ಬ್ರೆಡಾ (ಹಾಲೆಂಡ್): ಕಟ್ಟಕಡೆಯ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲೂ ಭಾರತಕ್ಕೆ ಅದೃಷ್ಟ ಕೈ ಕೊಟ್ಟಿದೆ.ಆಸ್ಟ್ರೇಲಿಯ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 1-3 ಗೋಲುಗಳಿಂದ ಎಡವಿದ ಶ್ರೀಜೇಶ್ ಪಡೆ ಪ್ರಶಸ್ತಿಯಿಂದ ವಂಚಿತವಾಗಿದೆ. ವಿಶ್ವದ ನಂ.1 ತಂಡ ಹಾಗೂ ಹಾಲಿ ಚಾಂಪಿಯನ್ ಕೂಡ ಆಗಿರುವ ಆಸ್ಟ್ರೇಲಿಯ ದಾಖಲೆ 15ನೇ ಸಲ ಕಿರೀಟ ಧರಿಸಿ ವಿಜೃಂಭಿಸಿದೆ.
ಭಾರೀ ಹೋರಾಟ ಕಂಡ ರವಿವಾರದ ಫೈನಲ್‌ನಲ್ಲಿ ಇತ್ತಂಡಗಳೂ ಒಂದೊಂದು ಗೋಲು ಬಾರಿಸಿ ಪೂರ್ಣಾವಧಿಯನ್ನು ಮುಗಿಸಿದ್ದವು. ಹೀಗಾಗಿ ಶೂಟೌಟ್ ಮೂಲಕ ಫಲಿತಾಂಶ ನಿರ್ಧರಿಸಬೇಕಾದ ಪರಿಸ್ಥಿತಿ ಎದುರಾಯಿತು. ಎರಡೂ ತಂಡಗಳಿಗೆ 5 ಶೂಟೌಟ್ ಅವಕಾಶ ನೀಡಿದಾಗ ಆಸ್ಟ್ರೇಲಿಯ ಇದನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿತು.
ನಿಗದಿತ ಅವಧಿಯಲ್ಲಿ ಮೊದಲ ಗೋಲು ಆಸ್ಟ್ರೇಲಿಯದ ಕಡೆಯಿಂದ ದಾಖಲಾಯಿತು. 24ನೇ ನಿಮಿಷದಲ್ಲಿ ಬ್ಲೇಕ್ ಗೋವರ್ ಆಕರ್ಷಕ ಡ್ರ್ಯಾಗ್‌ಫ್ಲಿಕ್ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿದರು. 42ನೇ ನಿಮಿಷದಲ್ಲಿ ವಿವೇಕ್ ಪ್ರಸಾದ್ ಅಮೋಘ ಫೀಲ್ಡ್ ಗೋಲ್ ಮೂಲಕ ಪಂದ್ಯವನ್ನು ಸಮಬಲಕ್ಕೆ ತಂದರು.ಶೂಟೌಟ್‌ನಲ್ಲಿ ಕಾಂಗರೂ ಪಡೆ 2-0 ಮುನ್ನಡೆ ಸಾಧಿಸಿದ ಬಳಿಕ ಮನ್‌ಪ್ರೀತ್ ಸಿಂಗ್ ಭಾರತದ ಖಾತೆ ತೆರೆದರಾದರೂ ಇದರಿಂದ ಯಾವುದೇ ಲಾಭವಾಗಲಿಲ್ಲ.2016ರ ಫೈನಲ್‌ನಲ್ಲೂ ಭಾರತ ಶೂಟೌಟ್‌ನಲ್ಲೇ ಆಸ್ಟ್ರೇಲಿಯಕ್ಕೆ ಶರಣಾಗಿತ್ತು. ಅಂತರ ಕೂಡ 1-3. ಅಂದು ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಗೋಲು ಹೊಡೆದಿರಲಿಲ್ಲ. ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿ ಇತಿಹಾಸಕ್ಕೆ ಜಾರಿದೆ. ಸತತ 2 ಸಲ ಫೈನಲ್ ತಲುಪಿ ರನ್ನರ್ ಅಪ್ ಆದುದಷ್ಟೇ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾರತದ ಸಾಧನೆ ಎನಿಸಿಕೊಂಡಿತು.