ನವದೆಹಲಿ: ಬೆಂಗಳೂರು ಮೂಲದ “ಟೀಮ್‌ಇಂಡಸ್’ ಸೋಮವಾರ ಗೂಗಲ್ ಪರದೆಯ ಮೇಲೆ ಆಕರ್ಷಕ ಗೀತೆಯೊಂದನ್ನು ಪ್ರಕಟಿಸಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಗುತ್ತಿರುವ 195 ಕೋಟಿ ಮೌಲ್ಯದ ಬಹುಮಾನದ ಗೂಗಲ್ ಲುನಾರ್ ಎಕ್ಸ್‌ಪ್ರೈಜ್ ಸ್ಪರ್ಧೆ ಹಿನ್ನೆಲೆಯಲ್ಲಿ ಗಮನ ಸೆಳೆಯಲು ಮುಂದಾಗಿದೆ.
ಚಂದ್ರನ ಅಂಗಳಕ್ಕೆ ಇಳಿಯುವ ಉಪಗ್ರಹ ತಯಾರಿಸುವ ಸ್ಪರ್ಧೆ ಇದಾಗಿದ್ದು, ಟೀಮ್‌ಇಂಡಸ್ ಈಗಾಗಲೇ ಈ ಯೋಜನೆಯ ಒಪ್ಪಂದಕ್ಕೆ ಸಹಿ ಮಾಡಿದೆ. ಭಾರತದ ಏಕೈಕ ತಂಡ ಇದಾಗಿದ್ದು, ಅದೂ ಬೆಂಗಳೂರಿನ ಮೂಲದ್ದಾಗಿರುವುದು ಹೆಮ್ಮೆಪಡುವ ಅಂಶವಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಟೀಮ್‌ಇಂಡಸ್ ಉಪಗ್ರಹ ಉಡಾವಣೆಗೂ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಷ್ಟೇ ಅಲ್ಲ, ಡಿಸೆಂಬರ್ 28ರಂದು ಉಡಾವಣೆ ಮಾಡುವ ಲೆಕ್ಕಾಚಾರದಲ್ಲಿದೆ.
ಇದೀಗ “ಗೂಗಲ್ ಚಂದ್ರ’ನ ಮೇಲೆ ಮೂಡಲು ಕ್ಷಣಗಣನೆ ಆರಂಭಿಸಿದ ಗೀತೆಯನ್ನು ಸಂಗೀತ ನಿರ್ದೇಶಕ ರಾಮ್ ಸಂಪತ್ ಸಂಯೋಜನೆ ಮಾಡಿದ್ದಾರೆ. ಸೋನಾ ಮೊಹಾಪಾತ್ರ ಮತ್ತು ಸನಮ್ ಗೀತೆಯನ್ನು ಹಾಡಿದ್ದಾರೆ ಎಂದು ಟೀಮ್‌ಇಂಡಸ್‌ನ ಮಾರುಕಟ್ಟೆ ಮುಖ್ಯಸ್ಥೆ ಶ್ರೀಲಿಕಾ ರವಿಶಂಕರ್ ಅವರು ತಿಳಿಸಿದ್ದಾರೆ.
ಟೀಮ್ ಇಂಡಸ್‌ನಲ್ಲಿ ಇಸ್ರೋದ 24 ನಿವೃತ್ತ ವಿಜ್ಞಾನಿಗಳೂ ಸೇರಿ 120 ಜನರಿದ್ದಾರೆ. ಸ್ಪರ್ಧೆಯ ಅಂತಿಮ ಐದು ಮಂದಿ ಸ್ಪರ್ಧಾಳುಗಳಲ್ಲಿ ಟೀಮ್‌ಇಂಡಸ್ ಕೂಡ ಒಂದಾಗಿದೆ. ಇಸ್ರೇಲ್‌ನ ಸ್ಪೇಸ್‌ಐಎಲ್, ಅಮೆರಿಕದ ಮೂನ ಎಕ್ಸ್‌ಪ್ರೆಸ್, ಜಪಾನ್‌ನ ಹಕುಟೋ ಹಾಗೂ ಅಂತಾರಾಷ್ಟ್ರೀಯ ಮನ್ನಣೆಯ ಸಿನರ್ಜಿ ಮೂನ್ ಸ್ಪರ್ಧೆಯಲ್ಲಿ ಉಳಿದುಕೊಂಡಿರುವ ಉಳಿದ ನಾಲ್ಕು ತಂಡಗಳಾಗಿವೆ.
ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗೆದ್ದವರು 129 ಕೋಟಿ ಮೌಲ್ಯದ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವರು. ಎರಡು ಮತ್ತು ಮೂರನೇ ಸ್ಥಾನ ಪಡೆದವರು ತಲಾ 32 ಕೋಟಿ ರೂ. ಮೌಲ್ಯದ ಪ್ರಶಸ್ತಿ ಗೆದ್ದುಕೊಳ್ಳುವರು.