ವಾಡಿ: ಸಾಲದ ಸುಳಿಗೆ ಸಿಕ್ಕು ಸಾವು ಬರೆದುಕೊಂಡ ಅನ್ನದಾತನ ಕಷ್ಟದ ಬದುಕಿಗೆ ಕಾವ್ಯಗಳು ಕಂಬನಿ ಮಿಡಿದವು. ಮುನಿಸಿಕೊಂಡ ಮಳೆರಾಯನ ಕಟುಕ ಮನಸ್ಸನ್ನು ಖಂಡಿಸಿದವು ಅಕ್ಷರಗಳ ಸಾಲು. ಮೋಡ ಕವಿದ ಮುಗಿಲು ಕಂಡು ನಗುವ ರೈತನ ಭಾವ ಬಣ್ಣಿಸಿದವು ಕವಿಗಳ ಕವನಗಳು.
ಹೀಗೆ ಅನ್ನದಾತನ ಬದುಕಿನ ಕಷ್ಟಕಾರ್ಪಣ್ಯಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ರಾವೂರ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆ ಆವರಣದ ಹಸಿರು ಪರಿಸರದ ಮಧ್ಯೆ ವಲಯ ಕಸಾಪ ವತಿಯಿಂದ ಏರ್ಪಡಿಸಲಾಗಿದ್ದ ಮುಂಗಾರು ಕವಿಗೋಷ್ಠಿಯಲ್ಲಿ ನಡೆಯಿತು. ಸಾಲದಲ್ಲಿ ಬದುಕು, ಸಮಸ್ಯೆಗೆ ಆತ್ಮಹತ್ಯೆಯೇ ಅಲ್ಲ ಅಂತ್ಯದ ಥಳಕು.
ಮೌಡ್ಯದ ಮಾರಿಗೆ ಹರಕೆಯಾದ ಜೀವನ, ರೈತಣ್ಣನ ಶವದ ಮೇಲೂ ರಾಜಕೀಯದ ಗಾನ. ಹೀಗೆ ಭಾವ ತುಂಬಿದ ಹರಿತವಾದ ಅಕ್ಷರ ಸಾಲುಗಳ ಮೂಲಕ ಕೃಷಿಕನ ಬದುಕು ಬವಣೆ ಬಿಚ್ಚುಡುವ ಪ್ರಯತ್ನ ಮಾಡುವ ಮೂಲಕ ಯುವ ಕವಿಗಳು ಗಮನ ಸೆಳೆದರು.
ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎಚ್.ಬಿ. ತೀರ್ಥೆ ಮಾತನಾಡಿ, ರೈತ ದೇಶದ ಬೆನ್ನೆಲುಬು ಎಂದು ಬಣ್ಣಿಸುವ ಸರಕಾರದ ಪ್ರತಿನಿಧಿಗಳು, ರೈತಪರ ಯೋಜನೆ ಜಾರಿಗೆ ತರುವಲ್ಲಿ ಹಿಂದೇಟು ಹಾಕುತ್ತಾರೆ. ಅವರ ಕಷ್ಟಗಳ ನಿವಾರಣೆಗೆ ಮುಂದಾಗದೆ, ಬೆನ್ನ ಮೂಳೆ ಮೇಲೆ ನಡೆದಾಡಿ ನೆಲಕ್ಕೆ ಕುಸಿಯುವಂತೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶಕ್ಕೆ ಅನ್ನ ನೀಡುವ ಅನ್ನದಾತನ ಕುಟುಂಬ ಸದಸ್ಯರು ಹೊಟ್ಟೆಗೆ ಅನ್ನವಿಲ್ಲದೆ ಮರುಗುತ್ತಾರೆ. ನಮ್ಮದು ಸಾಲ ಮುಕ್ತ, ಶೋಷಣೆ ಮುಕ್ತ ರೈತರಿರುವ ನಾಡಾಗಬೇಕು. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವಂತಾಗಬೇಕು. ಕೃಷಿ ಇಲಾಖೆ ವತಿಯಿಂದ ವೈಜ್ಞಾನಿಕ ಬೇಸಾಯದ ಪದ್ಧತಿ ಹೇಳಿಕೊಡಬೇಕು ಎಂದು ಒತ್ತಾಯಿಸಿದ ಸಾಹಿತಿ ತೀರ್ಥೆ, ಮುಂಗಾರು ಬಾರದಿದ್ದರೆ ಬೆವರಿನ ಹನಿಗಳು ಸೂರ್ಯನ ಕೆಂಡಕ್ಕಿಂತಲೂ ಬಿಸಿಬಿಸಿ ಎಂಬ ತಮ್ಮ ಸ್ವರಚಿತ ಕವನದ ಸಾಲುಗಳನ್ನು ಹೇಳಿ ಗಮನ ಸೆಳೆದರು.
ಕಸಾಪ ತಾಲೂಕು ಅಧ್ಯಕ್ಷ ಕಾಶೀನಾಥ ಗುತ್ತೇದಾರ ಸಸಿಗೆ ನೀರುಣಿಸುವ ಮೂಲಕ ಕವಿಗೋಷ್ಠಿ ಉದ್ಘಾಟಿಸಿದರು. ಶರಣು ಜ್ಯೋತಿ, ಚನ್ನಬಸಪ್ಪ ಬಂಡೇರ, ಮಹೇಶ ಬಾಳಿ ಅತಿಥಿಗಳಾಗಿದ್ದರು. ಕವಿಗಳಾದ ಡಾ| ಮಲ್ಲಿನಾಥ ಎಸ್. ತಳವಾರ, ಮಂಜುನಾಥ ಜೆಡಿ, ರಾಜಶೇಖರ ಕಡಗನ, ಸಿದ್ದಲಿಂಗ ಬಾಳಿ, ವಿಕ್ರಮ ನಿಂಬರ್ಗಾ,
-ಸಂಗಣ್ಣ ಸಂಗಾವಿ, ರೇವಣಸಿದ್ದಯ್ಯ ವಲಂಡಿ, ರಾಜಶೇಖರ ಅಂಗಡಿ, ಈರಣ್ಣ ಕಲ್ಯಾಣಿ, ಮಲ್ಲಿಕಾರ್ಜುನ ಮದನಕರ ಸ್ವರಚಿತ ಕವನ ವಾಚಿಸಿದರು. ಇದಕ್ಕೂ ಮೊದಲು ಯುವ ಕವಿಗಳೆಲ್ಲರೂ ಬೇವಿನ ಸಸಿ ನೆಟ್ಟು ಪರಿಸರ ಕಾಳಜಿ ಮೆರೆದರು. ಚಂದ್ರಶೇಖರ ಕಲ್ಯಾಣಿ ನಿರೂಪಿಸಿ, ವಂದಿಸಿದರು.