್ತೂಂದು ನಮ್ಮ ಸಂಸ್ಕಾರವಾಗಿದೆ.  ನಾನು ಮೊದಲು ಸ್ಪೀಕರ್‌ ಆಗಿದ್ದಾಗ ಅನುಭವ ಕಡಿಮೆ ಇತ್ತು ಹೆಚ್ಚು ಮಾತನಾಡುತ್ತಿದ್ದೆ. ಈಗ ಅನುಭವ ವಯಸ್ಸು ಎರಡೂ ಇದೆ. ಮಾತು ಕಡಿಮೆ ಮಾಡಿದ್ದೇನೆ. 
-ರಮೇಶ್‌ ಕುಮಾರ್‌, ವಿಧಾನಸಭೆ ಸ್ಪೀಕರ್‌

ಕಾಂಗ್ರೆಸ್‌ನಲ್ಲಿ ನಾನು, ಧರಂ ಸಿಂಗ್‌, ಖರ್ಗೆ ಸೆಟ್‌ ದೋಸೆಯಂತಲೇ ಖ್ಯಾತರಾಗಿದ್ದೆವು. ಆಗ ಇದ್ದಷ್ಟು ಒಗ್ಗಟ್ಟು ಎಂದೂ ಇಲ್ಲ. ಒಬ್ಬರು ಒಂದು, ಇನ್ನೊಬ್ಬರು ಮತ್ತೂಂದು ಹೇಳಿಕೆ ನೀಡುವುದು ಆ ಕಾಲದಲ್ಲಿ ಇರಲೇ ಇಲ್ಲ. ಇದು ಇಂದಿನ ಕಾಂಗ್ರೆಸ್ಸಿಗರಿಗೆ ಗೊತ್ತಾಗಬೇಕು.
-ಎಚ್‌.ಕೆ.ಪಾಟೀಲ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next